ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕನ್ನಡಕ್ಕೆ ಗಟ್ಟಿ ಬರವಣಿಗೆ ನೀಡಿದ ಕಮಲಾ

Published : 4 ಆಗಸ್ಟ್ 2024, 5:44 IST
Last Updated : 4 ಆಗಸ್ಟ್ 2024, 5:44 IST
ಫಾಲೋ ಮಾಡಿ
Comments

ತುಮಕೂರು: ಕನ್ನಡ ಸಾಹಿತ್ಯಕ್ಕೆ ವಿಶಿಷ್ಟವಾದ, ಮೌಲಿಕವಾದ ಗಟ್ಟಿ ಬರವಣಿಗೆ ನೀಡಿದ ಕಮಲಾ ಹಂಪನಾ ಬದುಕು, ಪರಿಶುದ್ಧ ವ್ಯಕ್ತಿತ್ವ ಎಲ್ಲರಿಗೂ ಮಾದರಿಯಾಗಿದೆ ಎಂದು ಸಂಶೋಧಕ ಹಂ.ಪ.ನಾಗರಾಜಯ್ಯ ಇಲ್ಲಿ ಶನಿವಾರ ಅಭಿಪ್ರಾಯಪಟ್ಟರು.

ತುಮಕೂರು ವಿಶ್ವವಿದ್ಯಾಲಯ ಡಿವಿಜಿ ಕನ್ನಡ ಅಧ್ಯಯನ ಕೇಂದ್ರ ಹಮ್ಮಿಕೊಂಡಿದ್ದ ಪ್ರೊ.ಕಮಲಾ ಹಂಪನಾ ನುಡಿನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಾಹಿತ್ಯ ಪಯಣದಲ್ಲಿ ವಿರಳವಾಗಿರುವ ಸಂಶೋಧನಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು, ವಾಗ್ಮಿತೆಯ ದೃಷ್ಟಿಯಿಂದ ಪ್ರಬುದ್ಧ ವಿಷಯಗಳನ್ನು ಪ್ರಸ್ತಾಪಿಸಿ, ಸಂಶೋಧನೆ ನಡೆಸಿದರು. ಕಮಲಾ ಅವರ ಕಥೆಗಳು, ಕವನಗಳು, ವಚನಗಳು ವಿಮರ್ಶಾತ್ಮಕ ದೃಷ್ಟಿಯಿಂದ ಕೂಡಿವೆ ಎಂದು ಹೇಳಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಪ್ರೊ.ಮಲ್ಲಿಕಾ ಘಂಟಿ, ‘ಕಮಲಾ ವ್ಯಕ್ತಿತ್ವದ ಪ್ರಭಾವ ಸಮಾಜದ ಮೇಲೆ ಸಕಾರಾತ್ಮಕವಾಗಿ ಬೀರಿತ್ತು. ಅವರ ಆತ್ಮಚರಿತ್ರೆಯಲ್ಲಿ ವಾಸ್ತವ ಸತ್ಯಗಳಿವೆ. ಆರು ದಶಕಗಳ ಕಾಲ ಸುದೀರ್ಘ ಸಾಹಿತ್ಯ ಸೇವೆ ಸಲ್ಲಿಸಿದರು. ಅನುಭವಕ್ಕೆ ದಕ್ಕಿದ ವಸ್ತುವಿನಿಂದ ಬರಹದಲ್ಲಿ ಪ್ರಭುತ್ವ ಸಾಧಿಸಿದ್ದರು’ ಎಂದು ನೆನಪಿಸಿಕೊಂಡರು.

ಸಾಮಾಜಿಕ ಹೊಣೆಗಾರಿಕೆ ಹೊತ್ತು, ಶಿಕ್ಷಣದ ಮೂಲಕ ಸಮಾಜದ ಅನಿಷ್ಟ ಕಟ್ಟುಪಾಡುಗಳಿಂದ ಮುಕ್ತವಾಗಲು ಹೋರಾಡಿದರು. ಸ್ತ್ರೀ ಸಂವೇದನೆಯ ಕಥೆ, ಬಂಡಾಯದ ಕವನ ಬರೆದರು. ಈಗಿನ ಸಾಹಿತ್ಯಲೋಕ ಕೆಸರು ಗದ್ದೆಯಾಗಿದೆ ಎಂಬ ಅಸಮಾಧಾನ ಅವರಿಗಿತ್ತು ಎಂದು ತಿಳಿಸಿದರು.

ಜಾನಪದ ತಜ್ಞೆ ಕೆ.ಆರ್.ಸಂಧ್ಯಾರೆಡ್ಡಿ, ‘ಕುವೆಂಪು ಮಾರ್ಗದರ್ಶನದಲ್ಲಿ ಸಾಹಿತ್ಯಾಭ್ಯಾಸ ಮಾಡುವ ಏಕೈಕ ಗುರಿ ಕಮಲಾ ಅವರಿಗಿತ್ತು. ಕನ್ನಡಕ್ಕಾಗಿ ಯಾರನ್ನಾದರೂ ಎದುರು ಹಾಕಿಕೊಳ್ಳುವಂತಹ ಧೈರ್ಯವಿತ್ತು’ ಎಂದು ಹೇಳಿದರು.

ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಕಾರ್ಯಕ್ರಮದ ಸಂಯೋಜಕಿ ಗೀತಾ ವಸಂತ, ವಿ.ವಿ ಕುಲಸಚಿವರಾದ ನಾಹಿದಾ ಜಮ್ ಜಮ್, ಪ್ರೊ.ಕೆ.ಪ್ರಸನ್ನಕುಮಾರ್, ಡಿವಿಜಿ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ.ನಿತ್ಯಾನಂದ ಬಿ.ಶೆಟ್ಟಿ
ಉಪಸ್ಥಿತರಿದ್ದರು.

ಕಮಲಾ ಹಂಪನಾ ಹೆಸರಿನಲ್ಲಿ ₹5 ಲಕ್ಷ ದತ್ತಿ ನಿಧಿ

ತುಮಕೂರು ವಿಶ್ವವಿದ್ಯಾಲಯದಲ್ಲಿ ‘ಕಮಲಾ ಹಂಪನಾ’ ದತ್ತಿನಿಧಿ ಸ್ಥಾಪನೆ ಹಾಗೂ ಡಿವಿಜಿ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಥಮ ರ‍್ಯಾಂಕ್ ಪಡೆಯುವ ವಿದ್ಯಾರ್ಥಿಗೆ ಪ್ರತಿ ವರ್ಷ ಚಿನ್ನದ ಪದಕ ನೀಡುವ ಸಲುವಾಗಿ ಶಾಶ್ವತ ನಿಧಿ ಸ್ಥಾಪನೆಗೆ ₹5 ಲಕ್ಷ ಮೊತ್ತದ ಚೆಕ್‌ಅನ್ನು ಕಮಲಾ ಹಂಪನ ಕುಟುಂಬದವರು ಕುಲಪತಿಗೆ ಹಸ್ತಾಂತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT