ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಅಭ್ಯುದಯಕ್ಕೆ ಸಾಕ್ಷರತೆ ಪೂರಕ

55ನೇ ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆ
Last Updated 14 ಸೆಪ್ಟೆಂಬರ್ 2021, 7:05 IST
ಅಕ್ಷರ ಗಾತ್ರ

ಗುಬ್ಬಿ: ‌‘ಸಾಕ್ಷರತಾ ಪ್ರಮಾಣ ಹೆಚ್ಚುತ್ತಾ ಸಾಗಿದರೆ ದೇಶ ಪ್ರಗತಿ ಪಥದತ್ತ ಸಾಗಲು ಸಾಧ್ಯವಾಗುತ್ತದೆ’ ಎಂದು ತಹಶೀಲ್ದಾರ್ ಆರತಿ ಹೇಳಿದರು.

ಪಟ್ಟಣದಲ್ಲಿಸೋಮವಾರ ತಾಲ್ಲೂಕು ಲೋಕ ಶಿಕ್ಷಣ ಸಮಿತಿಯಿಂದ ಏರ್ಪಡಿಸಿದ್ದ 55ನೇ ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಹಾಗೂ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರಪಂಚದ ಆಗುಹೋಗುಗಳು, ವ್ಯಾವಹಾರಿಕ ಜ್ಞಾನ ತಿಳಿದುಕೊಳ್ಳಲು ಸಾಕ್ಷರರಾಗುವ ಅಗತ್ಯವಿದೆ. ಎಲ್ಲರನ್ನೂ ಸಾಕ್ಷರರನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸೋಣ ಎಂದು
ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್ ಮಾತನಾಡಿ, ಕಡ್ಡಾಯ ಶಿಕ್ಷಣ ಜಾರಿಗೆ ಬಂದ ನಂತರ ಗಣನೀಯವಾಗಿ ಸಾಕ್ಷರತೆ ಪ್ರಮಾಣ ಏರಿಕೆಯಾಗುತ್ತಿದೆ. ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಸಾಕ್ಷರರ ಸಂಖ್ಯೆಯನ್ನು ಹೆಚ್ಚು ಮಾಡಬೇಕು ಎಂದು ಸಲಹೆ
ನೀಡಿದರು.

ದೇಶ ಮತ್ತು ರಾಜ್ಯಗಳ ಅಭಿವೃದ್ಧಿಗೆ ಅಕ್ಷರ ಜ್ಞಾನ ಮುಖ್ಯ. ಮನೆಯಲ್ಲಿರುವ ಅಕ್ಷರಸ್ಥರು, ಅನಕ್ಷರಸ್ಥರನ್ನು ಗುರುತಿಸಿ ಅವರಿಗೆ ಓದು, ಬರಹ ಕಲಿಸಬೇಕು ಎಂದು ಮನವಿ
ಮಾಡಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣಪ್ಪಸ್ವಾಮಿ ಮಾತನಾಡಿ, ಪಟ್ಟಣ ಪಂಚಾಯಿತಿಯ ಪೌರ ಕಾರ್ಮಿಕರಲ್ಲಿ ಅನಕ್ಷರಸ್ಥರನ್ನು ಗುರುತಿಸಿ ಅವರಿಗೂ ಕಲಿಕೆಗೆ ಪ್ರೋತ್ಸಾಹ ನೀಡಲು ಬದ್ಧವಾಗಿದ್ದೇವೆ. ಪಟ್ಟಣ ಪಂಚಾಯಿತಿಯ ಮುಂದಿನ ಸಭೆಯಲ್ಲಿ ಈ ವಿಚಾರ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ತಾಲ್ಲೂಕು ಸಾಕ್ಷರತಾ ಸಂಯೋಜಕ ಅನಂತ ಕುಮಾರ್ ಮಾತನಾಡಿ, ಕೇವಲ ಸಹಿ ಹಾಕೋದು ಕಲಿತರೆ ಸಾಕ್ಷರತೆ ಸಾಧಿಸಲು ಸಾಧ್ಯವಿಲ್ಲ. ಅವರಿಗೆ ಓದುವ, ಬರೆಯುವ ಜೊತೆಗೆ ಲೆಕ್ಕಾಚಾರದ ಕೌಶಲವೂ ಇರಬೇಕಾಗುತ್ತದೆ ಎಂದರು.

ತಾಲ್ಲೂಕಿನ ಗ್ರಾಮ ಪಂಚಾಯಿತಿಯಲ್ಲಿ ಪ್ರಸ್ತುತ ಗೆದ್ದಿರುವ ಸದಸ್ಯರಲ್ಲಿ 17 ಮಂದಿ ಅನಕ್ಷರಸ್ಥರು ಇದ್ದಾರೆ ಎಂಬ ಮಾಹಿತಿ ಇದೆ. ಅವರನ್ನು ಸಾಕ್ಷರರನ್ನಾಗಿ ಮಾಡುವ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಲಯನ್ಸ್ ಸಂಸ್ಥೆಯ ಸಹಕಾರ ಕೋರುತ್ತೇವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಇಒ ನರಸಿಂಹಯ್ಯ, ಲಯನ್ಸ್ ಕ್ಲಬ್‌ನ ತಾಲ್ಲೂಕು ಅಧ್ಯಕ್ಷ ಜಿ.ಬಿ. ಮಲ್ಲಪ್ಪ, ಕಾರ್ಯದರ್ಶಿ ಸಿದ್ದಪ್ಪ ಗುಜ್ಜರಿ, ಸದಸ್ಯರಾದ ಕೃಷ್ಣಮೂರ್ತಿ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಅಧ್ಯಕ್ಷ ಜಿ.ಆರ್. ಶಿವಕುಮಾರ್, ಉಂಡೆ ರಾಮಣ್ಣ, ಕೀರ್ತಿರಾಜ್, ರೇಣುಕಯ್ಯ ಕಮಲನಾಭಾಚರ್, ಶಿಕ್ಷಣ ಇಲಾಖೆಯ ವೀರಣ್ಣ, ಸಾಕ್ಷರತಾ ಸಮಿತಿಯ ಸದಸ್ಯರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT