ತುಮಕೂರು: ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರು ಮಾಡಿಕೊಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಪ್ರತಿ ಜಿಲ್ಲೆಗೊಂದು ಸರ್ಕಾರಿ ವೈದ್ಯಕೀಯ ಕಾಲೇಜು ನೀಡಲಾಗಿದೆ. ಚಿತ್ರದುರ್ಗ, ತುಮಕೂರು ಜಿಲ್ಲೆಗೆ ನೀಡಿಲ್ಲ. ಜಿಲ್ಲೆಗೆ ಕಾಲೇಜು ಮಂಜೂರಾಗಿದ್ದರೂ ಅದರ ಮುಂದಿನ ಕೆಲಸಗಳು ಆಗಿರಲಿಲ್ಲ. ಈಗ ಆ ಬಗ್ಗೆ ಮುಖ್ಯಮಂತ್ರಿ ಗಮನ ಸೆಳೆದಿದ್ದು, ಬೆಂಗಳೂರಿನಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಭರವಸೆಕೊಟ್ಟಿದ್ದಾರೆ ಎಂದು ಹೇಳಿದರು.
ಕೋವಿಡ್ ನಿಯಂತ್ರಣ ಸಂಬಂಧ ಶುಕ್ರವಾರ ಪ್ರಗತಿ ಪರಿಶೀಲನೆ ನಡೆಸಿದ ಸಮಯದಲ್ಲಿ ಈ ವಿಚಾರವನ್ನು ಮುಖ್ಯಮಂತ್ರಿ ಗಮನಕ್ಕೆ ತರಲಾಯಿತು ಎಂದು ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.
ನಗರಕ್ಕೆ ಹೊಂದಿಕೊಂಡಂತೆ ಎರಡು ವೈದ್ಯಕೀಯ ಕಾಲೇಜುಗಳು ಇವೆ. ನಗರದಲ್ಲೇ ಕಾಲೇಜು ಸ್ಥಾಪನೆ ಮಾಡುವುದಕ್ಕಿಂತ ಕೆ.ಬಿ.ಕ್ರಾಸ್‌ನಲ್ಲಿ ಆರಂಭಿಸುವ ಬಗ್ಗೆ ಚಿಂತಿಸಲಾಗಿದೆ. ಇದರಿಂದ ತಿಪಟೂರು ಉಪವಿಭಾಗದ ಜನರಿಗೆ ಅನುಕೂಲವಾಗಲಿದೆ. ಜತೆಗೆ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ಸ್ನಾತಕೋತ್ತರ ಪದವಿ ಆರಂಭಿಸುವಂತೆ ಕೇಳಿಕೊಳ್ಳಲಾಗಿದೆ. ಈ ಅವಕಾಶ ಸಿಕ್ಕರೆ ಜಿಲ್ಲಾ ಆಸ್ಪತ್ರೆಗೆ ತಜ್ಞ ವೈದ್ಯರು ಲಭ್ಯವಾಗುತ್ತಾರೆ ಎಂದು ವಿವರಿಸಿದರು.
‘ಖಾಸಗಿ– ಸಾರ್ವಜನಿಕ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜು ಆರಂಭಿಸುವಂತೆ ಸಲಹೆಗಳು ಬಂದಿದ್ದವು. ಅದಕ್ಕೆ ನಾನು ಒಪ್ಪಿಗೆ ನೀಡಿರಲಿಲ್ಲ. ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಬೇಕು ಎಂಬ ಬೇಡಿಕೆಯನ್ನು ಮುಖ್ಯಮಂತ್ರಿ ಮುಂದಿಟ್ಟಿದ್ದೇನೆ. ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದು ಹೇಳಿದರು.
ಕ್ಯಾನ್ಸರ್ ಆಸ್ಪತ್ರೆ:ಕ್ಸಾನ್ಸರ್ ಆಸ್ಪತ್ರೆ ಆರಂಭಿಸುವಂತೆ ಬಹುದಿನಗಳ ಬೇಡಿಕೆ ಈಡೇರಿಲ್ಲ. ಆಸ್ಪತ್ರೆ ಆರಂಭಿಸುವ ಸಂಬಂಧ ಟೆಂಡರ್ ಕರೆದಿದ್ದರೂ ಈವರೆಗೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ತಕ್ಷಣ ಟೆಂಡರ್ ಅಂತಿಮಗೊಳಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಇದರಿಂದಾಗಿ ಶೀಘ್ರವೇ ಆಸ್ಪತ್ರೆ ಕಟ್ಟಡದ ನಿರ್ಮಾಣ ಕೆಲಸ ಆರಂಭವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹುಳಿಯಾರಿನಲ್ಲಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೆ ಏರಿಸಲು ಒಪ್ಪಿಗೆ ನೀಡಿದ್ದಾರೆ. ಶೀಘ್ರ ಅಂತಿಮ ಆದೇಶ ಹೊರ ಬೀಳಲಿದೆ. ಕೋವಿಡ್ ಮೂರನೇ ಅಲೆ ಎದುರಿಸಲು ಮಕ್ಕಳ ತಜ್ಞ ವೈದ್ಯರ ಕೊರತೆ ಇದೆ. ಮತ್ತಷ್ಟು ವೈದ್ಯರನ್ನು ನೇಮಕ ಮಾಡಿಕೊಡುವಂತೆ ಮನವಿ ಮಾಡಲಾಗಿದೆ ಎಂದು ಸಚಿವರು ವಿವರಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.