ಮಂಗಳವಾರ, ಜನವರಿ 28, 2020
29 °C
ಕುವೆಂಪು ಜನ್ಮಾದಿನಾಚರಣೆ ಹಾಗೂ ಕುವೆಂಪು ಓದು ಅಭಿಯಾನದಲ್ಲಿ ಪ್ರೊ.ಕೆ.ಚಿದಾನಂದ ಗೌಡ ಅಭಿಮತ

ವಿಶ್ವದ ಶಾಂತಿಗೆ ಕುವೆಂಪು ಪಂಚಮಂತ್ರ ಪೂರಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಕುವೆಂಪು ಪ್ರತಿಪಾದಿಸಿದ ಪಂಚಮಂತ್ರಗಳಾದ ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿಯನ್ನು ಯುವ ಪೀಳಿಗೆ ಮೈಗೂಡಿಸಿಕೊಳ್ಳಬೇಕು ಎಂದು ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಚಿದಾನಂದ ಗೌಡ ಹೇಳಿದರು.

ತುಮಕೂರು ವಿಶ್ವವಿದ್ಯಾಲಯದಲ್ಲಿ ಕುವೆಂಪು ಅಧ್ಯಯನ ಪೀಠ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಡಾ.ರಾಮಮನೋಹರ ಲೋಹಿಯಾ ಸಮತಾ ವಿದ್ಯಾಲಯ ಸಿರಾ- ಇವರ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಕುವೆಂಪು ಜನ್ಮಾದಿನಾಚರಣೆ ಹಾಗೂ ಕುವೆಂಪು ಓದು ಅಭಿಯಾನ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವದಲ್ಲಿ ಶಾಂತಿ, ಪ್ರೀತಿ ನೆಲಸಬೇಕಾದರೆ ಪಂಚಮಂತ್ರಗಳು ಅತಿ ಅವಶ್ಯಕ ಎಂದು ಕುವೆಂಪು ಪ್ರತಿಪಾದಿಸಿದ್ದರು. ಹಾಗಾಗಿ ತಮ್ಮ ಕೊನೆಯ ದಿನಗಳಲ್ಲಿ ತಮ್ಮ ಬಳಿ ಯಾರೇ ಬಂದರೂ ಕುವೆಂಪು ಅವರ ಕೈಗೆ ವಿಶ್ವಮಾನವ ಪ್ರತಿ ನೀಡುತ್ತಿದ್ದರು. ನೀವು ನನ್ನ ರಾಮಾಯಣ ದರ್ಶನಂ ಮರೆತರೂ ಪರವಾಗಿಲ್ಲ, ವಿಶ್ವಮಾನವ ಸಂದೇಶವನ್ನು ಮರೆಯಬೇಡಿ ಎನ್ನುತ್ತಿದ್ದರು ಎಂದು ಹೇಳಿದರು.

ಕುವೆಂಪು ಅವರಿಗೆ ಕನ್ನಡ ಪ್ರೀತಿ ಅಗಾಧವಾಗಿತ್ತು. ಇವರು ಕನ್ನಡ ಕವಿತೆ ಬರೆಯುವುದಕ್ಕಿಂತ ಮೊದಲು ಇಂಗ್ಲಿಷ್‌ನಲ್ಲಿ ಕವಿತೆ ರಚಿಸುತ್ತಿದ್ದರು. ಕುವೆಂಪು ಮೈಸೂರಿನಲ್ಲಿ ಪದವಿ ಓದುತ್ತಿದ್ದಾಗ ಜೇಮ್ಸ್‌ ಕಸಿನ್ಸ್ ಎಂಬ ಐರಿಶ್ ಕವಿ ಉಪನ್ಯಾಸಕ್ಕೆಂದು ಬಂದಿದ್ದರು. ಆ ಸಂದರ್ಭದಲ್ಲಿ ಕುವೆಂಪು ತನ್ನ ಗುರುಗಳ ಸಲಹೆಯಂತೆ ತಾವು ಬರೆದ ಕವಿತೆಗಳನ್ನು ಐರಿಶ್ ಕವಿಗೆ ತೋರಿಸಿದ್ದರು. ಕವಿತೆಗಳನ್ನು ಓದಿ ಖುಷಿ ಪಟ್ಟ ಐರಿಶ್ ಕವಿ, ಈ ಸಂದರ್ಭದಲ್ಲಿ ಕುವೆಂಪು ಅವರಿಗೆ ಕನ್ನಡದ ಬಗ್ಗೆ ಪ್ರೀತಿ ಬೆಳೆಸಿದರು. ನಂತರ ಕುವೆಂಪು ಇಂಗ್ಲಿಷ್‌ನಲ್ಲಿ ಕವಿತೆ ಬರೆಯುವುದನ್ನೇ ಬಿಟ್ಟರು ಎಂದರು.

ಕಾಡು, ಪ್ರಕೃತಿಯ ಮೇಲಿನ ಪ್ರೀತಿ ಕುವೆಂಪುಗೆ ಅಪಾರವಾಗಿತ್ತು. ಒಮ್ಮೆ ಸಚಿವರೊಬ್ಬರು ಕುವೆಂಪು ಅವರನ್ನು ಭೇಟಿಯಾಗಿ ಕುಪ್ಪಳ್ಳಿಯನ್ನು ಸ್ಮಾರಕವನ್ನಾಗಿ ಮಾಡಲು ಅಪೇಕ್ಷಿಸಿದ್ದರು. ಈ ಸಂದರ್ಭದಲ್ಲಿ ಕುವೆಂಪು ಮೊದಲು ನೀವು ಕುಪ್ಪಳ್ಳಿ ಮನೆಯ ಸುತ್ತಮುತ್ತ ಇರುವ ಕಾಡನ್ನು ಯಾರು ಕಡಿಯದಂತೆ ಕ್ರಮ ಕೈಗೊಳ್ಳಬೇಕು. ಮೀಸಲು ಅರಣ್ಯ ವ್ಯಾಪ್ತಿಗೆ ತರಬೇಕು ಎಂದು ಸಚಿವರಿಗೆ ಮನವಿ ಮಾಡಿದ್ದರು. ಇದು ಕುವೆಂಪು ಅವರಿಗೆ ಇದ್ದ ಕಾಡಿನ ಪ್ರೀತಿಗೆ ನಿದರ್ಶನವಾಗಿದೆ ಎಂದು ಹೇಳಿದರು.

ಕುವೆಂಪುಗೆ ಅಧ್ಯಾತ್ಮ ಮತ್ತು ವಿಜ್ಞಾನ, ವಿಶ್ವಮಾನವ ಸಂದೇಶದ ಆಯಾಮದ ಮೇಲೆ ಹೆಚ್ಚಿನ ಪ್ರೀತಿಯಿತ್ತು. ಈ ಬಗ್ಗೆ ವಿದ್ಯಾರ್ಥಿಗಳು ತಿಳಿಯಬೇಕು. ಕುವೆಂಪು ಸಾಹಿತ್ಯ, ವಿಚಾರಧಾರೆ, ವಿಶ್ವಮಾನವ ಸಂದೇಶಗಳನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕು ಎಂದು ಸಲಹೆ ನೀಡಿದರು.

ಕುವೆಂಪು ಅವರ ಮಗಳು ತಾರಿಣಿ ಚಿದಾನಂದ ಮಾತನಾಡಿ, ‘ನಾನು ಹುಟ್ಟುವ ಮುಂಚೆಯೇ ಕುವೆಂಪು ಸಾಹಿತ್ಯದ ಎಲ್ಲಾ ಮಜಲುಗಳನ್ನು ಬರೆದಿದ್ದರು. ನಾನು ಹುಟ್ಟುವ ಒಂದು ತಿಂಗಳು ಮುಂಚೆ ‘ರಾಮಾಯಣ ದರ್ಶನಂ’ ಬರೆದು ಮುಗಿಸಿದ್ದರು. ನಾನು ಪಿಯುಸಿಗೆ ಬರುವಷ್ಟರಲ್ಲಿ ಕುವೆಂಪು ನಿವೃತ್ತಿ ಹೊಂದಿದ್ದರು. ಚಿಕ್ಕಂದಿನಿಂದಲೇ ಅವರ ಸಾಹಿತ್ಯ ರಚನೆಯನ್ನು ಕಣ್ತುಂಬಿಕೊಳ್ಳುತ್ತಿದ್ದೆ. ಅವರಿಗೆ ಸಾಹಿತ್ಯದಷ್ಟೇ ಸಂಗೀತದ ಆಸಕ್ತಿಯೂ ಹೆಚ್ಚಿತ್ತು’ ಎಂದು ತಮ್ಮ ತಂದೆಯೊಡನೆ ಕಳೆದ ಕ್ಷಣಗಳನ್ನು ಮೆಲುಕು ಹಾಕಿದರು.

ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಪ್ರೊ.ಕೆ.ಎನ್.ಗಂಗಾನಾಯಕ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ಕುವೆಂಪು ಅಧ್ಯಯನ ಪೀಠದ ಡಾ.ಗೀತಾ ವಸಂತ, ಸಿರಾ ಡಾ.ರಾಮಮನೋಹರ ಲೋಹಿಯಾ ಸಮತಾ ವಿದ್ಯಾಲಯದ ಮಲ್ಲಿಕಾ ಬಸವರಾಜು ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು