ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ವಹಣೆ ಕೊರತೆ: ಸೊರಗಿದ ಉದ್ಯಾನ

ಮಧುಗಿರಿ ಪುರಸಭೆ ವ್ಯಾಪ್ತಿಯಲ್ಲಿವೆ 74 ಉದ್ಯಾನ * ನಡಿಗೆ ಪಥ, ಆಟಿಕೆ, ಮೂಲ ಸೌಕರ್ಯಗಳೂ ಇಲ್ಲ
Last Updated 19 ಏಪ್ರಿಲ್ 2021, 4:14 IST
ಅಕ್ಷರ ಗಾತ್ರ

ಮಧುಗಿರಿ: ಉದ್ಯಾನವೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಮಕ್ಕಳಿಂದ, ವಯೋವೃದ್ಧರವರೆಗೆ ಎಲ್ಲರೂ ಇಷ್ಟಪಡುವ ಸುಂದರ ಸ್ಥಳ. ಪ್ರಾಣಿ, ಪಕ್ಷಿಗಳಿಗೆ ಉದ್ಯಾನಗಳೆಂದರೆ ಮೆಚ್ಚು. ಪಟ್ಟಣದಲ್ಲಿರುವ ಉದ್ಯಾನಗಳನ್ನು ಅಭಿವೃದ್ಧಿಗೊಳಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯ.

ಪುರಸಭೆ ವ್ಯಾಪ್ತಿಯಲ್ಲಿ 30 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. 23 ವಾರ್ಡ್‌ಗಳಿವೆ. ಹೊಸ ಹೊಸ ಲೇಔಟ್‌ಗಳು ನಿರ್ಮಾಣವಾಗುತ್ತಿವೆ. ಇಂತಹ ಲೇಔಟ್‌ಗಳಲ್ಲಿ ಪಾರ್ಕ್‌ಗಳಿಗೆಂದೇ ಸ್ಥಳ ಮೀಸಲು ಇಡುತ್ತಿದ್ದಾರೆ. ಮೀಸಲಿಡುವ ಸ್ಥಳಗಳನ್ನು ಕೆಲವರು ಒತ್ತುವರಿ ಮಾಡಿಕೊಂಡು ಮನೆಗಳನ್ನು ನಿರ್ಮಾಣ ಮಾಡುತ್ತಿದ್ದರೂ, ಸಂಬಂಧಪಟ್ಟ ಪುರಸಭೆ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿದೆ.

ಪುರಸಭೆ ವ್ಯಾಪ್ತಿಯಲ್ಲಿ ಒಟ್ಟು 74 ಉದ್ಯಾನಗಳಿವೆ. ಆದರೆ ನಾಲ್ಕರಲ್ಲಿ ಮಾತ್ರ ಸ್ವಲ್ಪ ಅಭಿವೃದ್ಧಿ ಮಾಡಲಾಗಿದೆ. ಆದರೆ ಸರಿಯಾಗಿ ನಿರ್ವಹಣೆ ಇಲ್ಲದೇ ಆ ಪಾರ್ಕ್‌ಗಳಲ್ಲೂ ಅನುಪಯುಕ್ತ ಗಿಡ ಬೆಳೆದು, ಕ್ರಿಮಿಕೀಟಗಳ ಆವಾಸ ಸ್ಥಾನಗಳಾಗಿ ಮಾರ್ಪಟ್ಟಿವೆ.

ಪಟ್ಟಣದ ಸುತ್ತಲೂ ಬೆಟ್ಟ- ಗುಡ್ಡಗಳ ಸಾಲು ಇರುವುದರಿಂದ ಬಿಸಿಲಿನ ತಾಪಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ರಸ್ತೆಯ ಬದಿಯಲ್ಲಿದ್ದ ದೊಡ್ಡ ದೊಡ್ಡ ಮರಗಳನ್ನು ರಸ್ತೆಯ ಅಭಿವೃದ್ಧಿ ಹೆಸರಿನಲ್ಲಿ ಕಡಿದಿರುವುದರಿಂದ ಜನರು ನೆರಳಿಗಾಗಿ ಹುಡುಕಾಡುವಂತಾಗಿದೆ.

ಪುರಸಭೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೆಲ ಉದ್ಯಾನಗಳನ್ನು ಅಭಿವೃದ್ಧಿ ಮಾಡಿದೆ. ಆದರೆ ಸರಿಯಾಗಿ ಸಿಬ್ಬಂದಿ ನೇಮಿಸದೆ ನಿರ್ವಹಣೆ ಇಲ್ಲದೇ ಎಮ್ಮೆ, ಹಸು ಹಾಗೂ ಹಂದಿಗಳ ಪಾಲಾಗಿದೆ. ಉದ್ಯಾನದಲ್ಲಿದ್ದ ಗಿಡಗಳು ಒಣಗಿ ಹೋಗಿವೆ.

ಪುರಸಭೆ ವ್ಯಾಪ್ತಿಯಲ್ಲಿ ಹೊಸದಾಗಿ ಲೇಔಟ್ ನಿರ್ಮಿಸುತ್ತಿರುವ ಭಾಗಗಳಲ್ಲಿ ಪಾರ್ಕ್‌ಗೆ ಮೀಸಲಿಟ್ಟ ಜಾಗದ ಸುತ್ತಲೂ ಸಸಿಗಳ ರಕ್ಷಣೆಗಾಗಿ ಗ್ರಿಲ್ ಮತ್ತು ದ್ವಾರದ ಬಾಗಿಲುಗಳನ್ನು ಅಳವಡಿಸಿ ಪಾರ್ಕ್‌ಗಳಲ್ಲಿ ಗಿಡ, ಮಕ್ಕಳ ಆಟದ ಸಾಮಗ್ರಿಗಳನ್ನು ಅಳವಡಿಸಲಾಗುತ್ತಿದೆ. ಆದರೆ ದಿನಗಳು ಕಳೆದಂತೆ ಪಾರ್ಕ್‌ಗಳಲ್ಲಿ ಅಳವಡಿಸಿರುವ ಗ್ರಿಲ್ ಮತ್ತು ದ್ವಾರದ ಬಾಗಿಲುಗಳು ಮುರಿದು ಇತರರ ಪಾಲಾಗುತ್ತಿವೆ.

ನೂತನವಾಗಿ ನಿರ್ಮಿಸಿರುವ ಲೇಔಟ್‌ನ ಕೆಲ ಪಾರ್ಕ್‌ಗಳು ಮದ್ಯವ್ಯಸನಿಗಳಿಗೆ ಆಶ್ರಯ ತಾಣವಾಗಿದೆ. ಪಾರ್ಕ್‌ನಲ್ಲಿಯೇ ಕುಡಿದು ಜೋರಾಗಿ ಚೀರಾಟ ಹಾಗೂ ಗಲಾಟೆ ಮಾಡುತ್ತಿರುತ್ತಾರೆ. ಇದನ್ನು ಪ್ರಶ್ನಿಸಿದ ಅಕ್ಕ- ಪಕ್ಕದ ಜನರ ಮೇಲೆ ಗಲಾಟೆಗೆ ಮುಂದಾಗುತ್ತಾರೆ ಎಂದು ಪಟ್ಟಣ ನಿವಾಸಿಯೊಬ್ಬರು ದೂರಿದರು.

ಪಟ್ಟಣದಲ್ಲಿನ ಉದ್ಯಾನಗಳಲ್ಲಿ ವಾಯು ವಿಹಾರಿಗಳಿಗೆ ಉತ್ತಮ ಸೌಲಭ್ಯಗಳಿಲ್ಲದೆ ಉದ್ಯಾನಕ್ಕೆ ಹೋಗಲು ಹಿಂದೇಟು ಹಾಕುತ್ತಾರೆ. ಎಪಿಎಂಸಿ ಹಿಂಭಾಗದಲ್ಲಿರುವ ಉದ್ಯಾನದಲ್ಲಿ ಮಕ್ಕಳ ಆಟಿಕೆಗಳಿಗೆ ಬಳಸಲಾದ ಕಬ್ಬಿಣದ ರಾಡ್‌ಗಳು ತುಕ್ಕು ಹಿಡಿದು ಮುರಿದು ಹೋಗಿ
ಹಲವು ತಿಂಗಳು ಕಳೆದರೂ, ದುರಸ್ತಿಯಾಗಿಲ್ಲ.

ನಿರ್ವಹಣೆ ಕೊರತೆಯಿಂದಾಗಿ 74ಕ್ಕೂ ಹೆಚ್ಚು ಪಾರ್ಕ್‌ಗಳಿಗೆ ಕಾಲಿಡದಂತಾಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉದ್ಯಾನಗಳ ಅಭಿವೃದ್ಧಿಗೆ ಮನಸ್ಸು ಮಾಡಿದರೆ ಅನುಕೂಲವಾಗುತ್ತದೆ ಎನ್ನುವುದು ಪಟ್ಟಣ ನಿವಾಸಿಗಳ ಒತ್ತಾಯ.

ಪುರಸಭೆ ಮುಂಭಾಗವಿರುವ ಪಾರ್ಕ್‌ನಲ್ಲಿ ಮಾತ್ರ ಒಂದಿಷ್ಟು ಆಟದ ಸಾಮಗ್ರಿ, ಬೆಂಚ್, ಲಾನ್ ಹಾಗೂ ನಡಿಗೆ ಪಥ ಹಾಗೂ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ಆದರೆ ಇದು ಸಾಲದು ಪಟ್ಟಣದ ಹೃದಯ ಭಾಗದಲ್ಲಿರುವ ಪಾರ್ಕ್‌ನ್ನು ಸಾಕಷ್ಟು ರೀತಿಯಲ್ಲಿ ಅಭಿವೃದ್ಧಿಪಡಿಸಬೇಕು ಎನ್ನುವುದು ಜನರು ಒತ್ತಾಯ.

ಪಟ್ಟಣದ ಪಾರ್ಕ್‌ಗಳಲ್ಲಿ ಸೌಲಭ್ಯಗಳಿಲ್ಲದೆ ದೂರದ ವಾರ್ಡ್‌ಗಳಿಂದ ವಾಕ್ ಮಾಡಲು ರಾಜೀವ್‌ಗಾಂಧಿ ಕ್ರೀಡಾಂಗಣಕ್ಕೆ ನೂರಾರು ಜನರು ಬರುತ್ತಾರೆ. ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಡುವುದರಿಂದ ವಾಕಿಂಗ್ ಮಾಡುವ ಮಂದಿಗೆ ಬಾಲು ಬಿದ್ದು ಪೆಟ್ಟುಗಳಾಗಿ ಮಾತಿನ ಚಕಮಕಿ ನಡೆದಿರುವ ನಿದರ್ಶನಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT