ವೈ.ಎನ್.ಹೊಸಕೋಟೆ: ‘ಜೋಕುಮಾರ ಬಾರಯ್ಯ ಮಳೆಯ ತಾರಯ್ಯ’ ಎಂದು ಹಾಡುತ್ತಾ ಬುಟ್ಟಿ ದೇವರ ಹೊತ್ತ ಮಹಿಳೆಯರು ಮನೆ– ಮನೆಯ ಮುಂದೆ ದವಸ ಧಾನ್ಯ ಪಡೆಯುವ ಸಂಪ್ರದಾಯಿಕ ಆಚರಣೆ ಭಾದ್ರಪದ ಮಾಸದಲ್ಲಿ ಈ ಭಾಗದಲ್ಲಿ ರೂಢಿಯಲ್ಲಿದೆ.
ಜನಪದರಲ್ಲಿ ಮಳೆಯ ದೇವರು ಎನಿಸಿಕೊಂಡಿರುವ ಜೋಕುಮಾರಸ್ವಾಮಿ ಹಬ್ಬದ ಈ ಆಚರಣೆ ಗಡಿನಾಡು ಬಯಲು ಸೀಮೆ ಮತ್ತು ಉತ್ತರ ಕರ್ನಾಟಕದಲ್ಲಿ ವ್ಯಾಪಕವಾಗಿದೆ.
ಭಾದ್ರಪದ ಅಷ್ಟಮಿಯಿಂದ ಪ್ರಾರಂಭವಾಗುವ ಆಚರಣೆ ಏಳು ದಿನ ನಡೆದು ಹುಣ್ಣಿಮೆಯಂದು ಕೊನೆಗೊಳ್ಳುತ್ತದೆ. ಗಂಗಮತಸ್ಥ ಮಹಿಳೆಯರು ಜೋಕುಮಾರಸ್ವಾಮಿಯ ಬುಟ್ಟಿ ಹೊತ್ತು ಪ್ರತಿ ಮನೆಗೆ ಹೋಗಿ ‘ಜೋಕುಮಾರ ಬಂದಿದ್ದಾನೆ ಪೂಜೆ ಮಾಡಿ’ ಎಂದು ಕೂಗುತ್ತಾರೆ.
‘ಜೋಕುಮಾರ ನೋಡಯ್ಯ ಮಳೆಯ ತಾರಯ್ಯ’, ‘ಅಡ್ಡಡ್ಡ ಮಳೆ ಬಂದು ಒಡ್ಡೆಲ್ಲಾ ಒಡೆಯಾಲೊ ಜೋಕುಮಾರ’ ಎಂಬಿತ್ಯಾದಿಯಾಗಿ ಜೋಕುಮಾರನ ಹುಟ್ಟು, ಬೆಳವಣಿಗೆ ಮರಣ ಸಂಬಂಧಿ ಪದಗಳನ್ನು ಹೇಳುತ್ತಾ ದವಸ ಧಾನ್ಯ ಪಡೆದು ಬೇವಿನ ಪ್ರಸಾದ ನೀಡುತ್ತಾರೆ. ಬೇವಿನ ಸೊಪ್ಪು ಮತ್ತು ಅದರೊಟ್ಟಿಗೆ ನೀಡುವ ಕಪ್ಪು ಭಂಡಾರವನ್ನು ಚರಗಿ ಮಾಡಿ ಹೊಲಗದ್ದೆಗಳಿಗೆ ಸಿಂಪಡಿಸುವುದರಿಂದ ರೋಗ ರುಜಿನೆ ಮಾಯವಾಗಿ ಸಮೃದ್ಧ ಬೆಳೆ ಬೆಳೆಯಬಹುದು. ಧವಸದಾನ್ಯ ಸಂಗ್ರಹದಲ್ಲಿ ಹಾಕಿದರೆ ಕೀಟಬಾಧೆ ಇರುವುದಿಲ್ಲ ಎನ್ನುವುದು ಜನರ ನಂಬಿಕೆ.
ಜೋಕುಮಾರಸ್ವಾಮಿ ಆಯುಷ್ಯ ಕೇವಲ ಏಳು ದಿನ. ಜೋಕುಮಾರ ಹುಟ್ಟಿ ಸಾಯುವವರೆಗೆ ನವವಿವಾಹಿತ ಹೆಣ್ಣುಮಕ್ಕಳು ತವರು ಮನೆಯಲ್ಲಿರುತ್ತಾರೆ. ಹೊಸಬಟ್ಟೆ, ವಸ್ತುಗಳನ್ನು ಖರೀದಿಸುವುದು ನಿಶಿದ್ಧವಾಗಿರುತ್ತದೆ.
ಬೇವಿನ ಸೊಪ್ಪು ಪ್ರಸಾದ:
ಜೋಕುಮಾರ ಅಗಸರ ಹೆಣ್ಣುಮಕ್ಕಳನ್ನು ಕಾಡಿದಾಗ ಅವರ ಬಳಗ ಅಟ್ಟಿಸಿಕೊಂಡು ಹೋಗುತ್ತದೆ. ಆಗ ಆತ ಬೇವಿನ ಮರವೇರಿ ಕೂರುತ್ತಾನೆ. ಹಾಗಾಗಿ ಜೋಕುಮಾರನಿಗೆ ಬೇವಿನಸೊಪ್ಪಿನ ಅಲಂಕಾರ ಮತ್ತು ಅದನ್ನೇ ಪ್ರಸಾದ ನೀಡುವುದು ವಾಡಿಕೆ.
ಶಿವನಿಗೆ ವರದಿ
ಭೂಲೋಕದಲ್ಲಿ ಸಂತೃಪ್ತ ಪೂಜೆ ಸ್ವೀಕರಿಸಿ ಮೋದಕ ಉಂಡು ನೀರಿನ್ಲಲಿ ಮುಳುಗೊ ಗಣಪ ‘ಭೂಮಿಯಲ್ಲಿ ಜನ ಸಮೃದ್ಧಿಯಿಂದ ಇದ್ದಾರೆ’ ಎಂದು ಶಿವನಿಗೆ ವರದಿ ಸಲ್ಲಿಸುವುದರಿಂದ ಮಳೆ ಕೊರತೆಯಾಗುತ್ತದೆ. ಜೋಕುಮಾರ ಮನೆ ಮನೆ ತಿರುಗಿ ಪರಿಸ್ಥಿತಿ ನೋಡಿರುತ್ತಾನೆ. ಜನ ನೀರಿಲ್ಲದ ಸಂಕಷ್ಟದಲ್ಲಿದ್ದಾನೆ ಎಂದು ವರದಿ ಸಲ್ಲಿಸುತ್ತಾನೆ. ಆಗ ಶಿವ ಮಳೆ ಸುರಿಸುತ್ತಾನೆ ಎನ್ನುವ ಕಥೆ ಈ ಭಾಗದಲ್ಲಿ ಜನಜನಿತ.
ತಲೆಮಾರುಗಳಿಂದ ಈ ಸಂಪ್ರದಾಯ ನಮ್ಮ ಕುಟುಂಬದಲ್ಲಿದೆ. ಇತ್ತೀಚಿನ ಯುವಜನತೆ ಈ ಆಚರಣೆಗೆ ಒಗ್ಗಿಕೊಳ್ಳುತ್ತಿಲ್ಲ. ಸಂಪ್ರದಾಯ ಮುರಿದರೆ ಕುಟುಂಬಕ್ಕೆ ತೊಂದರೆಯಾಗುವ ಆತಂಕವಿದೆ.ಭೀಮಕ್ಕ, ವೈ.ಎನ್.ಹೊಸಕೋಟೆ
ಜೋಕುಮಾರ ಸ್ವಾಮಿ ಮೇಲೆ ಪದಕಟ್ಟಿ ಹಾಡುವ ಕಲೆ ಗ್ರಾಮೀಣ ಸೊಗಡನ್ನು ಬಿಂಬಿಸುತ್ತದೆ. ರೈತಾಪಿ ಜೀವನದ ಬಾಗವಾಗಿ ಬೆಳೆದಿರುವ ಈ ಕಲೆ ಆಧುನಿಕ ಸೆಲೆಗೆ ಸಿಕ್ಕಿ ಅಳಿವಿನಂಚಿಗೆ ಸರಿಯುತ್ತಿದ್ದು ಉಳಿವಿಗೆ ಪ್ರೋತ್ಸಾಹ ಅಗತ್ಯ.ಎನ್.ಮರಿಸ್ವಾಮಿ, ಜನಪದ ಕಲಾವಿದ ಸಿದ್ಧಾಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.