ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು | ಜೆಜೆಎಂ: ಎಲ್ಲೆಡೆ ಕಳಪೆ ಕಾಮಗಾರಿ ದರ್ಶನ

3,699 ಗ್ರಾಮಗಳಲ್ಲಿ ಯೋಜನೆ ಜಾರಿ, ತೆವಳುತ್ತಾ ಸಾಗಿದ ಕಾಮಗಾರಿ l 20 ಮೀಟರ್‌ ಅಂತರದಲ್ಲಿ ಮೂರು ನಲ್ಲಿ! l ಕಳಪೆ ಕಾಮಗಾರಿ ಆರೋಪ
ಮೈಲಾರಿ ಲಿಂಗಪ್ಪ
Published 7 ಆಗಸ್ಟ್ 2024, 6:54 IST
Last Updated 7 ಆಗಸ್ಟ್ 2024, 6:54 IST
ಅಕ್ಷರ ಗಾತ್ರ

ತುಮಕೂರು: ಧೀರ್ಘಕಾಲ ಬಾಳಿಕೆ ಬಾರದ ಪ್ಲಾಸ್ಟಿಕ್‌ ಪೈಪ್‌ ಬಳಕೆ, ಕಾಮಗಾರಿ ಮುಗಿಯುವ ಮುನ್ನವೇ ಹಲವೆಡೆ ಒಡೆದು ಹೋದ ಪೈಪ್‌, ಕೆಲವೇ ದಿನಗಳಿಗೆ ಹಾಳಾದ ನಲ್ಲಿ, ಮುರಿದು ಚರಂಡಿ ಸೇರಿದ ‘ಮನೆ ಮನೆ ಗಂಗೆ’ ನಾಮಫಲಕ, ಪೈಪ್‌ಲೈನ್‌ ಕಾಮಗಾರಿಗಾಗಿ ಅಗೆದು ಹಾಗೆ ಬಿಟ್ಟಿರುವ ರಸ್ತೆ, ಒಂದೇ ಮನೆಗೆ ಎರಡು ನಲ್ಲಿ ಸಂಪರ್ಕ, ನಲ್ಲಿ ಅಳವಡಿಸಿ ವರ್ಷ ಕಳೆದರೂ ಬಾರದ ನೀರು.....

ಇದು ಜಲ ಜೀವನ್‌ ಮಿಷನ್‌ (ಜೆಜೆಎಂ) ಯೋಜನೆಯಡಿ ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಕಾಮಗಾರಿ ಸ್ಥಿತಿಗತಿಯ ಸಣ್ಣ ಪರಿಚಯ. ‘ಮನೆ ಮನೆಗೆ ಗಂಗೆ’ ಎಂದು ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ಪೂರೈಸಲು ಕೇಂದ್ರ ಸರ್ಕಾರ ರೂಪಿಸಿದ ಅತಿ ಮಹತ್ವಾಕಾಂಕ್ಷೆ ಯೋಜನೆ ಹಲವು ಕಡೆಗಳಲ್ಲಿ ಹಳ್ಳ ಹಿಡಿದಿದೆ. ‘ಕಾಮಗಾರಿಗೆ ಕಳಪೆ ಗುಣಮಟ್ಟದ ಪ್ಲಾಸ್ಟಿಕ್‌ ಪೈಪ್‌, ಇತರೆ ಸಾಮಗ್ರಿ ಬಳಸಿದ್ದು, ಕೆಲವೇ ದಿನಗಳಿಗೆ ಹಾಳಾಗುತ್ತಿದೆ. ಸರ್ಕಾರದ ಹಣ ಲೂಟಿ ಹೊಡೆಯುವ ಉದ್ದೇಶದಿಂದ ಕಳಪೆ ಕೆಲಸ ಮಾಡುತ್ತಿದ್ದಾರೆ’ ಎಂದು ಕೆ.ಪಾಲಸಂದ್ರ ಗ್ರಾಮದ ನಿವಾಸಿ ರಾಮಚಂದ್ರ ಆರೋಪಿಸುತ್ತಾರೆ.

ಪಾಲಸಂದ್ರ ಗ್ರಾಮ ಪಂಚಾಯಿತಿ ಕಟ್ಟಡದ ಮುಂಭಾಗದಲ್ಲೇ ಪೈಪ್‌ಲೈನ್‌ ಕಾಮಗಾರಿಗೆ ತೆಗೆದ ರಸ್ತೆಯನ್ನು ಸರಿಯಾಗಿ ಮುಚ್ಚಿಲ್ಲ. ಕಾಮಗಾರಿ ಮುಗಿದು ಹಲವು ದಿನಗಳು ಕಳೆದರೂ ನಲ್ಲಿಯಲ್ಲಿ ನೀರು ಬರುತ್ತಿಲ್ಲ. ಪಂಚಾಯಿತಿ ಕಟ್ಟಡಕ್ಕೆ ಹೊಂದಿಕೊಂಡಂತೆ ಇರುವ ಮನೆಗೆ 2 ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ. ಸುಮಾರು 20 ಮೀಟರ್‌ ಅಂತರದಲ್ಲೇ 3 ನಲ್ಲಿಗಳನ್ನು ಹಾಕಲಾಗಿದೆ.

ಪಾಲಸಂದ್ರ ಗ್ರಾ.ಪಂ ವ್ಯಾಪ್ತಿಯ ಕಿತ್ತಗಾನಹಳ್ಳಿ ಗ್ರಾಮದಲ್ಲಿ ಚರಂಡಿ ಮೇಲ್ಭಾಗದಲ್ಲಿ ಕಲ್ಲು ಬಂಡೆ ಹಾಸಿ ಪೈಪ್‌ಲೈನ್‌ ಕಾಮಗಾರಿ ನಡೆಸಲಾಗಿದೆ. ಮೊದಲೇ ಪ್ಲಾಸ್ಟಿಕ್‌ ಪೈಪ್‌ ಅಳವಡಿಸಿದ್ದು, ಅದು ಒಡೆದು ಹೋದರೆ ನಲ್ಲಿ ಮುಖಾಂತರ ಕಲುಷಿತ ನೀರು ಸರಬರಾಜು ಆಗುವ ಅಪಾಯ ಇದೆ. ಅಧಿಕಾರಿಗಳು ಮಾತ್ರ ಇದೆಲ್ಲವನ್ನೂ ಕಂಡೂ ಕಾಣದಂತೆ ಇದ್ದಾರೆ. ತಮ್ಮ ಪಂಚಾಯಿತಿಗೆ ನಿಗದಿ ಪಡಿಸಿದ ಗುರಿ ತಲುಪಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.

‘ಬೆಳಧರ ಗ್ರಾ.ಪಂ ಅಹೋಬಲ ಅಗ್ರಹಾರ ಗ್ರಾಮದ ಖಾಲಿ ಜಾಗದಲ್ಲಿ ನಲ್ಲಿ ಸಂಪರ್ಕ ಕಲ್ಪಿಸಿದ್ದು, ಜನ ವಾಸಿಸುವ ಮನೆಗಳನ್ನು ನಿರ್ಲಕ್ಷ್ಯ ಮಾಡಲಾಗಿದೆ. ಹತ್ತು, ಹದಿನೈದು ವರ್ಷಗಳಿಂದ ಕಂದಾಯ ಕಟ್ಟುವ ಮನೆಗಳಿಗೆ ನಲ್ಲಿ ಸಂಪರ್ಕವೇ ಇಲ್ಲ’ ಎಂದು ಗ್ರಾಮದ ನರಸಿಂಹಮೂರ್ತಿ ದೂರುತ್ತಾರೆ.

‘ಮನೆಯ ಹಿಂಭಾಗದಲ್ಲಿರುವ ತೋಟಗಳಿಗೆ ನೀರು ಬಿಡಲು ಜೆಜೆಎಂ ಅಡಿ ನಲ್ಲಿ ಸಂಪರ್ಕ ಕಲ್ಪಿಸಿಕೊಳ್ಳುತ್ತಿದ್ದಾರೆ. ಇತ್ತ ಸಾರ್ವಜನಿಕರಿಂದ ಹಣ ಪಡೆದು, ಮತ್ತೊಂದು ಕಡೆ ಯೋಜನೆಯ ಹಣವನ್ನೂ ಗುಳುಂ ಮಾಡುತ್ತಿದ್ದಾರೆ. ಯೋಜನೆ ಒಂದೆಡೆ ಕಳಪೆಯಾಗುತ್ತಿದ್ದರೆ, ಇನ್ನೊಂದು ಕಡೆ ದುರುಪಯೋಗ ಹೆಚ್ಚಾಗುತ್ತಿದೆ’ ಎಂದು ಮಾನಂಗಿ ಗ್ರಾಮಸ್ಥರು ಆರೋಪಿಸಿದರು.

ತಾಲ್ಲೂಕಿನ ಸ್ವಾಂದೇನಹಳ್ಳಿ ಗ್ರಾಮದಲ್ಲಿ ಜೆಜೆಎಂ ನಲ್ಲಿ ಸಂಪರ್ಕಕ್ಕೆ ಅಳವಡಿಸಿದ್ದ ಪೈಪ್‌ ಕೆಲವೇ ದಿನಗಳಿಗೆ ಹಾಳಾಗಿದೆ. ಕಾಮಗಾರಿ ಪರಿಚಯಿಸುವ ನಾಮಫಲಕ ಮುರಿದು ಚರಂಡಿ ಸೇರಿದೆ. ಇನ್ನೂ ಕೆಲವು ಕಡೆಗಳಲ್ಲಿ ಮನೆಯ ಗೋಡೆಗಳಿಗೆ ಪೈಪ್‌ ಅಳವಡಿಸಿ ನಲ್ಲಿ ಹಾಕಲಾಗಿದೆ. ಇಲ್ಲಿ ನಡೆದ ಕಾಮಗಾರಿ ಇಡೀ ಜೆಜೆಎಂ ಯೋಜನೆಗೆ ಕನ್ನಡಿ ಹಿಡಿದಿದೆ.

₹2 ಸಾವಿರ ಕೋಟಿ ವೆಚ್ಚ

ಜಿಲ್ಲೆಯಲ್ಲಿ ಜಲ ಜೀವನ್‌ ಮಿಷನ್‌ ಯೋಜನೆಗೆ ₹2,229 ಕೋಟಿ ವ್ಯಯಿಸಲಾಗುತ್ತಿದೆ. ನಾಲ್ಕು ಹಂತದಲ್ಲಿ ಜಿಲ್ಲೆಯ 3,699 ಗ್ರಾಮಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಗುರಿ ಹೊಂದಲಾಗಿದೆ. ಈ ಪೈಕಿ ಜುಲೈ ತಿಂಗಳ ಅಂತ್ಯಕ್ಕೆ 706 ಗ್ರಾಮಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆ. 1,510 ಹಳ್ಳಿಗಳಲ್ಲಿ ಕೆಲಸ ನಡೆಯುತ್ತಿದೆ. ಇನ್ನೂ ಹಲವು ಕಡೆಗಳಲ್ಲಿ ಕಾಮಗಾರಿ ಪ್ರಾರಂಭಿಸಬೇಕಿದೆ. ಜಿಲ್ಲೆಯಲ್ಲಿ ಯೋಜನೆಯ ಕಾಮಗಾರಿಗಳು ತೆವಳುತ್ತಾ ಸಾಗಿವೆ. ಕಾಮಗಾರಿ ಪೂರ್ಣಗೊಂಡ ಕಡೆ ನಿರ್ವಹಣೆ ಇಲ್ಲದೆ ನಲ್ಲಿ ಸಂಪರ್ಕ ಹಾಳಾಗುವ ಹಂತ ತಲುಪಿದೆ.

ಈ ಯೋಜನೆಯಡಿ ಕುಣಿಗಲ್‌ ತಾಲ್ಲೂಕಿನಲ್ಲಿ ಅಧಿಕ ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ವಿವಿಧೆಡೆ ಕಾಮಗಾರಿ ನಿಧಾನ ಗತಿಯಲ್ಲಿ ಸಾಗುತ್ತಿದೆ. ಪೈಪ್‌ಲೈನ್‌ ಕಾಮಗಾರಿ ಮುಗಿದ ನಂತರವೂ ನೀರು ಸರಬರಾಜು ಆಗುತ್ತಿಲ್ಲ.

‘ನೀರು ಬರಲ್ಲ’

ಜೆಜೆಎಂ ಯೋಜನೆಯಡಿ ಅಳವಡಿಸಿದ ನಲ್ಲಿಯಲ್ಲಿ ಸರಿಯಾಗಿ ನೀರು ಬರುತ್ತಿಲ್ಲ. ಪಂಚಾಯಿತಿ ವತಿಯಿಂದ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುತ್ತಿಲ್ಲ. ಪೈಪ್‌, ನಲ್ಲಿಗಳ ಗುಣಮಟ್ಟ ಗಮನಿಸಿದರೆ ತುಂಬಾ ದಿನ ಬಾಳಿಕೆ ಬರುವುಲ್ಲ. ಹಲವು ಕಡೆ ಕಾಮಗಾರಿ ಕಳಪೆಯಾಗಿದೆ - ಅಲ್ಲಾಭಕ್ಷ, ಮಾಜಿ ಉಪಾಧ್ಯಕ್ಷ, ಸ್ವಾಂದೇನಹಳ್ಳಿ ಗ್ರಾಮ ಪಂಚಾಯಿತಿ

‘ಯಾರೂ ಕೇಳಲ್ಲ’

ಕಾಮಗಾರಿ ಕಳಪೆಯಾದರೂ, ನೀರು ಬರದಿದ್ದರೂ, ಪೈಪ್‌ ಮುರಿದರೂ ಅಧಿಕಾರಿಗಳನ್ನು ಯಾರೂ ಕೇಳುವುದಿಲ್ಲ. ಪ್ರಶ್ನಿಸುವವರು ಇಲ್ಲ. ಇದರಿಂದ ಕಾಮಗಾರಿ ಕೆಲಸಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಗುಣಮಟ್ಟದಿಂದ ಕೂಡಿಲ್ಲ - ನಟರಾಜು, ಗ್ರಾಮಸ್ಥ, ಸ್ವಾಂದೇನಹಳ್ಳಿ

ಇದೊಂದು ಘಟನೆ ನೋಡಿ

ಗುಬ್ಬಿ ತಾಲ್ಲೂಕಿನ ಚೇಳೂರು ಹೋಬಳಿಯ ಮಠ ಗ್ರಾಮದಲ್ಲಿ ಕಳಪೆ ಗುಣಮಟ್ಟದ ಪೈಪ್‌ಲೈನ್ ಅಳವಡಿಸಲಾಗಿತ್ತು. ಪೈಪ್ ಅಳವಡಿಸಿದ ದೂರದ ಲೆಕ್ಕಾಚಾರದಲ್ಲೂ ಗೋಲ್‌ಮಾಲ್ ನಡೆದಿತ್ತು. ತೆಗೆದ ಗುಂಡಿಯನ್ನೂ ಮುಚ್ಚಿರಲಿಲ್ಲ. ಇದನ್ನು ಗಮನಿಸಿದ ಗ್ರಾ.ಪಂ ಸದಸ್ಯರು ಪ್ರಶ್ನಿಸಿದರು.

ಅಲ್ಲಿನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸರಿಪಡಿಸುವ ಭರವಸೆ ನೀಡಿದರು. ಆದರೂ ಕೆಲಸ ಮಾಡದಿದ್ದಾಗ ಸದಸ್ಯರು ಮತ್ತೆ ಪ್ರಶ್ನಿಸಿದರು. ಕೊನೆಗೆ ‘ಇದೆಲ್ಲ ಏಕೆ, ಸುಮ್ಮನಿದ್ದುಬಿಡಿ. ನಿಮಗೆ ಎಷ್ಟು ಕೊಡಬೇಕು ಹೇಳಿ’ ಎಂದು ವ್ಯವಹಾರ ಕುದಿರಿಸಲು ಮುಂದಾದರು. ಇದಕ್ಕೆ ಸದಸ್ಯರು ಒಪ್ಪದೆ ಕೆಲಸ ಮಾಡುವಂತೆ ತಾಕೀತು ಮಾಡಿದರು. ಒಂದಷ್ಟು ದಿನ ಸುಮ್ಮನಿದ್ದು, ಕೊನೆಗೆ ತೇಪೆ ಕೆಲಸಮಾಡಿ ಮುಗಿಸಿದರು. ಪ್ರಶ್ನಿಸಿ ಸುಸ್ತಾದವರು ಸಮ್ಮನಾದರು. ಜೆಜೆಎಂನಲ್ಲಿ ನಡೆದಿರುವ ಕಳಪೆ ಕಾಮಗಾರಿಗೆ ಇದೊಂದು ಉದಾಹರಣೆ ಮಾತ್ರ. ಪ್ರತಿ ಹಳ್ಳಿ, ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ವಸ್ತುಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಸಮಗ್ರವಾಗಿ ತನಿಖೆ ನಡೆಸಿ, ಕಳಪೆ ಕಾಮಗಾರಿಗೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಂಡರೆ ಮಾತ್ರ ಯೋಜನೆಯನ್ನು ಸರಿ ದಾರಿಯಲ್ಲಿ ತೆಗೆದುಕೊಂಡು ಹೋಗಲು ಸಾಧ್ಯವಾಗಲಿದೆ ಎಂಬ ಒತ್ತಾಯಗಳು ಕೇಳಿ ಬಂದಿವೆ.

ಸಾಕಷ್ಟು ಕಡೆಗಳಲ್ಲಿ ಒಂದು ಕಿ.ಮೀ ಪೈಪ್ ಅಳವಡಿಸಿ, ನಾಲ್ಕು ಕಿ.ಮೀ ಲೆಕ್ಕ ತೋರಿಸಲಾಗಿದೆ. ಗುಣಮಟ್ಟದ ಪೈಪ್ ಬದಲಿಗೆ, ಕಳಪೆ ಗುಣಮಟ್ಟದ ಪೈಪ್ ಅಳವಡಿಸಿದ್ದು, ಕೆಲವೇ ದಿನಗಳಲ್ಲಿ ಹಾಳಾಗಲಿವೆ. ಭೂಮಿಯ ಆಳದಲ್ಲಿ ಅಳವಡಿಸಬೇಕಾದ ಪೈಪ್ ರಸ್ತೆ ಮೇಲೆ ಕಾಣುತ್ತಿದೆ. ಒಂದು ಚಿಕ್ಕ ವಾಹನ ಸಂಚರಿಸಿದರೂ ಪೈಪ್ ಒಡೆದು ಹಾಳಾಗುತ್ತದೆ. ಮಣ್ಣಿನಲ್ಲಿ ಹಾಕಿರುವ ಪೈಪ್ ಗುಣಮಟ್ಟ ಯಾರಿಗೂ ಕಾಣಿಸುವುದಿಲ್ಲ. ನಲ್ಲಿ ಗುಣಮಟ್ಟ ಕೇಳುವಂತೆಯೇ ಇಲ್ಲ ಎಂಬ ಆರೋಪ ಪ್ರತಿ ಗ್ರಾಮದಲ್ಲೂ ಕೇಳಿ ಬಂದಿದೆ.

ಗ್ರಾಮ ಪಂಚಾಯಿತಿ ಸದಸ್ಯರು, ಸಾರ್ವಜನಿಕರು ಪ್ರಶ್ನಿಸಿದ ಕಡೆಗಳಲ್ಲಿ ಅಲ್ಪಸ್ವಲ್ಪ ಗುಣಮಟ್ಟದ ಕೆಲಸ ನಡೆದಿದೆ. ಅದನ್ನು ಹೊರತುಪಡಿಸಿದರೆ ಬಹುತೇಕ ಕಡೆಗಳಲ್ಲಿ ಗುಣಮಟ್ಟದ ಕಾಮಗಾರಿ ನಡೆದಿಲ್ಲ. ಇದೊಂದು ಹಣ ಕೊಳ್ಳೆ ಹೊಡೆಯುವ ಯೋಜನೆಯಾಗಿದೆ. ಜೆಜೆಎಂನಲ್ಲಿ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಲಕ್ಷಾಂತರ ರೂಪಾಯಿ ಅಕ್ರಮಗಳು ನಡೆದಿವೆ. ಅಧಿಕಾರಿಗಳು, ಗುತ್ತಿಗೆದಾರರ ಜೇಜು ಚೆನ್ನಾಗಿ ಭರ್ತಿಯಾಗಿದೆ. ಜನರಿಗೆ ಅನುಕೂಲ ಆಗುವಂತಹ ಕೆಲಸಗಳು ನಡೆದಿಲ್ಲ ಎಂದು ಗ್ರಾ.ಪಂ ಸದಸ್ಯ ರಾಜು ಆರೋಪಿಸುತ್ತಾರೆ.

ಗ್ರಾಮ ಪಂಚಾಯಿತಿ ಹಂತದಿಂದ ಹಿಡಿದು ತಾಲ್ಲೂಕು, ಜಿಲ್ಲಾ ಪಂಚಾಯಿತಿವರೆಗೆ ಹಾಗೂ ಜನಪ್ರತಿನಿಧಿಗಳಿಗೆ ಯೋಜನೆಯಲ್ಲಿ ಭಾರಿ ಅಕ್ರಮ ನಡೆಯುತ್ತಿದೆ ಎಂಬುದು ಗೊತ್ತಿದೆ. ಆದರೆ ಯಾರೊಬ್ಬರೂ ಕ್ರಮ ಕೈಗೊಳ್ಳುತ್ತಿಲ್ಲ. ಇಂತಹದೊಂದು ದೊಡ್ಡ ಹಗರಣ ಜಿಲ್ಲೆಯಲ್ಲಿ ಈವರೆಗೂ ನಡೆದಂತೆ ಕಾಣುತ್ತಿಲ್ಲ. ಈ ಬಗ್ಗೆ ಸಮಗ್ರವಾದ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸುತ್ತಾರೆ.

ಈವರೆಗೆ ನಡೆದಿರುವ ಪ್ರತಿ ಕಾಮಗಾರಿಯನ್ನು ಮೂರನೇ ವ್ಯಕ್ತಿಯಿಂದ ಪರಿಶೀಲನೆಗೆ ಒಳಪಡಿಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಇನ್ನು ಮುಂದೆ ಬಿಲ್ ಪಾವತಿಗೂ ಮುನ್ನ ಮೂರನೇ ವ್ಯಕ್ತಿ ಪರಿಶೀಲಿಸಿ ದೃಢಪಡಿಸಿದ ನಂತರ ಹಣ ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT