ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಸ್ವಗ್ರಾಮದತ್ತ ವಲಸೆ ಕಾರ್ಮಿಕರು

ಒಂದು ಬಸ್‌ನಲ್ಲಿ 30 ಮಂದಿಯಂತೆ ಪ್ರಯಾಣ
Last Updated 4 ಮೇ 2020, 16:05 IST
ಅಕ್ಷರ ಗಾತ್ರ

ತುಮಕೂರು: ಲಾಕ್‍ಡೌನ್ ಹಿನ್ನೆಲೆಯಲ್ಲಿ ಸ್ವಗ್ರಾಮಗಳಿಗೆ ತೆರಳಲು ಸಾಧ್ಯವಾಗದೆ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸಿಲುಕಿಕೊಂಡಿದ್ದ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಕೆಎಸ್‌ಆರ್‌ಟಿಸಿ ಬಸ್‍ಗಳಲ್ಲಿ ಸೋಮವಾರ ಉಚಿತವಾಗಿ ಕಳುಹಿಸಿಕೊಡಲಾಯಿತು.

ಬೆಳಿಗ್ಗೆ 8 ಗಂಟೆಯಿಂದಲೇ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಕಾರ್ಮಿಕರು ಜಮಾಯಿಸಿದರು. ಗುರುತಿನ ಚೀಟಿ, ಆಧಾರ್ ಕಾರ್ಡ್‍ಗಳನ್ನು ತೋರಿಸಿ ಹೆಸರು ನೋಂದಾಯಿಸಿಕೊಂಡರು. ಆರೋಗ್ಯ ತಪಾಸಣೆ ನಡೆಸಿದ ಬಳಿಕ ಬಸ್ ಹತ್ತಲು ಅವಕಾಶ ಮಾಡಿಕೊಟ್ಟರು.

ಬೆಳಗಾವಿ, ಮುಧೋಳ, ರಾಯಚೂರು, ಮುದ್ದೇಬಿಹಾಳ, ಕಲಬುರ್ಗಿ, ಹಾವೇರಿ, ಹುಬ್ಬಳ್ಳಿ, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳ ವಲಸೆ ಕಾರ್ಮಿಕರಿಗೆ ಕಂದಾಯ ಇಲಾಖೆಯು ಅನುಮತಿ ಪತ್ರ ನೀಡಿತು. ಒಂದು ಬಸ್‍ನಲ್ಲಿ 30 ಮಂದಿ ಪ್ರಯಾಣಿಸಲು ಅವಕಾಶ ಮಾಡಿಕೊಡಲಾಯಿತು.

ಶಾಸಕ ಬಿ.ಜಿ.ಜ್ಯೋತಿ ಗಣೇಶ್, ಸಂಸದ ಜಿ.ಎಸ್.ಬಸವರಾಜು, ಕಾರ್ಮಿಕರಿಗೆ ಊಟದ ಪ್ಯಾಕೆಟ್‌, ಕುಡಿಯುವ ನೀರು, ಬಿಸ್ಕತ್ ವ್ಯವಸ್ಥೆ ಮಾಡಿದ್ದರು.

‘ನಿಮ್ಮ ಆರೋಗ್ಯ ಮುಖ್ಯ. ಈಗ ಊರಿಗೆ ಹೋಗಿ ಕುಟುಂಬದವರನ್ನು ಸೇರಿಕೊಳ್ಳಿ. ನಂತರ ಮತ್ತೆ ಇಲ್ಲಿಗೆ ಬಂದು ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಬಹುದು’ ಎಂದುಜ್ಯೋತಿಗಣೇಶ್ ಕಿವಿಮಾತು ಹೇಳಿದರು.

ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರಕುಮಾರ್, ಉಪವಿಭಾಗಾಧಿಕಾರಿ ಅಜಯ್, ತಹಶೀಲ್ದಾರ್ ಮೋಹನ್, ಜಿಲ್ಲಾ ಕಾರ್ಮಿಕ ಅಧಿಕಾರಿ ಸುಭಾಷ್ ಆಲದಕಟ್ಟಿ, ಸಿಪಿಐ ನವೀನ್ ಇದ್ದರು.

***

765 ಕಾರ್ಮಿಕರ ‍ಪ್ರಯಾಣ

24 ಬಸ್‍ಗಳಲ್ಲಿ 765 ಕಾರ್ಮಿಕರ ‍ಪ್ರಯಾಣ ಬೆಳೆಸಿದರು. ತುಮಕೂರು ಬಸ್ ನಿಲ್ದಾಣದಿಂದ ಮುದ್ದೇಬಿಹಾಳ, ರಾಯಚೂರು, ಶಿವಮೊಗ್ಗ, ಹಾವೇರಿ, ಕಲ್ಬುರ್ಗಿ, ಬಾಗಲಕೋಟೆ, ಹುಬ್ಬಳ್ಳಿ, ಬೆಂಗಳೂರು, ಯಾದಗಿರಿ, ರಾಯಚೂರು, ಬಳ್ಳಾರಿ, ಹಾಸನ, ಶಿವಮೊಗ್ಗ ಜಿಲ್ಲೆಗಳಿಗೆ 13 ಬಸ್‍ಗಳಲ್ಲಿ 438 ಕಾರ್ಮಿಕರು ಪ್ರಯಾಣ ಮಾಡಿದರು.

ಗುಬ್ಬಿ ಬಸ್ ನಿಲ್ದಾಣದಿಂದ ಕಲ್ಬುರ್ಗಿ ಜಿಲ್ಲೆಗೆ 30, ಕುಣಿಗಲ್‍ನಿಂದ ಕರಟಗಿ ಹಾಗೂ ಬಾಗಲಕೋಟೆ, ವಿಜಯಪುರ ಜಿಲ್ಲೆಗೆ 73, ಮಧುಗಿರಿಯಿಂದ ತುಮಕೂರಿಗೆ 22, ಚಿಕ್ಕನಾಯಕನಹಳ್ಳಿಯಿಂದ ಬೆಂಗಳೂರು ಹಾಗೂ ವಿಜಯಪುರಕ್ಕೆ 91, ತುರುವೇಕೆರೆಯಿಂದ ಬೆಂಗಳೂರು, ರಾಯಚೂರು ಹಾಗೂ ವಿಜಯಪುರಕ್ಕೆ 111 ಪ್ರಯಾಣಿಕರು 11 ಬಸ್‍ಗಳಲ್ಲಿ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT