ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊರಟಗೆರೆ | ಬಸ್‌ ಕಾಣದ ಗಡಿ ಗ್ರಾಮಗಳು: ವಿದ್ಯಾರ್ಥಿಗಳ ಪರದಾಟ

ಶಾಲೆ, ಕಾಲೇಜಿಗೆ ತೆರಳಲು ವಿದ್ಯಾರ್ಥಿಗಳ ಪರದಾಟ: ಸ್ವಂತ ವಾಹನವೇ ಆಸರೆ
Published 10 ಜೂನ್ 2024, 7:27 IST
Last Updated 10 ಜೂನ್ 2024, 7:27 IST
ಅಕ್ಷರ ಗಾತ್ರ

ಕೊರಟಗೆರೆ: ತಾಲ್ಲೂಕಿನ ಗಡಿಭಾಗದ ಗ್ರಾಮಗಳು ಇಂದಿಗೂ ಸಾರಿಗೆ ಸಂಪರ್ಕದಿಂದ ವಂಚಿತವಾಗಿವೆ. ಅಲ್ಲಿನ ಜನ ತಾಲ್ಲೂಕು, ಜಿಲ್ಲಾ ಕೇಂದ್ರ ತಲುಪಲು ನಿತ್ಯ ಸಾಹಸ ಪಡಬೇಕಿದೆ.

ಕೊರಟಗೆರೆ ಮೂರು ಜಿಲ್ಲಾ ಗಡಿ ಸಂಪರ್ಕಿಸುವ ಸಣ್ಣ ತಾಲ್ಲೂಕು. ಇಂದಿಗೂ ಕೆಲ ಗ್ರಾಮಗಳು ಮೂಲ ಸೌಕರ್ಯಗಳಿಂದ ದೂರವೇ ಉಳಿದಿವೆ. ಬೊಮ್ಮಲದೇವಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುತ್ತಮುತ್ತಲ ಕೆಲ ಗ್ರಾಮಗಳು ಇದಕ್ಕೆ ಹೊರತಲ್ಲ. ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು ಜಿಲ್ಲೆ ಗಡಿ ಕೂಡ ಇದೇ ಪಂಚಾಯಿತಿ ವ್ಯಾಪ್ತಿಗೆ ಬರಲಿದೆ. ಗ್ರಾಮ ಪಂಚಾಯಿತಿ ಕೇಂದ್ರ ಸೇರಿದಂತೆ ಆ ಭಾಗದ 25ಕ್ಕೂ ಹೆಚ್ಚು ಗ್ರಾಮಗಳಿಗೆ ಸಾರಿಗೆ ಸಂಪರ್ಕ ಮರೀಚಿಕೆಯಾಗಿದೆ.

ಇಲ್ಲಿನ ಜನರು ದ್ವಿಚಕ್ರವಾಹನ, ಆಟೊ, ಟೆಂಪೊ, ಸರಕು ಸಾಗಣೆ ವಾಹನ, ಟ್ರ್ಯಾಕ್ಟರ್‌ಗಳನ್ನು ಅವಲಂಬಿಸುವುದು ಅನಿವಾರ್ಯ. ಸೂಕ್ತ ಸಾರಿಗೆ ಇಲ್ಲದ ಕಾರಣ ತಾಲ್ಲೂಕು, ಜಿಲ್ಲಾ ಕೇಂದ್ರಗಳಿಗೆ ನಿತ್ಯ ಓಡಾಡುವ ಉದ್ಯೋಗಿಗಳು, ವಿದ್ಯಾರ್ಥಿಗಳ ಪಾಡು ಹೇಳತೀರದಾಗಿದೆ.

ಈ ಭಾಗದ ಹಳ್ಳಿಗಳಿಂದ ಪ್ರತಿ ದಿನ ನೂರಾರು ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ತಾಲ್ಲೂಕು ಕೇಂದ್ರಕ್ಕೆ ಬರಬೇಕು. ಶಾಲೆ, ಕಾಲೇಜು ಸಮಯದಲ್ಲಿ ಬಸ್ ವ್ಯವಸ್ಥೆ ಇಲ್ಲ. ವಿದ್ಯಾರ್ಥಿಗಳು ಆ ಸಮಯಕ್ಕೆ ಬರುವ ಬೈಕ್, ಆಟೊ, ಟ್ರ್ಯಾಕ್ಟರ್, ಲಗೇಜ್ ಆಟೊಗಳಲ್ಲಿ ಸಂಚರಿಸುತ್ತಾರೆ. ಸ್ವಂತ ವಾಹನದಲ್ಲಿ ಸಂಚರಿಲು ಅನುಕೂಲ ಇಲ್ಲದವರು ಹೊಳವನಹಳ್ಳಿವರೆಗೆ 15 ಕಿ.ಮೀ ದೂರ ಸೈಕಲ್‌ನಲ್ಲಿಯೇ ಬರಬೇಕಿದೆ. ಇದರಿಂದಾಗಿ ಈ ಭಾಗದ ಅನೇಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮೊಟುಕುಗೊಳಿಸಿರುವ ನಿದರ್ಶನಗಳಿವೆ.

ಎಸ್‌ಎಸ್‌ಎಲ್‌ಸಿ ಹಾಗೂ ಪಿಯುವರೆಗೆ ವಿದ್ಯಾಭ್ಯಾಸ ಮಾಡಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಓಡಾಡಲು ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಉನ್ನತ ವ್ಯಾಸಂಗಕ್ಕೆ ಹೋಗುವುದೇ ಇಲ್ಲ. ಗಂಡು ಮಕ್ಕಳು ಸೈಕಲ್ ಅಥವಾ ಇತರೆ ವ್ಯವಸ್ಥೆ ಮಾಡಿಕೊಂಡು ಓಡಾಡುತ್ತಾರೆ. ಆದರೆ ಹೆಣ್ಣು ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ  ಮದುವೆ ಮಾಡಿರುವ ಉದಾಹರಣೆಗಳು ಈ ಭಾಗದಲ್ಲಿ ಸಾಕಷ್ಟು ಸಿಗುತ್ತವೆ. ಕೋವಿಡ್ ಸಂದರ್ಭದಲ್ಲಿ ಈ ಭಾಗದಲ್ಲಿ ಎರಡು ಪ್ರಕರಣಗಳಲ್ಲಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕಿಯರಿಗೆ ಮದುವೆ ಮಾಡುವ ಸುದ್ದಿ ತಿಳಿದು ಅಧಿಕಾರಿಗಳು ಹೋಗಿ ತಡೆದಿದಿದ್ದರು.

ಕೊರಟಗೆರೆ ತಾಲ್ಲೂಕಿನ ಬೊಮ್ಮಲದೇವಿಪುರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಆಟೊಗಳಲ್ಲಿ ಕಿಕ್ಕಿರಿದು ತುಂಬಿರುವ ವಿದ್ಯಾರ್ಥಿಗಳು
ಕೊರಟಗೆರೆ ತಾಲ್ಲೂಕಿನ ಬೊಮ್ಮಲದೇವಿಪುರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಆಟೊಗಳಲ್ಲಿ ಕಿಕ್ಕಿರಿದು ತುಂಬಿರುವ ವಿದ್ಯಾರ್ಥಿಗಳು

ನಿತ್ಯ ಈ ಭಾಗದ ಶಾಲಾ ಕಾಲೇಜಿಗೆ ಹೋಗವ ಶಿಕ್ಷಕರ ಸ್ಥಿತಿ ಇನ್ನಷ್ಟು ಕ್ಲಿಷ್ಟಕರ. ಸರಿಯಾದ ಸಾರಿಗೆ ಇಲ್ಲದ ಕಾರಣಕ್ಕೆ ಒಂದು ವರ್ಷ ಬಂದ ಶಿಕ್ಷಕರು ಮತ್ತೊಂದು ವರ್ಷಕ್ಕಾಗಲೇ ಬೇರೆಡೆ ವರ್ಗಾವಣೆ ಮಾಡಿಸಿಕೊಂಡು ಹೋಗುವಂತಾಗಿದೆ. ಇತ್ತೀಚೆಗೆ ಸರ್ಕಾರದಿಂದ ಸಾರಿಗೆ ವ್ಯವಸ್ಥೆ ಇಲ್ಲದ ಕಡೆಗಳಲ್ಲಿ ಕನಿಷ್ಠ ಶಾಲಾ, ಕಾಲೇಜು ವೇಳೆಗೆ ಬಸ್ ಸೌಲಭ್ಯ ಕಲ್ಪಿಸಲಾಗುತ್ತಿದೆ. ಈ ಭಾಗದ ಹಳ್ಳಿಗಳಿಗೂ ಶಾಲಾ ಕಾಲೇಜು ವೇಳೆಗೆ ಬಸ್ ಒದಗಿಸುವಂತೆ ಈಗಾಗಲೇ ಅನೇಕ ಬಾರಿ ಸಾರ್ವಜನಿಕರು ಮನವಿ ಸಲ್ಲಿಸಿದ್ದಾರೆ. ಆದರೂ ಪ್ರಯೋಜನವಾಗಿಲ್ಲ. ಪ್ರತಿ ಬಾರಿ ಚುನಾವಣೆ ಬಂದಾಗಲೂ ಈ ಭಾಗದ ಜನರು ಸೂಕ್ತ ಸಾರಿಗೆಗಾಗಿ ಬೇಡಿಕೆ ಇಡುತ್ತಲೇ ಬಂದಿದ್ದಾರೆ. ಆ ಸಂದರ್ಭದಲ್ಲಿ ಭರವಸೆ ನೀಡಿ ಹೋಗುವ ಜನಪ್ರತಿನಿಧಿಗಳು ಮತ್ತೆ ಇತ್ತ ತಿರುಗಿಯೂ ನೋಡುತ್ತಿಲ್ಲ ಎನ್ನುತ್ತಾರೆ ಸ್ಥಳೀಯರು.

ಮುತ್ತಮ್ಮ
ಮುತ್ತಮ್ಮ
ಈ ವರ್ಷ ಪಿಯು ಮುಗಿದಿದೆ. ಪದವಿಗೆ ಕೊರಟಗೆರೆ ಕಾಲೇಜಿಗೆ ಸೇರಬೇಕು. ಓಡಾಡಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣಕ್ಕೆ ಮನೆಯಲ್ಲಿ ಪೋಷಕರು ಉನ್ನತ ವ್ಯಾಸಂಗಕ್ಕೆ ಕಳಿಸಲು ಹಿಂದೇಟು ಹಾಕುತ್ತಿದ್ದಾರೆ.
ಮುತ್ತಮ್ಮ ವಿದ್ಯಾರ್ಥಿನಿ
ಬಿ.ಆರ್.ಮೇಘನಾ
ಬಿ.ಆರ್.ಮೇಘನಾ
ಕಾಲೇಜಿಗೆ ಹೋಗಬೇಕೆಂದರೆ ಆಟೊಗಳನ್ನೇ ಕಾಯಬೇಕು. ತರಗತಿಗೆ ಹೋಗಲೇಬೇಕು ಎಂದರೆ ಅವರು ಕೇಳಿದಷ್ಟು ಹಣ ಕೊಟ್ಟು ಹೋಗಲೇಬೇಕಾದ ಅನಿವಾರ್ಯತೆ ಇದೆ. ಶಾಲೆ ಕಾಲೇಜು ಸಮಯಕ್ಕೆ ಬಸ್ ಇದ್ದಿದ್ದರೆ ಉತ್ತಮ.
ಬಿ.ಆರ್.ಮೇಘನಾ ವಿದ್ಯಾರ್ಥಿನಿ
ದೀಕ್ಷಿತ್
ದೀಕ್ಷಿತ್
ದಿನ ದುಬಾರಿ ಹಣಕೊಟ್ಟು ಆಟೊಗಳಲ್ಲಿ ಓಡಾಡಲು ಆಗುವುದಿಲ್ಲ. ದ್ವಿಚಕ್ರ ವಾಹನದಲ್ಲಿನ ಓಡಾಟವೂ ಹೊರೆಯಾಗಲಿದೆ. ಹಾಗಾಗಿ ನಿತ್ಯ ಕಾಲೇಜಿಗೆ ಹೋಗಲು 10-15 ಕಿ.ಮೀ ಪ್ರಯಾಣಿಸಲೇಬೇಕು.
ದೀಕ್ಷಿತ್ ವಿದ್ಯಾರ್ಥಿ
ರಾಮಬಾಬು
ರಾಮಬಾಬು
ನನಗೀಗ 65 ವರ್ಷ. ನಾವು ಚಿಕ್ಕವರಿದ್ದಾಗಿಂದಲೂ ಇಲ್ಲಿ ಸರಿಯಾಗಿ ಬಸ್ ವ್ಯವಸ್ಥೆಯಿಲ್ಲ. ಆ ಕಾರಣಕ್ಕೆ ನಮ್ಮ ಜೊತೆಯಲ್ಲಿ ಓದುತ್ತಿದ್ದ ಎಷ್ಟೊ ಜನ ಓದುವುದನ್ನೇ ಬಿಟ್ಟರು. ಈಗಲೂ ಆ ಪರಿಸ್ಥಿತಿ ಇಲ್ಲಿನ ಜನ ಹೊರತಾಗಿಲ್ಲ.
ರಾಮಬಾಬು ಬಿ.ಡಿ.ಪುರ
ಯಾವ್ಯಾವ ಊರಿಗೆ ಬಸ್ ಇಲ್ಲ
ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ಬೊಮ್ಮಲದೇವಿಪುರ ಗ್ರಾಮ ಪಂಚಾಯಿತಿಯ ಅಕ್ಕಾಜಿಹಳ್ಳಿ ಚಿಕ್ಕಪಾಳ್ಯ ಅವುದಾರನಹಳ್ಳಿ ದೊಡ್ಡಪಾಳ್ಯ ಹೊಸಪಾಳ್ಯ ಚುಂಚೇನಹಳ್ಳಿ ಕರಿಚಿಕ್ಕನಹಳ್ಳಿ ಚಿಟ್ಟೇಪಲ್ಲಿಪಾಳ್ಯ ಬೊಮ್ಮಲದೇವಿಪುರ ಲಿಂಗದವೀರನಹಳ್ಳಿ ಮರಾಠಿಪಾಳ್ಯ ತಿಗಳರಪಾಳ್ಯ ಕದರಯ್ಯನಪಾಳ್ಯ ಅವಲಯ್ಯನಪಾಳ್ಯ ಮಾರುತಿ ನಗರ ಬ್ಯಾಡರಹಳ್ಳಿ ಸಿರಗೋನಹಳ್ಳಿ ಲಂಕೇನಹಳ್ಳಿ ಮುದ್ದನಹಳ್ಳಿ ಚಟ್ಟೇನಹಳ್ಳಿ ಬಿಳೇಕಲ್ಲಹಳ್ಳಿ ಗೊಡ್ರಹಳ್ಳಿ ತೊಗರಿಘಟ್ಟ ಕರಕಲಘಟ್ಟ ದುಗ್ಗೇನಹಳ್ಳಿ ಹನುಮೇನಹಳ್ಳಿ ಕೋಡ್ಲಹಳ್ಳಿ ಚಿಂಪುಗಾನಹಳ್ಳಿ ಶಕುನಿತಿಮ್ಮನಹಳ್ಳಿ ಹುಚ್ಚವೀರಯ್ಯನಪಾಳ್ಯ ತಿಮ್ಮನಹಳ್ಳಿ ಹೊನ್ನಾರನಹಳ್ಳಿ ತುಂಬುಗಾನಹಳ್ಳಿ ಗ್ರಾಮಗಳಿಗೆ ಬಸ್ ವ್ಯವಸ್ಥೆ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT