ಭಾನುವಾರ, ಫೆಬ್ರವರಿ 23, 2020
19 °C
ಕೃಷಿ ಇಲಾಖೆಯಿಂದ ಖರೀದಿಸಿದ ಬೀಜ ಬಿತ್ತನೆ; ಕಂಗಾಲಾದ ರೈತ

ಕುಣಿಗಲ್: ಬಿತ್ತಿದ್ದು ರಾಗಿ, ಬಂದಿದ್ದು ಅಣ್ಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಣಿಗಲ್: ತಾಲ್ಲೂಕಿನ ಕೂತಾರಹಳ್ಳಿ ಗ್ರಾಮಸ್ಥರು ಬಿತ್ತನೆ ಮಾಡಿದ್ದು ರಾಗಿ. ಆದರೆ, ರಾಗಿಗಿಂತ ಹುಲುಸಾಗೆ ಬೆಳೆದದ್ದು ಅಣ್ಣೆ! 

ಕೃಷಿ ಇಲಾಖೆಯಿಂದ ಬಿತ್ತನೆ ಬೀಜ ಖರೀದಿಸಿ ರೈತರು ರಾಗಿ ಬಿತ್ತನೆ ಮಾಡಿದ್ದರು. ಆದರೆ ರಾಗಿ ತೆನೆಗಿಂತಲೂ ಅಣ್ಣೆಸೊಪ್ಪಿನ ತೆನೆಗಳೇ ಹೆಚ್ಚಾಗಿ ಬೆಳೆದಿದ್ದು ರೈತರು ಕಂಗಾಲಾಗಿದ್ದಾರೆ.

ಕಸಬಾ ಹೋಬಳಿಯ ಕೂತಾರಹಳ್ಳಿ ಗ್ರಾಮಸ್ಥ ವೆಂಕಟೇಶ್, ಸುರೇಶ್, ರಘುನಾಥ್, ರಂಗಸ್ವಾಮಿ ಸೇರಿದಂತೆ ಇತರರು ಪಟ್ಟಣದ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಿಂದ ಜುಲೈನಲ್ಲಿ ಬಿತ್ತನೆ ಬೀಜದ 5 ಕೆ.ಜಿ ಚೀಲಗಳನ್ನು ತಲಾ ₹240ಕ್ಕೆ ಖರೀದಿಸಿ, ಆಗಸ್ಟ್‌ನಲ್ಲಿ ಬಿತ್ತನೆ ಮಾಡಿದ್ದರು.

ಗೊಬ್ಬರ ಹಾಕಿ ಉತ್ತಮ ಇಳುವರಿ ನಿರೀಕ್ಷಿಸಿದ್ದವರಿಗೆ ರಾಗಿಯ ಜೊತೆ ಅಣ್ಣೆ ಸೊಪ್ಪಿನ ಬೆಳೆಯೂ ಬೆಳೆದು ನಿಂತು ಅಚ್ಚರಿ ಮೂಡಿಸಿದೆ.

‘ಈ ಬಗ್ಗೆ ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರದ ಲಕ್ಷ್ಮಿ ಅವರನ್ನು ಸಂಪರ್ಕಿಸಿದಾಗ, ಇಲಾಖೆಯಿಂದ ಸರಬರಾಜಾಗಿದ್ದ ಬೀಜವನ್ನೇ ನೀಡಿದ್ದೇವೆ. ಜಮೀನಿನಲ್ಲಿ ದೋಷವಿರಬಹುದು ನೋಡಿ ಎಂದು ತಿಳಿಸಿದರು. ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದ್ದರು. ಆದರೆ, ಯಾರೂ ಬಂದು ನೋಡಿಲ್ಲ’ ಎಂದು ರೈತ ವೆಂಕಟೇಶ್ ದೂರಿದರು.

‘ಮೂರು ತಿಂಗಳ ಶ್ರಮವೂ ವ್ಯರ್ಥ, ಹಣವೂ ವ್ಯರ್ಥವಾಗಿದೆ. ಬೆಳೆದು ನಿಂತ ರಾಗಿಯನ್ನು, ಅಣ್ನೆಸೊಪ್ಪಿನಿಂದ ವಿಂಗಡಿಸುವುದು ಕಷ್ಟವಾಗಿದೆ. ಕೂಲಿ ಕಾರ್ಮಿಕರು ಬರುತ್ತಿಲ್ಲ. ಯಂತ್ರದ ಮೂಲಕ ಕಟಾವು ಮಾಡುವುದು ದುಬಾರಿಯಾಗಿದೆ. ಕಟಾವು ಮಾಡಿದ ರಾಗಿ ಮತ್ತು ಅಣ್ಣೆಯನ್ನು ವಿಂಗಡಿಸಲು ಸಾಧ್ಯವಾಗದ ಕಾರಣ ಮೇವಿಗಾಗಿ ಬಳಸಬೇಕಾಗಿದೆ’ ಎಂದು ಅಳಲು ತೋಡಿಕೊಂಡರು.

ನಾವು ಸುಮಾರು 40 ವರ್ಷದಿಂದ ಬೇಸಾಯ ಮಾಡುತ್ತಿದ್ದೇವೆ. ಈ ರೀತಿ ಯಾವ ವರ್ಷವೂ ಆಗಿಲ್ಲ. ರಾಗಿ ಜತೆ ಅಣ್ಣೆ ಬೀಜ ಬೆರೆತಿದೆಯೋ ಗೊತ್ತಿಲ್ಲ. ಗ್ರಾಮಸ್ಥರು ಸಂಗ್ರಹಿಸಿಟ್ಟಿದ್ದ ಬಿತ್ತನೆ ಬೀಜದಿಂದ ಉತ್ತಮ ಇಳುವರಿ ಬಂದಿದೆ. ಇಲಾಖೆಯ ಬೀಜದಿಂದ ರೈತರ ಶ್ರಮ, ಹಣ ವ್ಯರ್ಥವಾಗಿದೆ ಎನ್ನುವರು ರೈತ ರಘುನಾಥ್.

***

ಕೃಷಿ ಇಲಾಖೆ ಮುಂದೆ ಮೆದೆ ಹಾಕಿ ಪ್ರತಿಭಟನೆ ಎಚ್ಚರಿಕೆ

ಬಿತ್ತನೆ ಬೀಜಗಳನ್ನು ಕೊಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ. ಕಚೇರಿಗೆ ಹೋಗಿ ಮಾಹಿತಿ ನೀಡಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಂದು ನೋಡಿ, ಸೂಕ್ತ ಮಾರ್ಗದರ್ಶನ ನೀಡಿಲ್ಲ. ಕೆಲವರು ರಾಗಿ ಬೆಳೆ ಕೈಕೊಡುವ ಲಕ್ಷಣ ಅರಿತು ಬಿತ್ತಿದ ರಾಗಿಯನ್ನು ತೆಗೆದು ಹುರುಳಿ, ಜೋಳ ಬೆಳೆದಿದ್ದಾರೆ. ಶೇ 20 ಅಣ್ಣೆ ಬರಬಹುದು ಎಂದು ನಿರೀಕ್ಷಿಸಿದ್ದ ನಮಗೆ ಶೇ 70 ಅಣ್ಣೆ ಬೆಳೆದಿದೆ. ಶೇ 30 ರಾಗಿ ಬಂದಿದೆ. ಅಧಿಕಾರಿಗಳು ಬಂದು ಸಮಸ್ಯೆ ಪರಿಶೀಲಿಸಿ ಪರಿಹಾರ ನೀಡದಿದ್ದರೆ ಇಡೀ ಬೆಳೆಯನ್ನು ತಂದು ಕೃಷಿ ಇಲಾಖೆ ಮುಂದೆ ಮೆದೆ ಹಾಕಿ ಪ್ರತಿಭಟಿಸಲಾಗುವುದು ಎಂದು ರೈತ ಸುರೇಶ್ ಎಚ್ಚರಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)