ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟ ನರಸಿಂಹರಾಜು ಸ್ಮರಣಾರ್ಥ ಭವನ ನಿರ್ಮಾಣ: ದಶಕ ಕಳೆದರೂ ಮುಗಿಯದ ಕಾಮಗಾರಿ

Last Updated 24 ಜುಲೈ 2021, 4:27 IST
ಅಕ್ಷರ ಗಾತ್ರ

ತಿಪಟೂರು: ಹಾಸ್ಯ ಚಕ್ರವರ್ತಿ ಟಿ.ಆರ್.ನರಸಿಂಹರಾಜು ಅವರ ಹುಟ್ಟುರಾದ ತಿಪಟೂರಿನಲ್ಲಿ ಅವರ ಸ್ಮರಣಾರ್ಥ ನಿರ್ಮಾಣವಾಗುತ್ತಿರುವ ಸ್ಮಾರಕ ಭವನದ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು, ದಶಕಗಳು ಕಳೆದರೂ ಪೂರ್ಣಗೊಂಡಿಲ್ಲ.

1923 ಜುಲೈ 24ರಂದು ಜನಿಸಿದ್ದ ನರಸಿಂಹರಾಜು ಸುಮಾರು 250ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಬೆಳ್ಳಿತೆರೆಯ ಜೊತೆಗೆ ರಂಗಭೂಮಿಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಚಲನಚಿತ್ರ ನಿರ್ಮಾಣದಲ್ಲಿಯೂ ತೊಡಗಿದ್ದರು. ತಮ್ಮ 56ನೇ ವಯಸ್ಸಿನಲ್ಲಿ ನಿಧನರಾದರು.

ನರಸಿಂಹರಾಜು ಸ್ಮರಣಾರ್ಥ ವಿವಿಧ ಕಲಾವಿದರಿಗೆ ಅವರ ಕಲೆ ಪ್ರದರ್ಶನಕ್ಕೆ ಸಹಕಾರಿಯಾಗಲು ಹಾಗೂ ಸರ್ಕಾರದ ವಿವಿಧ ಕಾರ್ಯಕ್ರಮ ನಡೆಸಲು ಅನುಕೂಲವಾಗಲೆಂದು ಸ್ಮಾರಕ ನಿರ್ಮಾಣಕ್ಕೆ ಮುಂದಾಗಿ ದಶಕಗಳೇ ಕಳೆದಿವೆ. ಆದರೆ ಕಾಮಗಾರಿ ಇನ್ನೂ ಪ್ರಗತಿಯಲ್ಲೇ ಇದ್ದು, ಸದ್ಯದಲ್ಲಿ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ.

2011-12ನೇ ಸಾಲಿನಲ್ಲಿ ₹5.2 ಕೋಟಿ ವೆಚ್ಚದಲ್ಲಿ 680 ಜನ ಕುಳಿತುಕೊಳ್ಳಲು ಅನುಕೂಲವಾಗುವಂತಹ ಬೃಹತ್ ಸಭಾಂಗಣ ನಿರ್ಮಾಣ ಮಾಡುವ ಹೊಣೆಯನ್ನು ತುಮಕೂರಿನ ನಿರ್ಮಿತಿ ಕೇಂದ್ರಕ್ಕೆ ಸರ್ಕಾರ ನೀಡಿತ್ತು. ಕಾಮಗಾರಿ ಪ್ರಾರಂಭಗೊಂಡ ಮರುವರ್ಷವೇ ವಿಧಾನಸಭಾ ಚುನಾವಣೆ ಬಂದ ಹಿನ್ನೆಲೆಯಲ್ಲಿ ಕಾಮಗಾರಿ ಕುಂಠಿತವಾಗಿತ್ತು. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ₹2 ಕೋಟಿ ಅನುದಾನ ಬಿಡುಗಡೆ ಮಾಡಿ ಕಾಮಗಾರಿಯನ್ನು ತ್ವರಿತವಾಗಿ ಮಾಡಲು ಯೋಜನೆ ರೂಪಿಸಲಾಗಿತ್ತು.

ಸಿ.ಟಿ.ರವಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದಾಗ ಭವನಕ್ಕೆ ಭೇಟಿ ನೀಡಿ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಿ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದ್ದರು. ಆದರೆ ಈವರೆಗೆ ಆ ಭರವಸೆ ಈಡೇರಿಲ್ಲ.

ಕಟ್ಟಡದ ಕೆಲ ಗೋಡೆಗಳು ಬಿಸಿಲಿ
ನಿಂದ ಬಿರುಕು ಬಿಟ್ಟಿವೆ. ಭೂತ ಬಂಗಲೆ
ಯಂತೆ ಭಾಸವಾಗುವ ಕಟ್ಟಡ ಅನೈತಿಕ
ಚಟುವಟಿಕೆಗಳ ತಾಣವಾಗಿ
ಮಾರ್ಪಟ್ಟಿದೆ ಎಂದು ಸ್ಥಳೀಯರು ದೂರುತ್ತಾರೆ.

ಅಧಿಕಾರಿಗಳು, ಜನಪ್ರತಿನಿಧಿಗಳು ಗಮನಹರಿಸಿ ಶೀಘ್ರ ಕಾಮಗಾರಿ ಪೂರ್ಣಗೊಳಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT