ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಕ್ಷಾತ್‌ ಸಮೀಕ್ಷೆ – ತುಮಕೂರು : ಕಾಂಗ್ರೆಸ್, ಜೆಡಿಎಸ್‌ಗೆ ಬಿಜೆಪಿ ಅಡ್ಡಗಾಲು

ಮೂರು ಪಕ್ಷಗಳಿಗೆ ಬಂಡಾಯದ ಬಿಸಿ: ಇರುವ ಕ್ಷೇತ್ರ ಉಳಿಸಿಕೊಳ್ಳಲು ಬಿಜೆಪಿ ಪರದಾಟ
Published 6 ಮೇ 2023, 20:16 IST
Last Updated 6 ಮೇ 2023, 20:16 IST
ಅಕ್ಷರ ಗಾತ್ರ

ಕೆ.ಜೆ. ಮರಿಯಪ್ಪ

ತುಮಕೂರು: ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಬಲ ಹೆಚ್ಚಿಸಿಕೊಳ್ಳಲು ಪೈಪೋಟಿ ನಡೆಸಿದ್ದರೆ, ಬಿಜೆಪಿ ಈಗಿರುವ ಕ್ಷೇತ್ರಗಳನ್ನು ಉಳಿಸಿಕೊಳ್ಳಲು ಪ್ರಯಾಸ ಪಡುತ್ತಿದೆ. ಜಿಲ್ಲೆಯ 11 ಕ್ಷೇತ್ರಗಳಲ್ಲಿ ಒಂದೆರಡು ಕ್ಷೇತ್ರ ಹೊರತುಪಡಿಸಿದರೆ ಬಹುತೇಕ ಕಡೆಗಳಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ತೆಂಗು ಸೀಮೆಯಲ್ಲಿ ತ್ರಿಕೋನ ಸ್ಪರ್ಧೆ ಇದ್ದರೆ, ಶೇಂಗಾ ಬೆಳೆಯುವ ನಾಡು ಪಾವಗಡ ಭಾಗದಲ್ಲಿ ಜೆಡಿಎಸ್, ಕಾಂಗ್ರೆಸ್ ನಡುವೆ ಹಣಾಹಣಿ ಏರ್ಪಟ್ಟಿದೆ. ಮೂರು ಪಕ್ಷಗಳಿಗೂ ಪಕ್ಷಾಂತರ, ಬಂಡಾಯದ ಬಿಸಿ ಜೋರಾಗಿಯೇ ತಟ್ಟಿದೆ.

ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರೆ, ಮತ್ತೊಬ್ಬ ಮಾಜಿ ಶಾಸಕ ಎಸ್.ಶಫಿ ಅಹ್ಮದ್ ‘ಕೈ’ ಬಿಟ್ಟು ‘ತೆನೆ’ ಹೊತ್ತಿದ್ದಾರೆ. ಜೆಡಿಎಸ್ ಶಾಸಕರಾಗಿದ್ದ ಎಸ್.ಆರ್.ಶ್ರೀನಿವಾಸ್ (ಗುಬ್ಬಿ ಅಭ್ಯರ್ಥಿ), ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎಲ್.ಕಾಂತರಾಜ್ (ತುರುವೇಕೆರೆ ಅಭ್ಯರ್ಥಿ) ತೆನೆ ಹೊರೆ ಇಳಿಸಿ ‘ಕೈ’ ಹಿಡಿದಿದ್ದಾರೆ.

ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ (ಚಿಕ್ಕನಾಯಕನಹಳ್ಳಿ) ಬಿಜೆಪಿ ಬಿಟ್ಟು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಟಿಕೆಟ್ ಸಿಗದೆ ಅಸಮಾಧಾನಗೊಂಡಿದ್ದ ಬಿಜೆಪಿ ಮಾಜಿ ಸಚಿವ ಸೊಗಡು ಶಿವಣ್ಣ (ತುಮಕೂರು ನಗರ) ಸ್ವತಂತ್ರವಾಗಿ ಸ್ಪರ್ಧಿಸಿದ್ದು, ಪಕ್ಷದ ಅಭ್ಯರ್ಥಿಗೆ ತಲೆನೋವಾಗಿದ್ದಾರೆ.

ಕಳೆದ ಒಂದು ವರ್ಷದಿಂದಲೂ ಕಾಂಗ್ರೆಸ್ ಪರವಾಗಿ ಅಲೆ ಎಬ್ಬಿಸಲು ವಿವಿಧ ಜಾತಿ, ಸಮುದಾಯಗಳ ಸಮಾವೇಶ ಮಾಡಿಕೊಂಡು ಬಂದಿದ್ದು, ಈಗ ಅದರ ಮುಂದುವರಿದ ಭಾಗವೆಂಬಂತೆ ‘ಗ್ಯಾರಂಟಿ ಕಾರ್ಡ್’ ನೀಡುವ ಮೂಲಕ ನಾಯಕರು ಮತದಾರರ ಮನ ಮುಟ್ಟುತ್ತಿದ್ದಾರೆ.

ಆದರೆ, ಡಾ.ಜಿ.ಪರಮೇಶ್ವರ (ಕೊರಟಗೆರೆ), ಟಿ.ಬಿ.ಜಯಚಂದ್ರ (ಶಿರಾ), ಕೆ.ಎನ್.ರಾಜಣ್ಣ (ಮಧುಗಿರಿ) ಅವರಂತಹ ಹಿರಿಯ ನಾಯಕರಿದ್ದರೂ ತಮ್ಮ ಕ್ಷೇತ್ರ ಬಿಟ್ಟು ಹೊರಗೆ ಬಂದು ಪ್ರಚಾರ ಮಾಡುತ್ತಿಲ್ಲ. ಇದು ಇತರ ಕ್ಷೇತ್ರಗಳ ಮೇಲೂ ಪರಿಣಾಮ ಬೀರುತ್ತಿದೆ.

ಜೆಡಿಎಸ್ ‘ಭದ್ರಕೋಟೆ’ಯ ಬಾಗಿಲನ್ನು ಮತ್ತಷ್ಟು ಭದ್ರಪಡಿಸಲು ದಳಪತಿಗಳು ‘ಶಕ್ತಿ’ ತುಂಬುವ ಕೆಲಸದಲ್ಲಿ ನಿರತರಾಗಿದ್ದಾರೆ. ಜಿಲ್ಲೆಯಲ್ಲಿ ಹಲವು ನಾಯಕರು ಜೆಡಿಎಸ್‌ನಿಂದ ಹೊರಗೆ ಹೋಗಿದ್ದು, ಮನೆ ಖಾಲಿಯಾಗಿದೆ. ತಳಮಟ್ಟದಲ್ಲಿ ಪಕ್ಷದ ನೆಲೆ ಗಟ್ಟಿಯಾಗಿದ್ದರೂ ಮತಗಳಾಗಿ ಪರಿವರ್ತಿಸುವ ನಾಯಕತ್ವ ಇಲ್ಲದಿರುವುದು ಕೊರತೆಯಾಗಿ ಕಾಡುತ್ತಿದೆ.

‘ಲೋಕಸಭೆಯಲ್ಲಿ ಸೋಲಿಸಿ, ಕಣ್ಣಲ್ಲಿ ನೀರು ತರಿಸಿದವರ ಕಣ್ಣಲ್ಲೂ ನೀರು ತರಿಸಬೇಕು’ ಎಂದು ಎಚ್.ಡಿ.ದೇವೇಗೌಡ ಪ್ರಚಾರದ ವೇಳೆ ಹೇಳಿರುವುದು ಸಾಕಷ್ಟು ಸದ್ದು ಮಾಡುತ್ತಿದೆ. 

ಸರ್ಕಾರದ ಸಾಧನೆ, ನರೇಂದ್ರ ಮೋದಿ ಬಲದ ಮೇಲೆ ಬಿಜೆಪಿ ಚುನಾವಣೆ ಕಾರ್ಯತಂತ್ರ ಹೆಣೆದಿದೆ. ಆದರೆ ಇದಕ್ಕೆ ಬಂಡಾಯದ ಬಿಸಿ ತಟ್ಟಿದೆ. ಮತ್ತೊಂದೆಡೆ ಆಡಳಿತ ವಿರೋಧಿ ಅಲೆ ಬೆನ್ನು ಹತ್ತಿದೆ. ತುಮಕೂರು ನಗರ ಕ್ಷೇತ್ರದಲ್ಲಿ ಜಿ.ಬಿ.ಜ್ಯೋತಿಗಣೇಶ್ ಎದುರು ಮಾಜಿ ಸಚಿವ ಸೊಗಡು ಶಿವಣ್ಣ ಬಂಡಾಯವಾಗಿ ಸ್ಪರ್ಧಿಸಿದ್ದಾರೆ. ಶಿವಣ್ಣ ‘ಶಕ್ತಿ’ ಹೆಚ್ಚಾದಷ್ಟೂ ಜ್ಯೋತಿಗಣೇಶ್‌ ಅವರಿಗೆ ಸಂಕಷ್ಟ ಎದುರಾಗಲಿದೆ. ಕುಣಿಗಲ್‌ನಲ್ಲಿ ಎಸ್.ಪಿ.ಮುದ್ದಹನುಮೇಗೌಡ, ರಾಜೇಶ್‌ಗೌಡ ಬಂಡಾಯವನ್ನು ತಣಿಸಿದ್ದರೂ, ಚುನಾವಣೆ ಮೇಲೆ ಪರಿಣಾಮ ಇದ್ದೇ ಇದೆ. ಕೊರಟಗೆರೆ, ಗುಬ್ಬಿಯಲ್ಲೂ ಬಂಡಾಯದ ಬಿಸಿ ಬಿರುಸಾಗಿದೆ.

ಮುಖ್ಯಮಂತ್ರಿ ಸ್ಥಾನದ ರೇಸ್‌ನಲ್ಲಿ ಇರುವ ಡಾ.ಜಿ.ಪರಮೇಶ್ವರ ಸ್ಪರ್ಧೆಯಿಂದ ಕೊರಟಗೆರೆ (ಪರಿಶಿಷ್ಟ ಜಾತಿ ಮೀಸಲು) ಹೈ ವೋಲ್ಟೇಜ್ ಕ್ಷೇತ್ರವಾಗಿದೆ. ಸುಧಾಕರ್‌ಲಾಲ್ (ಜೆಡಿಎಸ್) ಎದುರಾಳಿ. ಈವರೆಗೆ ನೇರ ಹಣಾಹಣಿಯ ಕ್ಷೇತ್ರವಾಗಿದ್ದು, ನಿವೃತ್ತ ಐಎಎಸ್ ಅಧಿಕಾರಿ ಅನಿಲ್ ಕುಮಾರ್ (ಬಿಜೆಪಿ) ಸ್ಪರ್ಧೆಯಿಂದ ತ್ರಿಕೋನ ಸ್ಪರ್ಧೆ ಇದೆ. ಅಧಿಕ ಸಂಖ್ಯೆಯಲ್ಲಿರುವ ಪರಿಶಿಷ್ಟ ಜಾತಿಯ ಎಡಗೈ–ಬಲಗೈ ಸಮುದಾಯದ ಮತಗಳ ಮೇಲೆ ಮೂವರೂ ಕೇಂದ್ರೀಕರಿಸಿದ್ದಾರೆ. ಅನಿಲ್ ಕುಮಾರ್ ಎಡಗೈ ಸಮುದಾಯಕ್ಕೆ ಸೇರಿದ್ದು, ಆ ಮತಗಳನ್ನು ಹೆಚ್ಚು ಸೆಳೆಯಬಹುದು ಎಂದು ಹೇಳಲಾಗುತ್ತಿದೆ. ಈವರೆಗೆ ಪರಮೇಶ್ವರ ಕೈ ಹಿಡಿದಿದ್ದ ಈ ಸಮುದಾಯ ಕೈಕೊಡಬಹುದು ಎಂಬ ಆತಂಕ ಕಾಡುತ್ತಿದೆ. ಪರಮೇಶ್ವರ ತಲೆ ಮೇಲೆ ಕಲ್ಲುಬಿದ್ದ ವಿಚಾರ ಹೆಚ್ಚು ಸದ್ದು ಮಾಡುತ್ತಿದ್ದು, ಒಂದಷ್ಟು ನೆರವಾಗಬಹುದು ಎಂದು ಹೇಳಲಾಗುತ್ತಿದೆ. ಬಿಜೆಪಿಗೆ ಬಂಡಾಯ (ಕೆ.ಎಂ.ಮುನಿಯಪ್ಪ ಸ್ಪರ್ಧೆ) ತೊಡಕಾಗಿದೆ.

ಸಚಿವ ಜೆ.ಸಿ.ಮಾಧುಸ್ವಾಮಿ (ಚಿಕ್ಕನಾಯಕನಹಳ್ಳಿ) ಅವರಿಗೆ ಗೆಲ್ಲುವುದು ಪ್ರತಿಷ್ಠೆಯಾಗಿದ್ದು, ಹಿಂದೆ ತಮ್ಮದೇ ಪಕ್ಷದಲ್ಲಿದ್ದ ಕೆ.ಎಸ್.ಕಿರಣ್ ಕುಮಾರ್ (ಕಾಂಗ್ರೆಸ್) ಎದುರಾಳಿ. ಜೆಡಿಎಸ್‌ನ ಬಿ.ಸಿ.ಸುರೇಶ್ ಬಾಬು ಸಾಕಷ್ಟು ಪೈಪೋಟಿ ನೀಡುತ್ತಿದ್ದಾರೆ. ಹಿಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್‌ ಠೇವಣಿ ಕಳೆದುಕೊಂಡಿದ್ದೇ ಹೆಚ್ಚು. ಈಗ ಕಿರಣ್ ಕುಮಾರ್ ಸ್ಪರ್ಧೆಯಿಂದ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಅವರಿಗೆ ಬಿಜೆಪಿ ನಂಟು ಇನ್ನೂ ಬಿಟ್ಟಿಲ್ಲ. ಆ ಪಕ್ಷದ ಮತಬುಟ್ಟಿಗೆ ಕೈ ಹಾಕಿದ್ದು, ಅವರ ತಕ್ಕಡಿ ತುಂಬಿದಷ್ಟೂ ಮಾಧುಸ್ವಾಮಿ ಅವರಿಗೆ ಸಂಕಷ್ಟ ಎದುರಾಗಬಹುದು.

ಈವರೆಗೆ ಬಿಜೆಪಿ, ಕಾಂಗ್ರೆಸ್ ಹೋರಾಟದ ಕಣವಾಗಿದ್ದ ತಿಪಟೂರಿನಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಸಚಿವ ಬಿ.ಸಿ.ನಾಗೇಶ್ (ಬಿಜೆಪಿ), ಕೆ.ಷಡಕ್ಷರಿ (ಕಾಂಗ್ರೆಸ್), ಕೆ.ಟಿ.ಶಾಂತಕುಮಾರ್ (ಜೆಡಿಎಸ್) ಕಣದಲ್ಲಿ ಇದ್ದಾರೆ. ಆಡಳಿತ ವಿರೋಧಿ ಅಲೆಯನ್ನು ಹಿಮ್ಮೆಟ್ಟಿಸಲು ನಾಗೇಶ್ ಪ್ರಯಾಸ ಪಡುತ್ತಿದ್ದರೆ, ಅದನ್ನೇ ಲಾಭ ಮಾಡಿಕೊಳ್ಳಲು ಕಾಂಗ್ರೆಸ್ ಹವಣಿಸುತ್ತಿದೆ.

ಶಿರಾದಲ್ಲಿ ಟಿ.ಬಿ.ಜಯಚಂದ್ರ (ಕಾಂಗ್ರೆಸ್) ಇದೇ ಕೊನೆ ಚುನಾವಣೆ ಎಂದು ಅನುಕಂಪದ ಮೊರೆ ಹೋಗಿದ್ದಾರೆ. ಕಾಂಗ್ರೆಸ್ ತೊರೆದು ಬಂದ ನಾಯಕರು ಜೆಡಿಎಸ್‌ಗೆ (ಆರ್.ಉಗ್ರೇಶ್) ಬಲ ತುಂಬಿದ್ದರೆ, ಬಿಜೆಪಿಯ ಡಾ.ಸಿ.ಎಂ.ರಾಜೇಶ್‌ಗೌಡ ಅವರಿಗೆ ಉಪಚುನಾವಣೆಯಲ್ಲಿ ಶಕ್ತಿ ಕೊಟ್ಟ ನಾಯಕರು ಈಗ ಜತೆಯಲ್ಲಿ ಇಲ್ಲದಿರುವುದು ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು.

ಎಸ್.ಆರ್.ಶ್ರೀನಿವಾಸ್ (ಗುಬ್ಬಿ) ಕಾಂಗ್ರೆಸ್ ಸೇರುತ್ತಿದ್ದಂತೆ ಆ ಪಕ್ಷದ ನಾಯಕರು ಹೊರಡೆದರು. ಆದ್ದರಿಂದ ಏಕಾಂಗಿ ಹೋರಾಟ ನಡೆಸಿದ್ದಾರೆ. ಎಸ್.ಡಿ.ದಿಲೀಪ್ ಕುಮಾರ್ (ಬಿಜೆಪಿ) ಟಿಕೆಟ್ ಘೋಷಣೆ ನಂತರ ಹಲವು ಮುಖಂಡರು ಪಕ್ಷ ತೊರೆದಿದ್ದು, ಅವರದ್ದೂ ಇದೇ ಕಥೆ. ಕೈ, ಕಮಲ ಬಿಟ್ಟವರು ಜೆಡಿಎಸ್ (ಬಿ.ಎಸ್.ನಾಗರಾಜು) ಬಲ ಹೆಚ್ಚಿಸಿದ್ದಾರೆ.

ಕುಣಿಗಲ್‌ನಲ್ಲಿ ಶಾಸಕ, ಕಾಂಗ್ರೆಸ್‌ ಅಭ್ಯರ್ಥಿ ಡಾ.ಎಚ್.ಡಿ.ರಂಗನಾಥ್‌ಗೆ ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿಗೌಡ ಬಂಡಾಯ ಸ್ಪರ್ಧೆ ದುಬಾರಿಯಾಗಿದೆ. ಇಲ್ಲಿ ಸತತ ಮೂರು ಬಾರಿ ಸೋಲುಂಡಿರುವ ಡಿ.ಕೃಷ್ಣಕುಮಾರ್ ಕೊನೆಯ ಅವಕಾಶಕ್ಕೆ ಬೇಡಿಕೆ ಸಲ್ಲಿಸಿದ್ದಾರೆ. ಜೆಡಿಎಸ್ ಹೊಸ ಮುಖ ಡಾ.ಎನ್.ಬಿ.ರವಿ ಅವರನ್ನು ಕಣಕ್ಕಿಳಿಸಿದೆ.

ತುಮಕೂರು ಗ್ರಾಮಾಂತರದಲ್ಲಿ ಕ್ಷೇತ್ರದ ಪರಿಚಯವೇ ಇಲ್ಲದ ಷಣ್ಮುಖಪ್ಪ (ಕಾಂಗ್ರೆಸ್) ಅವರನ್ನು ಕಣಕ್ಕಿಳಿಸಿದೆ. ಜೆಡಿಎಸ್ (ಡಿ.ಸಿ.ಗೌರಿಶಂಕರ್)– ಕಾಂಗ್ರೆಸ್ ನಡುವಿನ ಒಳ ಒಪ್ಪಂದ ಬಿಜೆಪಿ (ಬಿ.ಸುರೇಶ್‌ಗೌಡ) ಮೇಲೆ ಪರಿಣಾಮ ಬೀರಲಿದೆ.

ಜೆ.ಸಿ.ಮಾಧುಸ್ವಾಮಿಗೆ ಪ್ರಬಲ ಸ‌ವಾಲು

ಸಚಿವ ಜೆ.ಸಿ.ಮಾಧುಸ್ವಾಮಿ (ಚಿಕ್ಕನಾಯಕನಹಳ್ಳಿ) ಅವರಿಗೆ ಗೆಲ್ಲುವುದು ಪ್ರತಿಷ್ಠೆಯಾಗಿದ್ದು, ಹಿಂದೆ ತಮ್ಮದೇ ಪಕ್ಷದಲ್ಲಿದ್ದ ಕೆ.ಎಸ್.ಕಿರಣ್ ಕುಮಾರ್ (ಕಾಂಗ್ರೆಸ್) ಎದುರಾಳಿ. ಜೆಡಿಎಸ್‌ನ ಬಿ.ಸಿ.ಸುರೇಶ್ ಬಾಬು ಸಾಕಷ್ಟು ಪೈಪೋಟಿ ನೀಡುತ್ತಿದ್ದಾರೆ. ಹಿಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್‌ ಠೇವಣಿ ಕಳೆದುಕೊಂಡಿದ್ದೇ ಹೆಚ್ಚು. ಈಗ ಕಿರಣ್ ಕುಮಾರ್ ಸ್ಪರ್ಧೆಯಿಂದ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಅವರಿಗೆ ಬಿಜೆಪಿ ನಂಟು ಇನ್ನೂ ಬಿಟ್ಟಿಲ್ಲ. ಆ ಪಕ್ಷದ ಮತಬುಟ್ಟಿಗೆ ಕೈ ಹಾಕಿದ್ದು, ಅವರ ತಕ್ಕಡಿ ತುಂಬಿದಷ್ಟೂ ಮಾಧುಸ್ವಾಮಿ ಅವರಿಗೆ ಸಂಕಷ್ಟ ಎದುರಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT