ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧುಗಿರಿ: ಹೊಸ ಬಡಾವಣೆಗಳಲ್ಲಿ ಹತ್ತಾರು ಸಮಸ್ಯೆ

Published 23 ಅಕ್ಟೋಬರ್ 2023, 5:29 IST
Last Updated 23 ಅಕ್ಟೋಬರ್ 2023, 5:29 IST
ಅಕ್ಷರ ಗಾತ್ರ

ಮಧುಗಿರಿ: ಪಟ್ಟಣದ ಕೆಲವು ಬಡಾವಣೆಗಳಲ್ಲಿ ಮೂಲಸೌಕರ್ಯ ಕೊರತೆಯಿಂದಾಗಿ ನಿವಾಸಿಗಳು ಪರದಾಡುವಂತಾಗಿದೆ. ಈ ಬಗ್ಗೆ ಪುರಸಭೆ ಸದಸ್ಯರು ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಿಲ್ಲ ಎಂದು ನಗರ ನಿವಾಸಿಗಳು ಆರೋಪಿಸಿದ್ದಾರೆ.

ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್‌ಗಳಿವೆ. 37 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಜನಸಂಖ್ಯೆಗೆ ಅನುಗುಣವಾಗಿ ಬಡಾವಣೆಗಳೂ ಹೆಚ್ಚಾಗುತ್ತಿದೆ. ಈ ಹಿಂದೆ ಕೆಲ ಬಡಾವಣೆ ನಿರ್ಮಾಣ ಮಾಡುವಾಗ ಮಾಲೀಕರು ನಿಯಮಗಳನ್ನು ಗಾಳಿಗೆ ತೂರಿ, ಗುಣಮಟ್ಟದ ರಸ್ತೆ, ಚರಂಡಿ, ವಿದ್ಯುತ್ ದೀಪ, ನೀರಿನ ವ್ಯವಸ್ಥೆ ಮಾಡದೆ ಬಡಾವಣೆ ನಿರ್ಮಿಸಿರುವುದರಿಂದ ನಿವಾಸಿಗಳು ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದೆ.

ಕೆಲವು ಬಡಾವಣೆಯಲ್ಲಿ ಮಳೆಗಾಲದಲ್ಲಿ ರಸ್ತೆ ಕೆಸರು ಗದ್ದೆಯಾಗಿ ಜನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮನೆಯ ತ್ಯಾಜ್ಯ ನೀರು ಎಲ್ಲಡೆ ಹರಿದಾಡಿ ಗುಂಡಿ ನಿರ್ಮಾಣವಾಗಿ ಸೊಳ್ಳೆಗಳ ಹಾವಳಿ ಹೆಚ್ಚಿದೆ. ನಿವಾಸಿಗಳಿಗೆ ರೋಗಗಳ ಆತಂಕ ಎದುರಾಗಿದೆ.

ಬಡಾವಣೆಗಳಲ್ಲಿ ಸ್ವಚ್ಛತೆ ಇಲ್ಲದೇ ರಸ್ತೆ ಮತ್ತು ಖಾಲಿ ನಿವೇಶನಗಳಲ್ಲಿ ಅನುಪಯುಕ್ತ ಗಿಡ ಬೆಳದಿವೆ. ಹಂದಿ, ನಾಯಿ, ಕ್ರಿಮಿಕೀಟಗಳ ಆವಾಸ ಕೇಂದ್ರಗಳಾಗಿವೆ. ಹಾವುಗಳು ಮನೆಯೊಳಗೆ ಕಾಣಿಸಿಕೊಳ್ಳುತ್ತಿರುವುದರಿಂದ ಮಕ್ಕಳು ಮತ್ತು ವೃದ್ಧರು ಭೀತರಾಗಿದ್ದಾರೆ.

ಬಡಾವಣೆ ನಿರ್ಮಾಣಗೊಂಡು ಹಲವು ವರ್ಷ ಕಳೆದಿವೆ. ಸರಿಯಾದ ಸಮಯಕ್ಕೆ ಪುರಸಭೆಗೆ ಕಂದಾಯ ಪಾವತಿಸಿದರೂ ಮೂಲಸೌಕರ್ಯ  ದೊರಕುತ್ತಿಲ್ಲ. ಮೂಲ ಸೌಕರ್ಯ ಕಲ್ಪಿಸುವಂತೆ ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಪಟ್ಟಣದ ಹಳೇ ಬಡಾವಣೆಗಳಲ್ಲಿ ಮನೆ, ಮನೆ ಕಸ, ವಿದ್ಯುತ್ ದೀಪ, ರಸ್ತೆ, ಚರಂಡಿ ಹಾಗೂ ನೀರಿನ ವ್ಯವಸ್ಥೆ ಸೇರಿದಂತೆ ಮೂಲಸೌಕರ್ಯ ಒದಗಿಸುತ್ತಾರೆ. ಆದರೆ ಹೊಸ ಬಡಾವಣೆಯಲ್ಲಿ ಈ ವ್ಯವಸ್ಥೆ ಇಲ್ಲದೆ ಪುರಸಭೆ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ ಎಂಬ ಆರೋಪವೂ ಇದೆ.

1995ರಲ್ಲಿ ಗುರುವಡೇರಹಳ್ಳಿ, ಪಾಳ್ಯ ಮತ್ತು ಹರಿಹರರೊಪ್ಪ ಗ್ರಾಮಗಳು ಪುರಸಭೆ ವ್ಯಾಪ್ತಿಗೆ ಒಳಪಟ್ಟು 29 ವರ್ಷ ಕಳೆದರೂ ಮೂಲಸೌಕರ್ಯ ಮರೀಚಿಕೆಯಾಗಿವೆ.

‘ಹರಿಹರರೊಪ್ಪ ಗ್ರಾಮವನ್ನು ಪುರಸಭೆ ವ್ಯಾಪ್ತಿಗೆ ಸೇರಿಸದಿದ್ದರೆ ಗ್ರಾಮ ಪಂಚಾಯಿತಿಯಿಂದ ಅಭಿವೃದ್ಧಿಯಾಗುತ್ತಿತ್ತು. ಆದರೆ ನಮ್ಮ ಗ್ರಾಮ ಪುರಸಭೆ ಹಾಗೂ ಪಂಚಾಯಿತಿಯಿಂದಲೂ ಅಭಿವೃದ್ಧಿಯಾಗದೇ ನಿವಾಸಿಗಳ ಸ್ಥಿತಿ ಅತಂತ್ರವಾಗಿದೆ’ ಎಂದು ದೂರಿದರು.

ಹೊಸ ಬಡಾವಣೆಯಲ್ಲಿ ಮನೆ ನಿರ್ಮಿಸಿಕೊಂಡು ಹಲವು ವರ್ಷಗಳಿಂದ ಜನರು ವಾಸಿಸುತ್ತಿದ್ದರೂ ರಸ್ತೆ, ಚರಂಡಿ ಹಾಗೂ ಮೂಲ ಸೌಕರ್ಯಗಗೆ ಪರದಾಡುವಂತಾಗಿದೆ. ಚರಂಡಿ ನೀರು ಸರಾಗವಾಗಿ ಮುಂದಕ್ಕೆ ಹರಿಯದೇ ನಿಂತಲ್ಲೇ ನಿಂತುಕೊಂಡು ಸೊಳ್ಳೆ ಮತ್ತು ಕ್ರಿಮಿಕೀಟಗಳ ಹಾವಳಿ ಹೆಚ್ಚಾಗುತ್ತಿದೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.

ಅಧಿಕಾರಿಗಳ ಸ್ಪಂದನೆ ಇಲ್ಲ

ಪಟ್ಟಣದ ವಿನಾಯಕ ನಗರ ಹಾಗೂ ಸಿದ್ದಪ್ಪ ಬಡಾವಣೆ ಸೇರಿದಂತೆ ಹಲವು ಬಡಾವಣೆಗಳಲ್ಲಿ ಮೂಲ ಸೌಕರ್ಯಗಳಿಲ್ಲದೆ ನಿವಾಸಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಜನತಾ ದರ್ಶನದಲ್ಲಿ ದೂರು ನೀಡಿದಾಗ ಸ್ಥಳದಲ್ಲೇ ಅಧಿಕಾರಿಗಳಿಗೆ ಸೂಚಿಸಿದರೂ ಸಂಬಂಧಪಟ್ಟ ಅಧಿಕಾರಿಗಳಿಂದ ಯಾವುದೇ ಪ್ರಯೋಜನವಾಗಿಲ್ಲ. ತಿಪ್ಪೇಸ್ವಾಮಿ ನಿವೃತ್ತ ಅಧಿಕಾರಿ ಕಸ ಸಂಗ್ರಹ ಸಿಬ್ಬಂದಿ ಇಲ್ಲ ಹರಿಹರರೊಪ್ಪ ಗ್ರಾಮವನ್ನು ಪುರಸಭೆ ವ್ಯಾಪ್ತಿಗೆ ಸೇರಿಸಿಕೊಂಡು ಹಲವು ವರ್ಷ ಕಳೆದಿವೆ. ಈಗಲೂ ಹರಿಹರರೊಪ್ಪ ಗ್ರಾಮವಾಗಿಯೇ ಉಳಿದಿದೆ. ಮೂಲ ಸೌಕರ್ಯಕ್ಕೆ ಆದ್ಯತೆ ನೀಡಬೇಕು. ಮನೆ ಮನೆ ಕಸ ಸಂಗ್ರಹಿಸಲು ಈವರೆಗೆ ಪುರಸಭೆ ಸಿಬ್ಬಂದಿ ಬಂದಿಲ್ಲ. ರಾಜಶೇಖರ್ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಸ್ವಚ್ಛತೆ ಆದ್ಯತೆಯಾಗಲಿ ಪಟ್ಟಣದ ಬಹುತೇಕ ಖಾಲಿ ನೀವೇಶನಗಳಲ್ಲಿ ಅನುಪಯುಕ್ತ ಗಿಡಗಳು ಆಳೆತ್ತರ ಬೆಳೆದಿರುವುದರಿಂದ ಕ್ರಿಮಿಕೀಟಗಳ ಹಾವಳಿ ಹೆಚ್ಚಾಗಿದೆ. ಮಕ್ಕಳು ಹಾಗೂ ವೃದ್ದರು ಮನೆಯಿಂದ ಹೊರಬರಲು ಭೀತರಾಗಿದ್ದಾರೆ. ನಿವೇಶನವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಮಾಲೀಕರಿಗೆ ಪುರಸಭೆ ಅಧಿಕಾರಿಗಳು ನೋಟಿಸ್‌ ನೀಡಬೇಕು. ಅಜಿತ್ ಕುಮಾರ್ ಮಧುಗಿರಿ

ಮಧುಗಿರಿಯಲ್ಲಿ ಹಂದಿ ಹಾವಳಿ
ಮಧುಗಿರಿಯಲ್ಲಿ ಹಂದಿ ಹಾವಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT