ವೈ.ಎನ್.ಹೊಸಕೋಟೆ: ಈ ಕ್ಯಾಂಟೀನ್ ಒಳಗೆ ಹೋದರೆ ಮದ್ದೂರು ವಡೆಯ ಘಮ ಮೂಗಿಗೆ ಬಡಿಯುತ್ತದೆ. ವಿವಿಧ ಬಗೆಯ ದೋಸೆಗಳು ಬಾಯಲ್ಲಿ ನೀರೂರಿಸುತ್ತವೆ.
ಪಟ್ಟಣದ ಎಂ.ಜಿ.ರಸ್ತೆಯ ಸರ್ಕಾರಿ ಬಾಲಕರ ಶಾಲೆಯ ಮುಂಭಾಗ ಇರುವ ದ್ವಾರಕಾ ಕ್ಯಾಂಟೀನ್ ರುಚಿಕರ ತಿಂಡಿಯಿಂದ ಎಲ್ಲರ ಅಚ್ಚುಮೆಚ್ಚಿನ ತಾಣವಾಗಿದೆ. ರುದ್ರೇಶ್ ಹೋಟೆಲ್ ಎಂದೇ ಪರಿಚಿತವಾಗಿದೆ.
ಪಟ್ಟಣದಲ್ಲಿ ಇದೊಂದು ಕಡೆ ಮಾತ್ರ ಮದ್ದೂರು ವಡೆ ಸಿಗುತ್ತಿದ್ದು, ಇದರ ರುಚಿಗೆ ಜನ ಫಿದಾ ಆಗಿದ್ದಾರೆ. ರುದ್ರೇಶ್ ನಾಲ್ಕೈದು ಕಡೆಗೆ ಹೋಟೆಲ್ ಸ್ಥಳಾಂತರಿಸಿದರೂ ಸಾರ್ವಜನಿಕರು ಹುಡುಕಿಕೊಂಡು ಹೋಗುತ್ತಿದ್ದಾರೆ.
ಇಡ್ಲಿ, ಈರುಳ್ಳಿ ದೋಸೆ, ಮಸಾಲೆ ದೋಸೆ, ಖಾಲಿ ದೋಸೆ, ಚಿತ್ರಾನ್ನ ರುಚಿ ನೋಡಲು ಬೆಳಿಗ್ಗೆ 7 ಗಂಟೆಯಿಂದಲೇ ಜನ ಹೋಟೆಲ್ ಕಡೆ ಹೆಜ್ಜೆ ಹಾಕುತ್ತಾರೆ. ಮಧ್ಯಾಹ್ನ ಸಿಗುವ ಮದ್ದೂರು ವಡೆಗೆ ಅಭಿಮಾನಗಳ ವರ್ಗವೇ ಇದೆ. ವಡೆ ತಿನ್ನಲು ಹೆಚ್ಚಿನ ಮಂದಿ ಬರುತ್ತಾರೆ.
ಬೆಳಿಗ್ಗೆ 7ರಿಂದ ಸಂಜೆ 6 ಗಂಟೆ ವರೆಗೆ ಹೋಟೆಲ್ ತೆರೆದಿರುತ್ತದೆ. ರುದ್ರೇಶ್ 35 ವರ್ಷಗಳಿಂದ ಹೋಟೆಲ್ ನಡೆಸುತ್ತಿದ್ದಾರೆ. ಗಂಡ- ಹೆಂಡತಿ ಇಬ್ಬರೇ ಕೆಲಸ ಮಾಡುತ್ತಾರೆ. ಕಡಿಮೆ ಬೆಲೆಯಲ್ಲಿ ತೃಪ್ತಿಕರ ತಿಂಡಿ, ಊಟ ನೀಡುತ್ತಿರುವುದರಿಂದ ಜನರು ಇತ್ತ ಆಕರ್ಷಿತರಾಗುತ್ತಿದ್ದಾರೆ.
ಗ್ರಾಮೀಣ ಜನ, ಶ್ರಮಿಕರು ಮಧ್ಯಾಹ್ನದ ಊಟಕ್ಕೆ ಇಲ್ಲಿಗೆ ಬರುತ್ತಾರೆ. ರುದ್ರೇಶ್ ಸೌಮ್ಯ ಸ್ವಭಾವದವರು. ಯಾರನ್ನೂ ಗದರಿಸಿ ಮಾತನಾಡುವುದಿಲ್ಲ ಎನ್ನುತ್ತಾರೆ ಗ್ರಾಹಕ ಜಿ.ಎಲ್.ಸೋಮಣ್ಣ.