ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು: ಬಿಜೆಪಿಯ ಸಂಕಲ್ಪ ಪತ್ರ ಬಿಡುಗಡೆ

Published 22 ಏಪ್ರಿಲ್ 2024, 7:57 IST
Last Updated 22 ಏಪ್ರಿಲ್ 2024, 7:57 IST
ಅಕ್ಷರ ಗಾತ್ರ

ತುಮಕೂರು: ಬಿಜೆಪಿಯಿಂದ ‘ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಯ ಸಂಕಲ್ಪ ಪತ್ರ’ ಪ್ರಣಾಳಿಕೆ ಬಿಡುಗಡೆಗೊಳಿಸಲಾಯಿತು.

ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ತುಮಕೂರು ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ವಿ.ಸೋಮಣ್ಣ ಗೈರು ಹಾಜರಿಯಲ್ಲಿ ಬಿಜೆಪಿ- ಜೆಡಿಎಸ್ ಮುಖಂಡರು ಪ್ರಣಾಳಿಕೆ‌ ಬಿಡುಗಡೆ ಮಾಡಿ ಹಲವು ಭರವಸೆಗಳನ್ನು ನೀಡಿದರು.

‘ಪ್ರಗತಿಪರ ರೈತರು, ಕೃಷಿ ಕಾರ್ಮಿಕರು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರ ಜತೆ ಚರ್ಚೆ ಮಾಡಿ ಸಂಕಲ್ಪ ಪತ್ರ ತಯಾರಿಸಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆಯಡಿ ಕೇಂದ್ರ ಸರ್ಕಾರ ಘೋಷಿಸಿರುವ ₹5,300 ಕೋಟಿ ಹಣ ಬಿಡುಗಡೆ ಮಾಡಿಸಿ, ಶೀಘ್ರ ಅನುಷ್ಠಾನಗೊಳಿಸಲಾಗುವುದು’ ಎಂದು ಬಿಜೆಪಿ ರೈತ ಮೋರ್ಚಾದ ಮಾಜಿ ಪ್ರಧಾನ ಕಾರ್ಯದರ್ಶಿ ಎಸ್.ಶಿವಪ್ರಸಾದ್ ಹೇಳಿದರು.

ಎಲ್ಲ ತಾಲ್ಲೂಕು ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು. ವಸಂತನರಸಾಪುರ ಕೈಗಾರಿಕಾ ಪ್ರದೇಶ, ತಿಪಟೂರಿನಲ್ಲಿ ಇಎಸ್ಐ ಆಸ್ಪತ್ರೆ ನಿರ್ಮಿಸಲಾಗುವುದು. ಬಡವರು, ರೈತರು, ಮಹಿಳೆಯರು, ಕೃಷಿ ಕಾರ್ಮಿಕರ ಜೀವನ ಸುಧಾರಣೆಗೆ ಕಾರ್ಯಕ್ರಮ ರೂಪಿಸಲಾಗುವುದು ಎಂದರು.

ಕಾಂಗ್ರೆಸ್ ಬರೀ ಗ್ಯಾರಂಟಿಗಳ ಬಗ್ಗೆ ಮಾತನಾಡುತ್ತದೆ. ಆದರೆ ತಮ್ಮದೇ ಪಕ್ಷದ ನಗರಸಭೆ ಸದಸ್ಯರ ಮಗಳ ಬದುಕಿಗೆ ಗ್ಯಾರಂಟಿ ಇಲ್ಲ. ರಾಜ್ಯದಲ್ಲಿ ಬಹುಸಂಖ್ಯಾತರ ಭಾವನೆಗಳಿಗೆ ಧಕ್ಕೆ ತರುವ ಹಲವಾರು ಘಟನೆಗಳು ನಡೆಯುತ್ತಿವೆ. ಬಹುಸಂಖ್ಯಾತರ ಮತದಿಂದ ಅಧಿಕಾರಕ್ಕೆ ಬಂದ ಸರ್ಕಾರ ಅವರನ್ನು ರಕ್ಷಣೆ ಮಾಡುತ್ತಿಲ್ಲ ಎಂದು ದೂರಿದರು.

‘ಭಾರತ್‌ ಮಾತ ಕಿ ಜೈ’ ಎಂದರೆ ಪ್ರಕರಣ ದಾಖಲಿಸುತ್ತಾರೆ. ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗಿದವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ರಾಜ್ಯದಲ್ಲಿ ಹಿಂದೂ ಭಾವನೆಗಳಿಗೆ ಗ್ಯಾರಂಟಿ ಇಲ್ಲ. ಅಲ್ಪ ಸಂಖ್ಯಾತರಿಗಾಗಿ ಸರ್ಕಾರ ಇದೆಯಾ? ಎಂದು ಪ್ರಶ್ನಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ರವಿಶಂಕರ್, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸಿ.ಆಂಜಿನಪ್ಪ, ಬಿಜೆಪಿ ಮುಖಂಡರಾದ ಎಚ್.ಬಿ.ಅನಿಲ್‌ಕುಮಾರ್, ಭೈರಣ್ಣ, ಜಿ.ಆರ್.ಸುರೇಶ್‌ಕುಮಾರ್, ಟಿ.ಆರ್‌.ಸದಾಶಿವಯ್ಯ, ಆರ್.ದೇವರಾಜು ಹಾಜರಿದ್ದರು.

ಬಿಜೆಪಿ ಪ್ರಣಾಳಿಕೆಯಲ್ಲಿ ಏನಿದೆ?

* ಅಡಿಕೆ ಸಂಸ್ಕರಣಾ ಘಟಕ ಮೀನುಗಾರಿಕೆ ತರಬೇತಿ ಕೇಂದ್ರ ಆರಂಭ

* ರೇಷ್ಮೆ ಶೇಂಗಾ ಬೆಳೆಗಳ ಉಪ ಉತ್ಪನ್ನ ತಯಾರಿಕಾ ಘಟಕ ಸ್ಥಾಪನೆ

* ತುಮಕೂರು ಕ್ಷೇತ್ರದ ಎಲ್ಲ ಕೆರೆಗಳಿಗೆ ನದಿ ನೀರು

* ನಗರ ಪ್ರದೇಶದಲ್ಲಿ 24X7 ಕುಡಿಯುವ ನೀರಿನ ವ್ಯವಸ್ಥೆ

* ಐಐಟಿ ತುಮಕೂರು ಸ್ಥಾಪನೆಗೆ ಒತ್ತು

* ಕೃಷಿ ವಿಜ್ಞಾನ ಕಾಲೇಜು ಆರಂಭ

* ಸೈನಿಕ ಶಾಲೆ ಕಾನೂನು ವಿ.ವಿ ಶುರು

* ಹೆದ್ದಾರಿಗಳ ಸಮಗ್ರ ಅಭಿವೃದ್ಧಿ

* ಅಂತರರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣ ಸ್ಥಾಪನೆ

* ಸುಸಜ್ಜಿತ ಮಹಿಳಾ ಕ್ರೀಡಾ ಕೇಂದ್ರ ಆರಂಭ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT