ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಧುಗಿರಿ | ನೆಪಮಾತ್ರಕ್ಕೆ ನಲ್ಲಿ: ತೊಟ್ಟಿಕ್ಕದ ನೀರು

ಟಿ.ಪ್ರಸನ್ನಕುಮಾ‌ರ್
Published : 10 ಆಗಸ್ಟ್ 2024, 6:37 IST
Last Updated : 10 ಆಗಸ್ಟ್ 2024, 6:37 IST
ಫಾಲೋ ಮಾಡಿ
Comments

ಮಧುಗಿರಿ: ತಾಲ್ಲೂಕಿನಲ್ಲಿ ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ತಾಲ್ಲೂಕಿನಲ್ಲಿ ಜೆಜೆಎಂ ಯೋಜನೆಯಡಿ 376 ಗ್ರಾಮಗಳಲ್ಲಿ ಮನೆ ಮನೆಗೆ ನೀರು ತಲುಪಿಸಲು ₹ 311.28 ಕೋಟಿ ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ 37 ಗ್ರಾಮದಲ್ಲಿ ಕಾಮಗಾರಿ ಪೂರ್ಣಗೊಂಡಿದೆ. 339 ಗ್ರಾಮಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ.

ಗುಣಮಟ್ಟವಿಲ್ಲದ ಪೈಪ್‌ಗಳನ್ನು ಅಳವಡಿಸಲಾಗಿದೆ. ಕೆಲ ಚರಂಡಿಗಳ ಮೇಲೆ ಮತ್ತು ಒಳಗೆ ಪೈಪ್‌ಗಳನ್ನು ಅಳವಡಿಸಿದ್ದಾರೆ. ಕಳಪೆ ವಸ್ತುಗಳನ್ನು ಬಳಸಿರುವುದರಿಂದ ಕೆಲವೇ ದಿನಗಳಲ್ಲಿ ಪೈಪ್‌ಗಳು ಹಾಳಾಗುತ್ತಿವೆ ಎಂದು ಜನರು ದೂರಿದ್ದಾರೆ.

ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ತಿಪ್ಪಗೊಂಡನಹಳ್ಳಿ ಗ್ರಾಮದಲ್ಲಿ ಜಲ ಜೀವನ್ ಮಿಷನ್ ಪೈಪ್‌ಲೈನ್ ಅಳವಡಿಸಲು ಅಗೆದ ರಸ್ತೆಗಳನ್ನು ಸರಿಯಾಗಿ ಮುಚ್ಚಿಲ್ಲ. ನಿಧಾನಗತಿಯ ಕಾಮಗಾರಿಯಿಂದಾಗಿ ವೃದ್ಧರು ರಸ್ತೆಯಲ್ಲಿ ಓಡಾಡುವುದಕ್ಕೂ ತೊಂದರೆಯಾಗುತ್ತಿದೆ. ಈ ಬಗ್ಗೆ ಗುತ್ತಿಗೆದಾರರಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಕಾಮಗಾರಿ ಮಾಡುವ ಸ್ಥಳಕ್ಕೆ ಆಗೊಮ್ಮೆ- ಈಗೊಮ್ಮೆ ಎಂಜಿನಿಯರ್‌ಗಳು ಬಂದು ಹೋಗುತ್ತಾರೆ. ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸುವ ಗೋಜಿಗೆ ಹೋಗುತ್ತಿಲ್ಲ ಎಂಬ ಆರೋಪವೂ ಕೇಳಿ ಬಂದಿದೆ.

ಗ್ರಾಮದಲ್ಲಿ ಜೆಜೆಎಂ ಕಾಮಗಾರಿಗೆ ನೀರಿನ ಪೈಪ್‌ಗಳನ್ನು ಭೂಮಿಯ ಒಳ ಭಾಗದಲ್ಲಿ ಅಳವಡಿಸಬೇಕು. ಆದರೆ ಬಹುತೇಕ ಪೈಪ್‌ಗಳು ಮೇಲ್ಭಾಗದಲ್ಲಿ ಕಾಣುತ್ತಿವೆ. ವಾಹನಗಳು ಸಂಚರಿಸಿದರೆ, ಪೈಪ್‌ಗಳು ಒಡೆದು ಹೋಗಿ ನೀರು ಕೂಡ ವ್ಯರ್ಥವಾಗುತ್ತಿದೆ. ಈ ರೀತಿಯ ಕಾಮಗಾರಿ ಮಾಡಿದರೆ, ಜನರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗುತ್ತದೆ.

ಕಾಮಗಾರಿ ಪೂರ್ಣಗೊಳಿಸುವ ಮುನ್ನವೇ ಕೆಲವೆಡೆ ಕಾಮಗಾರಿ ಪರಿಚಯಿಸುವ ನಾಮಫಲಕಗಳ ಫ್ಲಾಟ್‌ಫಾರಂಗಳು ಬಿರುಕು ಬಿಟ್ಟು ಒಡೆದು ಹೋಗುವ ಸ್ಥಿತಿ ತಲುಪಿವೆ.

ಜಲ ಜೀವನ್ ಮಿಷನ್ ಕಾಮಗಾರಿಗಾಗಿ ಅಗೆದಿರುವ ರಸ್ತೆಗಳನ್ನು ಗುತ್ತಿಗೆದಾರರು ಸರಿಯಾಗಿ ಮುಚ್ಚಿಲ್ಲ. ಮಳೆ ಬಂದರೆ ರಸ್ತೆಗಳು ಕೆಸರುಮಯವಾಗುತ್ತಿದ್ದು, ಓಡಾಡಲು ಕಷ್ಟವಾಗುತ್ತಿದೆ. ಕೆಲವೆಡೆ ಹೊಸದಾಗಿ ನಿರ್ಮಿಸಿರುವ ಸಿಮೆಂಟ್ ರಸ್ತೆಗಳನ್ನು ಅಗೆದು ಹಾಳು ಮಾಡಿದ್ದು ಅದನ್ನು ಸರಿಪಡಿಸುವವರು ಯಾರು ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ.

ಗ್ರಾಮದಲ್ಲಿ ಚರಂಡಿ ಪಕ್ಕದಲ್ಲಿ ನಲ್ಲಿಗಳನ್ನು ಹಾಕಿದ್ದಾರೆ. ಕಾಮಗಾರಿ ಮಾಡಿ ವರ್ಷವಾದರೂ ಒಂದು ತೊಟ್ಟು ನೀರು ಕೊಟ್ಟಿಲ್ಲ. ಜೆಜೆಎಂ ನಲ್ಲಿಗಳು ನೆಪಕ್ಕೆ ಮಾತ್ರ ನಿಂತಿವೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕಿನ ದೊಡ್ಡಯಲ್ಕೂರು ಗ್ರಾಮದಲ್ಲಿ ಜೆಜೆಎಂ ಕಾಮಗಾರಿಗಾಗಿ ರಸ್ತೆ ಅಗೆದಿದ್ದಾರೆ. ಆದರೆ ಸರಿಯಾಗಿ ಮುಚ್ಚದೆ ಇರುವುದರಿಂದ ರಸ್ತೆಗಳು ಹಾಳಾಗುತ್ತಿವೆ. ಕಾಮಗಾರಿ ಮುಗಿದ ಕೂಡಲೇ ಅಗೆದ ರಸ್ತೆಗಳನ್ನು ಸರಿಪಡಿಸಬೇಕು ಎಂದು ಜನರು ಒತ್ತಾಯಿಸಿದ್ದಾರೆ.

ತಿಪ್ಪಗೊಂಡನಹಳ್ಳಿ ಜೆಜೆಎಂ ಕಾಮಗಾರಿ ಬಿರುಕು ಬಿಟ್ಟಿದೆ
ತಿಪ್ಪಗೊಂಡನಹಳ್ಳಿ ಜೆಜೆಎಂ ಕಾಮಗಾರಿ ಬಿರುಕು ಬಿಟ್ಟಿದೆ
ದೊಡ್ಡಯಲ್ಕೂರು ಗ್ರಾಮದಲ್ಲಿ ಜೆಜೆಎಂ ಕಾಮಗಾರಿಗೆ ಅಗೆದಿರುವುದನ್ನು ರಸ್ತೆಯನ್ನು ಸರಿಯಾಗಿ ಮುಚ್ಚಿಲ್ಲ
ದೊಡ್ಡಯಲ್ಕೂರು ಗ್ರಾಮದಲ್ಲಿ ಜೆಜೆಎಂ ಕಾಮಗಾರಿಗೆ ಅಗೆದಿರುವುದನ್ನು ರಸ್ತೆಯನ್ನು ಸರಿಯಾಗಿ ಮುಚ್ಚಿಲ್ಲ
ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ ಹಾಗೂ ಅಗೆದ ರಸ್ತೆಗಳನ್ನು ಮುಚ್ಚುವ ಸಾಮಾನ್ಯ ಪ್ರಜ್ಞೆಯೂ ಇಲ್ಲದಂತಾಗಿದೆ. ವೃದ್ಧರು ಮತ್ತು ಮಕ್ಕಳು ರಸ್ತೆಯಲ್ಲಿ ಓಡಾಡಲು ತೊಂದರೆಯಾಗುತ್ತಿದೆ.
ಹನುಮಂತರಾಯಪ್ಪ ನಿವೃತ್ತ ಶಿಕ್ಷಕ
ಗ್ರಾಮದ ಕೆಲವೆಡೆ ಚರಂಡಿಗಳಲ್ಲಿ ಕುಡಿಯುವ ನೀರಿನ ಪೈಪ್‌ಗಳನ್ನು ಅಳವಡಿಸಿದ್ದಾರೆ. ಇದರಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿದೆ. ಅಗೆದ ರಸ್ತೆಗಳನ್ನು ಮುಚ್ಚದೆ ಸಾಕಷ್ಟು ತೊಂದರೆಯಾಗುತ್ತಿದೆ.
- ಬಿದರಪ್ಪ ಚಿನ್ನೇನಹಳ್ಳಿ ಗ್ರಾ.ಪಂ. ಅಧ್ಯಕ್ಷ
ಜೆಜೆಎಂ ಕಾಮಗಾರಿಗಾಗಿ ಅಗೆದಿರುವ ರಸ್ತೆಗಳನ್ನು ಸರಿಪಡಿಸುವಂತೆ ಈಗಾಗಲೇ ಗುತ್ತಿಗೆದಾರರಿಗೆ ತಿಳಿಸಲಾಗಿದೆ. ಶೀಘ್ರ ಹಾಗೂ ಗುಣಮಟ್ಟದ ಕಾಮಗಾರಿ ನಡೆಸಬೇಕು. ಕಳಪೆ ಕಾಮಗಾರಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
ಲೋಕೇಶ್ ಎಇಇ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT