ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು | ಕೆರೆಯ ಒಡಲಿಗೆ ತ್ಯಾಜ್ಯ!

ದೇವರಾಯಪಟ್ಟಣ ಕೆರೆಯಲ್ಲಿ ಮದ್ಯದ ಬಾಟಲಿ, ಕೆರೆಯ ಪ್ರದೇಶ ಒತ್ತುವರಿ
Published 6 ಜೂನ್ 2024, 5:18 IST
Last Updated 6 ಜೂನ್ 2024, 5:18 IST
ಅಕ್ಷರ ಗಾತ್ರ

ತುಮಕೂರು: ಸಿದ್ಧಗಂಗಾ ಮಠದ ಉದ್ದಾನ ಶಿವಯೋಗಿ ಕಟ್ಟೆ ಹಾಗೂ ನಗರ ಕೆಲವು ಭಾಗಗಳಿಗೆ ಕುಡಿಯುವ ನೀರು ಪೂರೈಸುವ ದೇವರಾಯಪಟ್ಟಣ ಕೆರೆಯೂ ಈಗ ಕಲುಷಿತಗೊಳ್ಳುತ್ತಿದೆ. ಮದ್ಯದ ಬಾಟಲಿಗಳು, ಪ್ಲಾಸ್ಟಿಕ್‌ ಸೇರಿದಂತೆ ಇತರೆ ತ್ಯಾಜ್ಯ ಕೆರೆ ಸೇರುತ್ತಿದೆ.

ಮಹಾನಗರ ಪಾಲಿಕೆಯ 35ನೇ ವಾರ್ಡ್‌ ವ್ಯಾಪ್ತಿಯಲ್ಲಿರುವ ದೇವರಾಯಪಟ್ಟಣ ಕೆರೆ ಕಳೆದ 2022ರಲ್ಲಿ ಸುರಿದ ಭಾರಿ ಮಳೆಗೆ ಭರ್ತಿಯಾಗಿತ್ತು. 2023ರಲ್ಲಿ ಹೆಚ್ಚಿನ ಮಳೆಯಾಗದ ಕಾರಣ ಕೆರೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಈ ಬಾರಿ ಜಿಲ್ಲೆಯಾದ್ಯಂತ ಉತ್ತಮ ಮಳೆಯ ಮುನ್ಸೂಚನೆ ಸಿಕ್ಕಿದೆ. ಮತ್ತೊಮ್ಮೆ ಕೆರೆ ತುಂಬುವ ಲಕ್ಷಣಗಳು ಕಾಣಿಸುತ್ತಿವೆ.

ಈ ಹಿಂದೆ ಕೆರೆಯ ನೀರನ್ನು ಕೃಷಿ ಚಟುವಟಿಕೆಗಳಿಗೆ ಬಳಕೆ ಮಾಡಲಾಗುತಿತ್ತು. ಆದರೆ, ಈಗ ಅದು ಸಾಧ್ಯವಾಗುತ್ತಿಲ್ಲ. ದೇವರಾಯಪಟ್ಟಣ ಕೆರೆ 59.74 ಎಕರೆ ವಿಸ್ತೀರ್ಣ ಹೊಂದಿದ್ದು, 21.70 ಎಂಸಿಎಫ್‌ಟಿ ನೀರಿನ ಸಂಗ್ರಹ ಸಾಮರ್ಥ್ಯ ಇದೆ. ಸಿದ್ಧಗಂಗಾ ಮಠದ ಸುತ್ತಮುತ್ತಲಿನ ರಾಮದೇವರಬೆಟ್ಟ, ಸಿದ್ಧಗಂಗಾ ಬೆಟ್ಟದಿಂದ ನೀರು ಜರಿಯ ರೂಪದಲ್ಲಿ ಹರಿದು ಕರೆ ಸೇರುತ್ತಿದೆ. ಸದ್ಯ ನೀರು ಹರಿದು ಬರುತ್ತಿದ್ದ ಬಹುತೇಕ ಜರಿಗಳು ಬತ್ತಿ ಹೋಗಿವೆ.

ಕೆರೆಯ ಭಾಗವೂ ಒತ್ತುವರಿಯಾಗಿದ್ದು, ಜರಿಗಳು ಮುಚ್ಚಿ ಹೋಗಿವೆ. ಸೂಕ್ತ ನಿರ್ವಹಣೆ ಇಲ್ಲದೆ ಕೆರೆಯೂ ಹಾಳಾಗುತ್ತಿದೆ. ಕೆರೆಯ ಹತ್ತಿರದಲ್ಲಿ ಕುಡಿಯುವ ನೀರಿನ ಟ್ಯಾಂಕ್‌ ನಿರ್ಮಿಸಿದ್ದು, ಇಲ್ಲಿ ನೀರು ಶುದ್ಧೀಕರಿಸಿ ಸಿದ್ಧಗಂಗಾ ಮಠಕ್ಕೆ ಸರಬರಾಜು ಮಾಡಲಾಗುತ್ತಿದೆ.

‘ಮನೆ– ಅಂಗಡಿ ಮಳಿಗೆಗಳಲ್ಲಿನ ಪ್ಲಾಸ್ಟಿಕ್‌, ತ್ಯಾಜ್ಯವನ್ನು ಕೆರೆಗೆ ಎಸೆಯಲಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಕೆರೆಯ ಉಳಿವಿಗೆ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಇತ್ತ ಸಾರ್ವಜನಿಕರು ಕಸ ಹಾಕುವುದನ್ನು ನಿಲ್ಲಿಸುತ್ತಿಲ್ಲ. ನಗರದಿಂದ ಕಸ ತಂದು ಏರಿಯ ಬಳಿ ಗುಡ್ಡೆ ಹಾಕುತ್ತಿದ್ದಾರೆ’ ಎಂದು ದೇವರಾಯಪಟ್ಟಣದ ನಿವಾಸಿ ದಿನೇಶ್‌ ಅಸಮಾಧಾನ ವ್ಯಕ್ತಪಡಿಸಿದರು.

‘ಏರಿಯ ಪಕ್ಕದ ರಸ್ತೆಯು ಹಾಳಾಗಿದ್ದು, ಮಳೆ ಬಂದರೆ ಕೆಸರುಗದ್ದೆಯಾಗುತ್ತದೆ. ರಸ್ತೆಯಲ್ಲಿ ನೀರು ನಿಂತು ಮುಂದೆ ಹೋಗಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ಬಗ್ಗೆ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ರಸ್ತೆ ಅಭಿವೃದ್ಧಿ ಕುರಿತು ಯಾರೂ ಗಮನ ಹರಿಸುತ್ತಿಲ್ಲ’ ದೇವರಾಯಪಟ್ಟಣ ನಿವಾಸಿಗಳು ದೂರಿದರು.

‘ದೇವರಾಯಪಟ್ಟಣಕ್ಕೆ ಹೊಂದಿಕೊಂಡಂತೆ ಕೆರೆ ಇದ್ದರೂ ಅಭಿವೃದ್ಧಿ ಕೆಲಸಗಳು ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಕೆರೆಯ ಬಳಿ ಸಾರ್ವಜನಿಕರ ಪ್ರವೇಶಕ್ಕೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಇದರಿಂದಾಗಿ ಅಕ್ರಮ ಚಟುವಟಿಕೆಗಳ ತಾಣವಾಗಿ ಬದಲಾಗಿದೆ. ಸಿದ್ಧಗಂಗಾ ಮಠಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಪಕ್ಕದಲ್ಲೇ ಕೆರೆ ಇದ್ದರೂ ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ಮಾತ್ರ ವಿಪರ್ಯಾಸ’ ಎಂದು ಕುಮಾರಸ್ವಾಮಿ ಬೇಸರದ ಮಾತುಗಳನ್ನಾಡಿದರು.

**

ಕೆರೆಯ ಉಳಿವಿಗೆ ಸಲಹೆ

* ಕೆರೆ ಅಭಿವೃದ್ಧಿಪಡಿಸಿ, ಪ್ರವಾಸಿ ತಾಣ ಮಾಡಬಹುದು

* ಅತಿಕ್ರಮ ಪ್ರವೇಶಕ್ಕೆ ನಿರ್ಬಂಧ ವಿಧಿಸುವುದು

* ಕೆರೆಯ ಸುತ್ತ ತಂತಿ ಬೇಲಿ ಹಾಕುವುದು

* ಕೆರೆಯ ಬಗ್ಗೆ ಅರಿವು ಮೂಡಿಸಲು ನಾಮಫಲಕ ಅಳವಡಿಸುವುದು

ದೇವರಾಯಪಟ್ಟಣ ಕೆರೆಯಲ್ಲಿ ಮದ್ಯದ ಬಾಟಲಿ ಕಸ ಕಡ್ಡಿ
ದೇವರಾಯಪಟ್ಟಣ ಕೆರೆಯಲ್ಲಿ ಮದ್ಯದ ಬಾಟಲಿ ಕಸ ಕಡ್ಡಿ

59.74 ಎಕರೆ ವಿಸ್ತೀರ್ಣ 21.70 ಎಂಸಿಎಫ್‌ಟಿ ನೀರು ಸಂಗ್ರಹದ ಸಾಮರ್ಥ್ಯ ಕೆರೆಗೆ ಸಂಪರ್ಕ ಕಲ್ಪಿಸುವ ರಸ್ತೆ ಹಾಳು

ತಂತಿ ಬೇಲಿ ಅಳವಡಿಸಿದೆ ಕೆರೆಯ ಅಭಿವೃದ್ಧಿ ಕೆಲಸಗಳು ಆಗುತ್ತಿವೆ. ಈ ಹಿಂದೆ ಕೆರೆಗೆ ತಂತಿ ಬೇಲಿ ಹಾಕಿದ್ದರು. ಕೆಲವು ಕಡೆಗಳಲ್ಲಿ ಅದು ಹಾಳಾಗಿದೆ. ದೇವರಾಯಪಟ್ಟಣದ ಗ್ರಾಮದ ಕಡೆಗೆ ರಕ್ಷಣೆಯ ದೃಷ್ಟಿಯಿಂದ ಬೇಲಿ ಅಳವಡಿಸಲಾಗಿದೆ. ಈ ಹಿಂದೆ ಕೆರೆಯ ನೀರು ಸುತ್ತಮುತ್ತಲಿನ ಜಮೀನುಗಳಿಗೆ ಪೂರೈಕೆಯಾಗುತ್ತಿತ್ತು. ಈಗ ಅದು ಸಾಧ್ಯವಾಗುತ್ತಿಲ್ಲ. ಬಸವರಾಜು ದೇವರಾಯಪಟ್ಟಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT