ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಿತರಿಗೂ ಕಾನೂನು ಅರಿವಿನ ಕೊರತೆ

Last Updated 8 ನವೆಂಬರ್ 2021, 4:35 IST
ಅಕ್ಷರ ಗಾತ್ರ

ತುಮಕೂರು: ದೇಶದಲ್ಲಿ ಶಿಕ್ಷಿತರಿದ್ದರೂ ಕಾನೂನಿನ ಅರಿವಿಲ್ಲ. ಹಾಗಾಗಿಯೇ ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ. ಇದನ್ನು ಮನಗಂಡು ಕಾನೂನು ಸೇವಾ ಪ್ರಾಧಿಕಾರದಿಂದ ನ್ಯಾಯ ಕೊಡಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ವಕೀಲರ ಸಂಘದ ಆಶ್ರಯದಲ್ಲಿ ಭಾರತದ 75ನೇ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ನಗರದ ಗಾಜಿನ ಮನೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ಯಾನ್ ಇಂಡಿಯಾ ಕಾನೂನು ಅರಿವು ಅಭಿಯಾನ ಉದ್ಘಾಟಿಸಿ ಮಾತನಾಡಿದರು.

ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾದವರು, ಹೆಣ್ಣು ಮಕ್ಕಳ ಮೇಲೆ ಆಸಿಡ್ ದಾಳಿ ಮಾಡಿದವರನ್ನು ಗಲ್ಲಿಗೇರಿಸುವಂತಹ ಕಾನೂನು ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದರು.

ನ್ಯಾಯಾಂಗವು ದೇಶದ ಒಳಗಡೆ ನಡೆಯುವ ಅನ್ಯಾಯ, ಅಕ್ರಮ, ದಬ್ಬಾಳಿಕೆ ಸರಿಪಡಿಸಲು ಕಾರ್ಯನಿರ್ವಹಿಸುತ್ತಿದೆ. ಜತೆಗೆ ಸರ್ವರಿಗೂ ನ್ಯಾಯದಾನ ದೊರಕಿಸಲು ಕಾನೂನು ಅರಿವು ಮೂಡಿಸುತ್ತಿದೆ. ಎಲ್ಲರಿಗೂ ನ್ಯಾಯ ದೊರಕಿಸಿಕೊಡಲು ಲೋಕ ಅದಾಲತ್ ನಡೆಸಲಾಗುತ್ತಿದೆ. ಈ ಕಾರ್ಯದಲ್ಲಿ ಜಿಲ್ಲೆ ನಾಲ್ಕು ಬಾರಿ ಪ್ರಥಮ ಸ್ಥಾನ ಪಡೆದಿರುವುದು ಹೆಮ್ಮೆಯ
ಸಂಗತಿ ಎಂದು ಹರ್ಷ
ವ್ಯಕ್ತಪಡಿಸಿದರು.

ಹಣ, ಅಧಿಕಾರದ ವ್ಯಾಮೋಹಕ್ಕಾಗಿ ಮಕ್ಕಳಿಂದ ದೂರವಾಗುವ, ಅವರಿಂದ ತೊಂದರೆಗೆ ಒಳಗಾಗುವ ಪೋಷಕರ ರಕ್ಷಣೆಗಾಗಿ ಹಿರಿಯ ನಾಗರಿಕರ ಕಾಯ್ದೆ ಜಾರಿಗೆ ತರಲಾಗಿದೆ. ಮಕ್ಕಳು ಹೆತ್ತವರನ್ನುನೋಡಿ ಕೊಳ್ಳದಿದ್ದರೆ ಪೋಷಕರೇ ತಮ್ಮ ಆಸ್ತಿಯನ್ನು ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಚಲನಚಿತ್ರ ಮಂದಿರಗಳಲ್ಲಿ ರಾಷ್ಟ್ರಗೀತೆ ನಂತರ ಕಾನೂನು ಸೇವಾ ಪ್ರಾಧಿಕಾರದ ಬಗ್ಗೆ ಮಾಹಿತಿ ಪ್ರಸಾರ ಮಾಡಬೇಕು ಎಂದರು.

ಜಿಲ್ಲೆಯ ಆಡಳಿತಾತ್ಮಕ ನ್ಯಾಯಮೂರ್ತಿ ಜಿ.ನರೇಂದರ್ ಅವರು, ‘ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಕಾನೂನು ಸೇವಾ ಕೆಡೆಟ್ ಕಾಪ್ಸ್ ಎಂಬ ಸ್ವಯಂಸೇವಕರು ಹಾಗೂ ವಿದ್ಯಾರ್ಥಿ ತಂಡದ ಮೂಲಕ ಅರಿವು ಮೂಡಿಸುತ್ತಿರುವ ಕಾರ್ಯ ಮಾದರಿಯಾಗಿದೆ’
ಎಂದು ಮೆಚ್ಚುಗೆವ್ಯಕ್ತಪಡಿಸಿದರು.

ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್.ಶಶಿಧರ ಶೆಟ್ಟಿ ಅವರು, ‘ರಾಜ್ಯದಲ್ಲಿರುವ 29 ಸಾವಿರ ಹಳ್ಳಿಗಳಲ್ಲೂ ಸೇವಾ ಪ್ರಾಧಿಕಾರದ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸಲು ಯೋಜನೆ ರೂಪಿಸಲಾಗಿದೆ. ಹಿರಿಯ ವಕೀಲರು ಉಚಿತವಾಗಿ ಪ್ರಕರಣಗಳನ್ನು ತೆಗೆದುಕೊಳ್ಳುವ ಮೂಲಕ ಸರ್ವರಿಗೂ ಸಮಾನವಾದ ನ್ಯಾಯ ಕಲ್ಪಿಸಲು ಮುಂದೆ ಬರಬೇಕು’ ಎಂದು ಸಲಹೆ
ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಜಿ.ಎಸ್.ಸಂಗ್ರೇಶಿ ಅವರು, ‘ಸಮಾಜದ ಕಟ್ಟ ಕಡೆಯ ಪ್ರಜೆಗೂ ನ್ಯಾಯ ಸಿಗಬೇಕು ಎಂಬುದರ ಜತೆಗೆ ಕೇಂದ್ರ, ರಾಜ್ಯ ಸರ್ಕಾರಗಳ ಯೋಜನೆಗಳನ್ನು ಜನರಿಗೆ ತಲುಪಿಸುವ ದೃಷ್ಟಿಯಿಂದ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ’ ಎಂದು ವಿವರಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್, ಜಿ.ಪಂ ಸಿಇಒ ಕೆ.ವಿದ್ಯಾಕುಮಾರಿ, ಎಸ್‌ಪಿ ಆರ್‌.ಕೆ.ಶಹಾಪೂರವಾಡ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಜಿಲ್ಲಾ ವಕೀಲರ
ಸಂಘದ ಅಧ್ಯಕ್ಷ ದೊಡ್ಡಮನೆ ಗೋಪಾಲಗೌಡ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT