ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತೋವಿನಕೆರೆ: ಮುಚ್ಚಿದ ಮಣುವಿನಕುರಿಕೆ ಪ್ರೌಢಶಾಲೆ

38 ವರ್ಷದಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ್ದ ಶಾಲೆ
Published 4 ಜುಲೈ 2024, 13:55 IST
Last Updated 4 ಜುಲೈ 2024, 13:55 IST
ಅಕ್ಷರ ಗಾತ್ರ

ತೋವಿನಕೆರೆ: ಮಣುವಿನಕುರಿಕೆ ಭೈರವೇಶ್ವರ ಗ್ರಾಮಾಂತರ ಪ್ರೌಢಶಾಲೆ 38 ವರ್ಷ ಸತತವಾಗಿ ಸಾವಿರಾರು ಮಕ್ಕಳಿಗೆ ಶಿಕ್ಷಣ ನೀಡಿ ಈ ಶೈಕ್ಷಣಿಕ ಸಾಲಿನಿಂದ ಮುಚ್ಚಿದೆ.

ಮಣುವಿನಕುರಿಕೆ ಗ್ರಾಮಕ್ಕೆ ಈಗಲೂ ಬಸ್‌ ಸೌಕರ್ಯವಿಲ್ಲ. ದಾಸಾಲುಕುಂಟೆ ಅಥವಾ ಬಂಡೆಹಳ್ಳಿ ಕ್ರಾಸ್‌ನಲ್ಲಿ ಇಳಿದು ಈ ಶಾಲೆಗೆ ನಡೆದುಕೊಂಡು ಹೋಗಬೇಕು. ಇಂತಹ ಸ್ಥಳದಲ್ಲಿ 1987ರಲ್ಲಿ ಪ್ರೌಢಶಾಲೆ ಸ್ಥಾಪಿಸಲಾಯಿತು.

ಕುರಂಕೋಟೆ ಪಂಚಾಯಿತಿ ವ್ಯಾಪ್ತಿಯ 14ಕ್ಕೂ ಹೆಚ್ಚು ಹಳ್ಳಿಗಳ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಈ ಶಾಲೆ ಅನುಕೂಲವಾಗಿತ್ತು. ಮೊದಲ 25 ವರ್ಷ 8,9 ಮತ್ತು 10ನೇ ತರಗತಿಯ 250ರಿಂದ 300 ವಿದ್ಯಾರ್ಥಿಗಳು ಶಿಕ್ಷಣ ಪಡೆದರು. ಸಮೀಪದಲ್ಲಿ ಶಾಲೆಗಳು ಪ್ರಾರಂಭವಾದ ನಂತರ ಮೂರು ತರಗತಿಗಳಿಂದ 100 ಆಸುಪಾಸಿನಲ್ಲಿ ವಿದ್ಯಾರ್ಥಿಗಳಿದ್ದರು.

ಕಳೆದ ವರ್ಷ ಶಾಲೆಗೆ ಜಮೀನು ದಾನ ನೀಡಿದ್ದ ದಾನಿಗಳು ಶಾಲಾ ಕಟ್ಟಡದ ಜಾಗ ಬಿಟ್ಟು ಆಟದ ಮೈದಾನ ಹಾಗೂ ಮುಂಭಾಗದಲ್ಲಿ ಉಳಿಮೆ ಮಾಡಿ ವಶಕ್ಕೆ ಪಡೆದುಕೊಳ್ಳುವ ಪ್ರಯತ್ನಿಸಿದ್ದರು. ಪೋಲಿಸರು, ಶಿಕ್ಷಣ ಇಲಾಖೆ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಿದ್ದರು.

ಈ ವರ್ಷ ಮತ್ತೆ ಅದೇ ಸಮಸ್ಯೆಯಾದರೆ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗುತ್ತದೆ. ನಿವೃತ್ತಿಯಾದ ಮೂವರು ಶಿಕ್ಷಕರ ಜಾಗಕ್ಕೆ ಹೊಸ ಶಿಕ್ಷಕರು ಬರದೇ ಇರುವುದರಿಂದ ಪೋಷಕರು ಮಕ್ಕಳನ್ನು ಶಾಲೆಗೆ ಸೇರಿಸಲು‌ ಇಷ್ಟಪಡಲಿಲ್ಲ. 8ನೇ ತರಗತಿಗೆ ವಿದ್ಯಾರ್ಥಿಗಳ ಪ್ರವೇಶ ಶೂನ್ಯವಾಯಿತು.

38 ವರ್ಷ ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ನೆರವಾಗಿದ್ದ ಶಾಲೆ ಈಗ ಇತಿಹಾಸ ಸೇರಿತು.

‘ಹೆಣ್ಣುಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸದ ಪೋಷಕರು ಮನೆ ಮುಂದೆ ಶಾಲೆಯಿದೆ ಬೆಳಿಗ್ಗೆ ಹೋಗಿ ಸಂಜೆಯೊಳಗೆ ಮನೆಗೆ ಮರಳುತ್ತಾರೆ ಎಂಬ ನೆಮ್ಮದಿಯಿಂದ ಕಳುಹಿಸುತ್ತಿದ್ದರು. ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಈ ಸಂಸ್ಥೆ ದಾರಿ ದೀಪವಾಯಿತು’ ಎಂದು ಮಣುವಿನಕುರಿಕೆ ಸವಿತಾ ನಾಗೇಶ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT