ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು ಜಿಲ್ಲೆಯಲ್ಲಿ ನನ್ನ ನಿರ್ಲಕ್ಷಿಸಿ ಯಾರಾದರೂ ಗೆಲ್ಲಲಿ ನೋಡೋಣ: ರಾಜಣ್ಣ

ಶಿರಾ ಉಪಚುನಾವಣೆಗೆ ಟಿಕೆಟ್ ಕೇಳುವೆ– ಕೆ.ಎನ್.ರಾಜಣ್ಣ
Last Updated 3 ಸೆಪ್ಟೆಂಬರ್ 2020, 17:05 IST
ಅಕ್ಷರ ಗಾತ್ರ

ತುಮಕೂರು: ‘ಜಿಲ್ಲೆಯಲ್ಲಿ ನನ್ನ ಉದಾಸೀನ ಮಾಡಿ ಯಾರಾದರೂ ಗೆಲ್ಲುತ್ತೇನೆ ಎಂದು ಹೇಳಲಿ ನೋಡುತ್ತೇನೆ’ ಎಂದು ಸವಾಲು ಹಾಕಿರುವಕಾಂಗ್ರೆಸ್ ಮುಖಂಡ ಕೆ.ಎನ್‌.ರಾಜಣ್ಣ, ‘ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿಯೇ ಶಿರಾದಲ್ಲಿ ನನಗೆ ಹೆಚ್ಚು ಜನಪ್ರಿಯತೆ ಇದೆ’ ಎಂದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, ‘ಈ ಹಿಂದೆ ನನ್ನ ಮಗ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ಜಯಚಂದ್ರ ನನ್ನ ಮಗನ ವಿರುದ್ಧ ಕೆಲಸಮಾಡಿ ಸೋಲಿಗೆ ಕಾರಣನಾದ. ಶಿರಾದಲ್ಲಿ ಇವನು ಗೆದ್ದರೆ (ಕಳೆದ ವಿಧಾನಸಭೆ ಚುನಾವಣೆ) ಅರ್ಧ ಮೀಸೆ ತೆಗೆಯುತ್ತೇನೆ ಎಂದು ಅಂದೇ ಹೇಳಿದ್ದೆ. ನಾನು ಅಷ್ಟು ಧೈರ್ಯವಾಗಿ ಹೇಳಬೇಕು ಅಂದರೆ ಅಲ್ಲಿನ ಜನರ ಪ್ರೀತಿ, ವಿಶ್ವಾಸ ನನ್ನ ಮೇಲಿತ್ತು’ ಎಂದರು.

‘ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಗೆಲ್ಲಿಸುವ ಮತ್ತು ಸೋಲಿಸುವ ಶಕ್ತಿ ನನಗೆ ಇದೆ. ಉಪಚುನಾವಣೆ ವೇಳೆಗೆ ಸಾಕಷ್ಟು ರಾಜಕೀಯ ಬೆಳವಣಿಗೆಗಳು ಆಗುತ್ತವೆ’ ಎಂದು ಹೇಳಿದರು.

‘ಜಯಚಂದ್ರ ಮಾಜಿ ಮಂತ್ರಿ, ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ. ನನ್ನಂತ ನೂರು ಜನ ವಿರೋಧ ಮಾಡಿದರೂ ಶಿರಾದಲ್ಲಿ ಗೆಲ್ಲುತ್ತಾರೆ. ಗೆಲ್ಲಲು ನನ್ನನ್ನು ಎಲ್ಲರೂ ಬಳಸಿ ಕೊಳ್ಳುತ್ತಾರೆ. ಕೊನೆಗೆ ನಮಗೆ ಸಹಾಯ ಮಾಡುವುದಿಲ್ಲ’ ಎಂದರು.

‘ಶಿರಾ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕು ಎನ್ನುವ ವಿಚಾರ ಇದೆ. ಬಿಜೆಪಿಯಿಂದ ನಿಲ್ಲುವುದಿಲ್ಲ. ಕಾಂಗ್ರೆಸ್‌ನಿಂದಲೇ‌ ಟಿಕೆಟ್ ಕೇಳುತ್ತೇನೆ. ಅಂತಿಮವಾಗಿ ಸಿದ್ದರಾಮಯ್ಯ ಹೇಳಿ ದಂತೆ ಮಾಡುವೆ. ಶಿರಾದಲ್ಲಿ ಸ್ವಾಭಿಮಾನಿ ವೇದಿಕೆಯಡಿ ಸಭೆ ನಡೆಯಲಿದ್ದು, ಅದಕ್ಕೆ ಸಿದ್ದರಾಮಯ್ಯ ಸೇರಿ ಬಹಳಷ್ಟು ಮಂದಿಯನ್ನು ಕರೆಯಲಾಗುತ್ತದೆ. ಆ ಸಭೆಯಲ್ಲಿ ಭಾಗವಹಿಸುವೆ’ ಎಂದು ಮಾಹಿತಿ ನೀಡಿದರು.

ಜೆಡಿಎಸ್ ಮುಖಂಡರಿಂದ ರಾಜಣ್ಣ ಭೇಟಿ

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಅಂಜಿನಪ್ಪ, ಪಾವಗಡ ಮಾಜಿ ಶಾಸಕ ತಿಮ್ಮರಾಯಪ್ಪ ಅವರು ಕೆ.ಎನ್‌.ರಾಜಣ್ಣ ಅವರನ್ನು ಭೇಟಿ ಆಗಿರುವುದು ನಾನಾ ಊಹಾಪೋಹಕ್ಕೆ ಕಾರಣವಾಗಿದೆ.

ರಾಜಣ್ಣ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿ ಎಂದು ಹೇಳಿರುವ ಬೆನ್ನಲ್ಲೇ ಜೆಡಿಎಸ್ ಮುಖಂಡರು ಅವರನ್ನು ಭೇಟಿ ಮಾಡಿದ್ದಾರೆ. ಅಲ್ಲದೆ ದೇವೇಗೌಡರ ಬಗ್ಗೆ ಕೆಂಡಕಾರುತ್ತಿದ್ದ ರಾಜಣ್ಣ, ‘ದೇವೇಗೌಡರ ಋಣ ನನ್ನ ಮೇಲಿದೆ’ ಎಂದು ಈ ಸಂದರ್ಭದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT