ತುಮಕೂರು: ಪಾಲಿಕೆ ವ್ಯಾಪ್ತಿಯ ಬೀದಿಬದಿ ವ್ಯಾಪಾರಿಗಳಿಗೆ ಪುನರ್ವಸತಿ ಕಲ್ಪಿಸದೆ ಒಕ್ಕಲೆಬ್ಬಿಸಬಾರದು. ಶಾಶ್ವತ ನೆಲೆಯಾಗಿ ಮಾರಾಟ ವಲಯ ನಿರ್ಮಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಫುಟ್‌ಪಾತ್ ವ್ಯಾಪಾರಿಗಳ ಸಂಘ ಸಿಐಟಿಯು ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಪ್ರತಿಕ್ರಿಯಿಸಿ, ‘ಬೀದಿಬದಿ ವ್ಯಾಪಾರಿಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಸಂಬಂಧ ಸಭೆ ಕರೆಯಲಾಗುವುದು. ವೆಂಡಿಂಗ್ ಜೋನ್ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು. ಎಂ.ಜಿ.ರಸ್ತೆ ವ್ಯಾಪಾರಿ
ಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದರು.
ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ‘ನಿಯಮಾವಳಿಗಳಂತೆ ಬೀದಿಬದಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡುವ ಮತ್ತು ಬದುಕುವ ಹಕ್ಕು ನೀಡಲಾಗಿದೆ. ವ್ಯಾಪಾರ ಮಾಡುತ್ತಿರುವ ಸ್ಥಳ ಗುರುತಿಸಿ ಗುರುತಿನ ಚೀಟಿ ನೀಡುವ ಜವಾಬ್ದಾರಿಯನ್ನು ಮಹಾನಗರ ಪಾಲಿಕೆಗೆ ನೀಡಲಾಗಿದೆ’ ಎಂದರು.
ಕೆಲವೆಡೆ ಗುರುತಿನ ಚೀಟಿ ನೀಡಿದ್ದರೂ ನವೀಕರಿಸಿಲ್ಲ. ಗುರುತಿನ ಚೀಟಿ ಇರುವ ಫುಟ್‌ಪಾತ್ ವ್ಯಾಪಾರಿಗಳಿಗೆ ಪುನರ್ ವಸತಿ ಕಲ್ಪಿಸದೆ ದೌರ್ಜನ್ಯದಿಂದ ಒಕ್ಕಲೆಬ್ಬಿಸಲಾಗುತ್ತಿದೆ. ಸೂಕ್ತ ಪರ್ಯಾಯ ವ್ಯವಸ್ಥೆ ಮಾಡಬೇಕು’ ಎಂದು ಆಗ್ರಹಿಸಿದರು.
ವೆಂಡಿಂಗ್ ಸಮಿತಿ ಸದಸ್ಯ ವಸೀಂ ಅಕ್ರಂ, ‘ಪಟ್ಟಣ ವ್ಯಾಪಾರಿಗಳ ಸಮಿತಿ ಸಭೆಯನ್ನು ಪ್ರತಿ ತಿಂಗಳು ಕಡ್ಡಾಯವಾಗಿ ಕರೆಯಬೇಕು. ವ್ಯಾಪಾರಿಗಳಿಗೆ ಪೊಲೀಸರು ಕಿರುಕುಳ ನೀಡುವುದನ್ನು ತಡೆಗಟ್ಟಬೇಕು’ ಎಂದರು.
ಪಟ್ಟಣ ವ್ಯಾಪಾರಿಗಳ ಸಮಿತಿ ಸದಸ್ಯ ಜಿ.ಜಗದೀಶ್, ‘ನಗರದ ಬೆಳವಣಿಗೆಯಿಂದಾಗಿ ನಗರದ ಎಂಟು ದಿಕ್ಕುಗಳಲ್ಲಿ ಬೀದಿಬದಿ ವ್ಯಾಪಾರಿಗಳ ವಲಯಗಳ ನಿರ್ಮಾಣಕ್ಕೆ ಸ್ಮಾರ್ಟ್‌ಸಿಟಿಯಿಂದ ಕನಿಷ್ಠ ₹15 ಕೋಟಿ ಮೀಸಲಿಡಬೇಕು’ ಎಂದು ಮನವಿ ಮಾಡಿದರು.
ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್ ಮುಜೀಬ್, ಪಟ್ಟಣ ವ್ಯಾಪಾರಿಗಳ ಸಮಿತಿ ಸದಸ್ಯ ಎನ್.ಮುತ್ತುರಾಜ್, ರವಿಕುಮಾರ್, ಕೃಷ್ಣಮೂರ್ತಿ, ಚಾಂದ್‌ಪಾಷ, ವಿಶ್ವಪ್ರಭಾ, ತಬ್ರೇಜ್‌ಪಾಷ ಭಾಗವಹಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.