ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಡು ನಿಲ್ಲಿಸಿದ ಅನಕ್ಷರಸ್ಥ ಜಗತ್ತು: ಜಾನಪದ ಲೇಖಕ ಕೆ.ವಿ.ಮುದ್ದವೀರಪ್ಪ

Published 31 ಡಿಸೆಂಬರ್ 2023, 5:38 IST
Last Updated 31 ಡಿಸೆಂಬರ್ 2023, 5:38 IST
ಅಕ್ಷರ ಗಾತ್ರ

ತುಮಕೂರು: ಅನಕ್ಷರಸ್ಥ ಜಗತ್ತು ಈಗಾಗಲೇ ಹಾಡುವುದನ್ನು ನಿಲ್ಲಿಸಿದ್ದು, ಜನಪದ ಮುಂದುವರಿಸುವ ವಕ್ತಾರರು ಇಲ್ಲವಾಗಿದ್ದಾರೆ ಎಂದು ಜಾನಪದ ಲೇಖಕ ಕೆ.ವಿ.ಮುದ್ದವೀರಪ್ಪ ವಿಷಾದಿಸಿದರು.

ನಗರದಲ್ಲಿ ಶನಿವಾರ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನ ನಡೆದ ‘ಜಿಲ್ಲೆಯ ಜನಪದ ಸಿರಿ’ ಗೋಷ್ಠಿಯಲ್ಲಿ ‘ಜಿಲ್ಲೆಯ ಅಲಕ್ಷಿತ ಜಾನಪದ ಕಾವ್ಯಗಳು’ ಕುರಿತು ಪ್ರಬಂಧ ಮಂಡಿಸಿದರು.

ಮೊಬೈಲ್‌ನಿಂದಾಗಿ ಜಾನಪದದ ಕಡೆಗೆ ನಮ್ಮೆಲ್ಲರ ಆಸಕ್ತಿ ಕಡಿಮೆಯಾಗಿದೆ. ಇದರಿಂದ ಅಲಕ್ಷಿತ ಕಾವ್ಯಗಳ ಪರಂಪರೆಯ ಒಂದು ಕೊಂಡಿ ಕಳಚಿದೆ. ಈಗಿರುವ ಹಿರಿಯರಿಂದ ಅವರ ಸಾಹಿತ್ಯ ಸಂಗ್ರಹಿಸಿದರೆ ಅಲಕ್ಷಿತ ಕಾವ್ಯಗಳ ಬಗ್ಗೆ ಮುಂದಿನ ಪೀಳಿಗೆ ಅಧ್ಯಯನ ಮಾಡಲು ಅವಕಾಶ ಒದಗಿಸಿದಂತೆ ಆಗುತ್ತದೆ ಎಂದರು.

ಅಲಕ್ಷಿತ ಕಾವ್ಯಗಳನ್ನು ವಿಶ್ವವಿದ್ಯಾಲಯಗಳು ಅಧ್ಯಯನಕ್ಕೆ ಒಳಪಡಿಸಬೇಕು. ನೆಲ ಮೂಲ ದೇವತೆಗಳನ್ನು ಅಧ್ಯಯನ ಮಾಡಿದರೆ ತಳ ಸಮುದಾಯದ ಬದುಕಿನ ನೆಲೆಗಳು ಅರ್ಥವಾಗುತ್ತವೆ. ಇದು ಅತ್ಯಂತ ಜರೂರಾಗಿ ಆಗಬೇಕಿದೆ ಎಂದು ಒತ್ತಾಯಿಸಿದರು.

ಜಾನಪದ ತಜ್ಞ ಚಿಕ್ಕಣ್ಣ ಯಣ್ಣೆಕಟ್ಟೆ, ‘ಜುಂಜಪ್ಪ ಕಲ್ಪತರು ನಾಡಿನ ಹಿರಿಮೆ, ಸಾಂಸ್ಕೃತಿಕ ಮಹತ್ವವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಪಡಿಸಿದ, ಶಿವ ಸಂಸ್ಕೃತಿಯ ಜಂಗಮ ರೂಪಿ. ಸಮುದಾಯದ ಸಂಸ್ಕೃತಿ ಬಿಂಬಿಸಿದ ಅಪರೂಪದ ನಾಯಕ. ಕಾಡುಗೊಲ್ಲರ ಸಾಮಾನ್ಯ ದನಗಾಹಿ ತನ್ನ ಸಂಯಮದ ನಡೆಯಿಂದ ಇತರರಿಗೆ ಮಾದರಿಯಾಗಿದ್ದಾರೆ’ ಎಂದು ಅಭಿಪ್ರಾಯಪಟ್ಟರು.

ಜುಂಜಪ್ಪ ಇತರೆ ಜನಪದ ನಾಯಕರಿಗಿಂತ ಭಿನ್ನವಾಗಿ ಕಾಣುತ್ತಾರೆ. ಅಪರೂಪದ ಸಾಂಸ್ಕೃತಿಕ ನಾಯಕ. ಜಾತ್ಯತೀತ ಪರಂಪರೆಗೆ ಮಾದರಿ. ಧಾರ್ಮಿಕ ಕಟ್ಟು ಪಾಡುಗಳನ್ನು ಸಮರ್ಥವಾಗಿ ಮುರಿದು, ದುಡಿಯುವ ಜನರ, ತಳ ಸಮುದಾಯಗಳ ಪರ ಕೆಲಸ ಮಾಡಿದ್ದರು ಎಂದು ಹೇಳುವ ಮೂಲಕ ‘ಜುಂಜಪ್ಪನ ಮಹಾಕಾವ್ಯ’ದ ಕುರಿತು ವಿವರಿಸಿದರು.

ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ನಾಗಭೂಷಣ್ ಬಗ್ಗನಡು, ‘ಜನಪದ ಕಲೆಗಳು ಎಂದರೆ ಕೇವಲ ಮನರಂಜನೆಯಲ್ಲ. ಜನಪದ ಪ್ರದರ್ಶನ ಕಲೆಗಳಲ್ಲಿ ಅಭಿವ್ಯಕ್ತಗೊಂಡಿರುವ ಸಂಸ್ಕೃತಿಯ ಸಂಘರ್ಷಗಳನ್ನು ಅಧ್ಯಯನ ಮಾಡಬೇಕಿದೆ. ಕಲೆಗಳ ಒಳಗಡೆ ಇರುವ ಧಾರ್ಮಿಕ ಸಂಘರ್ಷಗಳ ಪಳೆಯುಳಿಕೆಗಳು ಇಂದಿಗೂ ಜೀವಂತವಾಗಿವೆ. ಜೀವಂತ ಜ್ಞಾನವನ್ನು ಜಾನಪದ ಅಧ್ಯಯನಗಳಲ್ಲಿ ಶೋಧಿಸುವ ಪ್ರಯತ್ನ ಮಾಡಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ಜನಪದ ಅಧ್ಯಯನ ಸಾಗಬೇಕು’ ಎಂದು ಆಶಿಸಿದರು.

ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ಡಿ.ಪಿ.ರಾಜು, ಹೊ.ಮ.ನಾಗರಾಜು ಹಾಜರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT