ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತಿಪಟೂರು | ಮೂಲ ಸೌಕರ್ಯಗಳಿಂದ ದೂರ ಉಳಿದ ಸರ್ಕಾರಿ ಶಾಲೆಗಳು: ಶಿಕ್ಷಕರ ಕೊರತೆ

ಪ್ರಶಾಂತ್ ಕೆ.ಆರ್‌.
Published 21 ಜೂನ್ 2024, 7:00 IST
Last Updated 21 ಜೂನ್ 2024, 7:00 IST
ಅಕ್ಷರ ಗಾತ್ರ

ತಿಪಟೂರು: ತಾಲ್ಲೂಕಿನ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂಲ ಸೌಕರ್ಯಗಳಿಲ್ಲದೆ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮಳೆಯಲ್ಲಿ ನೆನೆಯುತ್ತ, ಬಿಸಿಲಲ್ಲಿ ಒಣಗುತ್ತ ಶಿಥಿಲಾವಸ್ಥೆಯ ಕಟ್ಟಡದಲ್ಲಿ ಆತಂಕದಿಂದ ಕುಳಿತು ಪಾಠ ಕೇಳುವ ಸ್ಥಿತಿ ಇದೆ.

ತಾಲ್ಲೂಕಿನ ಹುಚ್ಚಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಚ್ಚನಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 1990ರಲ್ಲಿ ಪ್ರಾರಂಭವಾಗಿದೆ.  ಇಲ್ಲಿ ಒಂದರಿಂದ ಏಳನೇ ತರಗತಿಯವರೆಗೆ ಒಟ್ಟು 118 ವಿದ್ಯಾರ್ಥಿಗಳು ದಾಖಲಾಗಿದ್ದು, ಐವರು ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಶಾಲೆಯಲ್ಲಿ ಏಳು ಕೊಠಡಿಗಳಿದ್ದು ಅದರಲ್ಲಿ ಒಂದು ಮುಖ್ಯ ಶಿಕ್ಷಕರ ಕೊಠಡಿ. ಮೂರು ಕೊಠಡಿಗಳು ಶಿಥಿಲ ವ್ಯವಸ್ಥೆ ತಲುಪಿವೆ. ಉಳಿದ ಮೂರು ಕೊಠಡಿಗಳಲ್ಲಿ ಎರಡು ತರಗತಿಗಳನ್ನು ಒಟ್ಟಾಗಿ ಸೇರಿಸಿಕೊಂಡು ಕಲಿಸಲಾಗುತ್ತಿದೆ. ಶಿಥಿಲಗೊಂಡ ಕೊಠಡಿಯಲ್ಲಿಯೇ ಮೂರು ಮತ್ತು ನಾಲ್ಕನೇ ತರಗತಿ ವಿದ್ಯಾರ್ಥಿಗಳಿಗೆ ಕಲಿಕೆ ನಡೆಯುತ್ತಿದೆ.

ಈ ಶಾಲೆಗೆ ಪಕ್ಕದ ಗ್ರಾಮಗಳಾದ ರಾಮಶೆಟ್ಟಿಹಳ್ಳಿ, ಮೀಸೆತಿಮ್ಮನಹಳ್ಳಿ, ಹುಚ್ಚನಹಟ್ಟಿ, ಆದಿಲಕ್ಷ್ಮಿನಗರದಿಂದ ಬರುವ ಬಡ ಹಾಗೂ ಮಧ್ಯಮ ವರ್ಗಕ್ಕೆ ಸೇರಿದ ಕುಟುಂಬದ ಮಕ್ಕಳು ವಿಧ್ಯಾಭ್ಯಾಸಕ್ಕೆ ಬರುತ್ತಾರೆ. ಹುಚ್ಚನಹಟ್ಟಿ ಶಾಲೆ ಸುತ್ತಮುತ್ತ ಐದಾರು ತೆಂಗಿನಕಾಯಿ ಫ್ಯಾಕ್ಟರಿಗಳಿದ್ದು ಇಲ್ಲಿ ಹೊರ ರಾಜ್ಯದಿಂದ ಬಂದ ಕೂಲಿ ಕಾರ್ಮಿಕರ ಮಕ್ಕಳು ಓದುತ್ತಿದ್ದಾರೆ.

ಶಾಲೆಯ ನೆಲ ಕಿತ್ತು ಗುಂಡಿ ಬಿದ್ದಿದೆ. ಕಿಟಕಿಗಳು ಮುರಿದು ಹೋಗಿವೆ. ಮಳೆ ಬಂದರೆ ಕೊಠಡಿಯ ತುಂಬಾ ನೀರು ನಿಲ್ಲುತ್ತದೆ, ಹೆಂಚುಗಳು ಒಡೆದು ಹೋಗಿ ಬಿಸಿಲು ಬೀಳುತ್ತಿದೆ. ಪಾಠ ಕೇಳಲು ಸಾಧ್ಯವಾಗುತ್ತಿಲ್ಲ ಎನ್ನುವುದು ವಿದ್ಯಾರ್ಥಿಗಳ ಗೋಳು.

ಮಳೆ ಬಂದ ಸಂದರ್ಭದಲ್ಲಿ ಕಟ್ಟಡ ಸೋರುವುದರಿಂದ ವಿಧಿ ಇಲ್ಲದೆ ಪುಸ್ತಕಗಳನ್ನು ತಲೆ ಮೇಲೆ ಇಟ್ಟುಕೊಂಡು ಕುಳಿತುಕೊಳ್ಳಬೇಕಿದೆ ಎನ್ನುತ್ತಾರೆ ವಿದ್ಯಾರ್ಥಿಗಳು.

ಬಡವರು ಮಕ್ಕಳ ಭವಿಷ್ಯದ ಬುನಾದಿಯಾಗಿರುವ ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಇಲ್ಲದಿದ್ದರೆ ಉತ್ತಮ ಜ್ಞಾನ ಸಂಪಾದನೆ ಅಸಾಧ್ಯವಾಗುತ್ತದೆ. ಕೂಡಲೇ ಶಾಲೆಗೆ ನೂತನ ಕಟ್ಟಡ ನೀಡಿದರೆ ಹೆಚ್ಚಿನ ಮಕ್ಕಳನ್ನು ಸರ್ಕಾರಿ ಶಾಲೆಯತ್ತ ಸೆಳೆಯುವಂತೆ ಮಾಡಬಹುದು ಎನ್ನುವುದು ಜನರ ಅಭಿಪ್ರಾಯ.

ªಹುಚ್ಚನಹಟ್ಟಿ ಶಾಲೆಯ ಹೊರ ಭಾಗ
ªಹುಚ್ಚನಹಟ್ಟಿ ಶಾಲೆಯ ಹೊರ ಭಾಗ
ಕೊಠಡಿ ಶಿಥಿಲಾವ್ಯವಸ್ಥೆಯ ಬಗ್ಗೆ ಈಗಾಗಲೇ ಪಿಡಿಒ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಗಮನಕ್ಕೆ ತರಲಾಗಿದೆ. ಕೊಠಡಿಗಳ ಸಮಸ್ಯೆ ಇರುವುದರಿಂದ ಎರೆಡೆರೆಡು ತರಗತಿಗಳನ್ನು ಒಟ್ಟುಗೊಡಿಸಿ ತರಗತಿ ನಡೆಸಲಾಗುತ್ತಿದೆ.
ಶೈಲಜಾ ಮುಖ್ಯ ಶಿಕ್ಷಕಿ ಹುಚ್ಚನಹಟ್ಟಿ
ಶಿಥಿಲ ಕೊಠಡಿಯಲ್ಲಿ ಕಲಿಕೆ ಬೇಡ
ತಾಲ್ಲೂಕಿನಲ್ಲಿ ಶಿಥಿಲಾವ್ಯವಸ್ಥೆಯಲ್ಲಿರುವ ಶಾಲಾ ಕೊಠಡಿಗಳನ್ನು ಪಟ್ಟಿ ಮಾಡಿ ಕಾರ್ಯಪಾಲಕ ಎಂಜಿನಿಯರ್‌ಗೆ ತಿಳಿಸಲಾಗಿದೆ. ಜಿಲ್ಲಾ ಪಂಚಾಯಿತಿ ಸಿಇಒ ಆದೇಶದಂತೆ ನೆಲಸಮಗೊಳಿಸಲಾಗುವುದು. ಶಿಥಿಲಾವ್ಯವಸ್ಥೆಯಲ್ಲಿರುವ ಕೊಠಡಿಗಳಲ್ಲಿ ಯಾವುದೇ ವಿದ್ಯಾರ್ಥಿಗಳನ್ನು ಕೂರಿಸಿ ತರಗತಿಗಳನ್ನು ನೆಡಸಬಾರದು ಎಂದು ಈಗಾಗಲೇ ಆದೇಶಿಸಲಾಗಿದೆ. ಚಂದ್ರಯ್ಯ ಕ್ಷೇತ್ರ ಶಿಕ್ಷಣಾಧಿಕಾರಿ
30 ಕೊಠಡಿ ಸಂಪೂರ್ಣ ಶಿಥಿಲ
ತಾಲ್ಲೂಕಿನಲ್ಲಿ 158 ಕಿರಿಯ ಪ್ರಾಥಮಿಕ ಶಾಲೆಗಳಿದ್ದು ಅದರಲ್ಲಿ 2391 ವಿದ್ಯಾರ್ಥಿಗಳಿದ್ದಾರೆ. 100 ಹಿರಿಯ ಪ್ರಾಥಮಿಕ ಶಾಲೆಗಳಿದ್ದು ಅದರಲ್ಲಿ 6135 ಹಾಗೂ 16 ಪ್ರೌಢಶಾಲೆಗಳಲ್ಲಿ 2593 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಒಟ್ಟು 274 ಸರ್ಕಾರಿ ಶಾಲೆಗಳಿದ್ದು 11119 ವಿದ್ಯಾರ್ಥಿಗಳು ಓದುತ್ತಿದ್ದಾರೆ. ತಾಲ್ಲೂಕಿನಲ್ಲಿ ಎಲ್ಲ ಶಾಲೆಗಳು ಸೇರಿ ಒಟ್ಟು 1130 ಕೊಠಡಿಗಳಿವೆ. ಅವುಗಳಲ್ಲಿ 823 ಕೊಠಡಿಗಳು ಸುಸ್ಥಿತಿಯಲ್ಲಿವೆ. 294 ಕೊಠಡಿಗಳಿಗೆ ದುರಸ್ತಿ ಅಗತ್ಯವಿದೆ. 30 ಕೊಠಡಿಗಳು ಸಂಪೂರ್ಣ ಶಿಥಿಲಗೊಂಡಿವೆ. ಸದ್ಯ ತಾಲ್ಲೂಕಿನಲ್ಲಿ 27 ಕೊಠಡಿಗಳಿಗೆ ಬೇಡಿಕೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT