ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರಿಗಾಹಿಗಳ ವಲಸೆ ಹಾದಿ ಈಗ ಸುಗಮ

ಕುರಿಗಳ ಸಂಚಾರಕ್ಕೂ ಸಿಕ್ಕಿತು ವೇಗ: ಲಾರಿಯಲ್ಲಿ ಶೀಘ್ರ ಗಮ್ಯ ತಲುಪುವ ಸೌಲಭ್ಯ
ಆರ್.ಸಿ.ಮಹೇಶ್
Published 10 ಜನವರಿ 2024, 7:58 IST
Last Updated 10 ಜನವರಿ 2024, 7:58 IST
ಅಕ್ಷರ ಗಾತ್ರ

ಹುಳಿಯಾರು: ಹೋಬಳಿ ವ್ಯಾಪ್ತಿಯ ಕುರಿಗಾಹಿಗಳ ವಲಸೆ ಸಂಚಾರಕ್ಕೆ ಇದೀಗ ವೇಗ ಸಿಕ್ಕಿದೆ. ಪ್ರಯಾಸ ಪಟ್ಟು ಹತ್ತಾರು ದಿನ ನಡೆದು ಹೋಗುವ ಬದಲು ಲಾರಿಗಳ ಸಹಾಯದಿಂದ ಒಂದೇ ದಿನದಲ್ಲಿ ತಲುಪುವ ಮೂಲಕ ತಮ್ಮ ಹಾದಿಯನ್ನು ಸುಗಮಗೊಳಿಸಿಕೊಂಡಿದ್ದಾರೆ.

ಹೋಬಳಿಯ ಗಡಿ ಗ್ರಾಮ ದಸೂಡಿ, ಹಿರಿಯೂರು ಹಾಗೂ ಶಿರಾ ತಾಲ್ಲೂಕಿನ ಗ್ರಾಮಗಳಲ್ಲಿ ಕುರಿಗಾಹಿಗಳು ಇದ್ದಾರೆ. ಇವರು ಡಿಸೆಂಬರ್‌ ತಿಂಗಳು ಬಂತೆಂದರೆ ನೀರು ಹಾಗೂ ಆಹಾರ ಅರಸಿ ಮಲೆನಾಡು ಕಡೆಗೆ ವಲಸೆ ಹೋಗುವುದು ವಾಡಿಕೆ.

ಕೊಯ್ಲು ಕಾಲ ಮುಗಿಸಿಕೊಂಡು ಹೊರಡುವ ಕುರಿಗಾಹಿಗಳು ವಲಸೆಗೆ ಬೇಕಾಗುವ ಸರಕು ಹಾಗೂ ಕುರಿಗಳನ್ನು ಸಾಗಿಸುವುದು ಕಷ್ಟದ ಕೆಲಸವಾಗಿತ್ತು. ಬೆಳಗ್ಗೆಯಿಂದ ಮಧ್ಯಾಹ್ನದವರಗೆ ದಾರಿಯಲ್ಲಿ ಕುರಿಗಳ ಜತೆ ನಡೆಯುತ್ತಾ ಸಂಜೆ ವೇಳೆಗೆ ಯಾವ ಗ್ರಾಮ ಸಿಗುತ್ತದೆಯೊ ಅಲ್ಲಿಯೇ ರೈತರ ಹೊಲ, ತೋಟಗಳಲ್ಲಿ ಮಂದೆ ಬೀಡು ಬಿಟ್ಟು ಮತ್ತೆ ಮುಂದೆ ಸಾಗುತ್ತಿದ್ದರು.

ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಿಗೆ ತಲುಪಲು 15 ದಿನ ಮೀರುತ್ತಿತ್ತು. ಇನ್ನೂ ರಸ್ತೆಗಳಲ್ಲಿ ಸಾಗುವಾಗ ನಡೆಯುವ ಅವಘಡಗಳಿಗೆ ಹೈರಾಣಾಗಿ ಹೋಗಿದ್ದರು. ಅದರಲ್ಲೂ ಹೆದ್ದಾರಿಗಳಲ್ಲಂತೂ ಕುರಿಗಳನ್ನು ಸಾಗಿಸುವುದು ತ್ರಾಸದಾಯಕವಾಗಿತ್ತು. ಸಂಚಾರ ದಟ್ಟಣೆ ನಡುವೆ ಇವರ ನೆಡಿಗೆ ತಂತಿ ಮೇಲಿನ ನೆಡಿಗೆಯಾಗಿತ್ತು.

ಹಲವು ಬಾರಿ ರಸ್ತೆಯಲ್ಲಿ ಕುರಿಗಳ ಗುಂಪು ನಡೆದು ಹೋಗುವಾಗ ಲಾರಿಗಳು ಡಿಕ್ಕಿಯಾಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿದ್ದೂ ಇದೆ. ಕುರಿಗಳು ನಡೆದು ಸುಸ್ತಾಗಿ ಹಲವು ರೋಗಗಳಿಗೆ ತುತ್ತಾಗುತ್ತಿದ್ದವು. ಇಂತಹ ಹತ್ತಾರು ಕಷ್ಟಗಳಿಂದ ತಪ್ಪಿಸಿಕೊಳ್ಳಲು ಕುರಿಗಾಹಿಗಳೀಗ ಸುಲಭದ ಹಾದಿ ಹಿಡಿಯುತ್ತಿದ್ದಾರೆ.

ಆಧುನಿಕ ಜಗತ್ತಿಗೆ ಹೊಂದಿಕೊಳ್ಳುತ್ತಿರುವ ಕುರಿಗಾಹಿಗಳು ಕುರಿಗಳನ್ನು ಸುರಕ್ಷಿತವಾಗಿ ಸಾಗಿಸಲು ಲಾರಿಗಳ ಮೊರೆ ಹೋಗುತ್ತಿದ್ದಾರೆ. ದೊಡ್ಡ ಲಾರಿಗಳಿಗೆ ಅಟ್ಟದ ರೀತಿ ಎರಡು ಭಾಗಗಳಾಗಿ ಮಾರ್ಪಡಿಸಿ ಕುರಿಗಳನ್ನು ತುಂಬಿಕೊಂಡು ನಿರಾಯಾಸವಾಗಿ ತಮ್ಮ ಗಮ್ಯ ತಲುಪುತ್ತಿದ್ದಾರೆ. 

ಹತ್ತು ಚಕ್ರದ ಸರಕು ಸಾಗಾಣೆ ಲಾರಿಗೆ 100 ಕುರಿಗಳನ್ನು ಒಮ್ಮೆ ತುಂಬಿಕೊಂಡು ಹೋಗಬಹುದು. ಲಾರಿಗೆ ಹಲಗೆ ಹಾಕಿ ಅಟ್ಟದ ರೀತಿ ಮಾಡಿ ಕೆಳಗೆ ಮೇಲೆ ಮಲಗಿಸಿಕೊಂಡು ಹೋಗುತ್ತೇವೆ. ದಸೂಡಿ ಭಾಗದಿಂದ ಸಕಲೇಶಪುರಕ್ಕೆ ₹8 ಸಾವಿರ ಬಾಡಿಗೆ ತೆಗೆದುಕೊಳ್ಳುತ್ತೇವೆ. ಮಂಜುನಾಥ್‌ ಕುರಿ ಸಾಗಿಸುವ ವಾಹನ ಚಾಲಕ ಕುರಿಗಳನ್ನು ವಲಸೆಗೆ ಕರೆದೊಯ್ಯಲು ಬಹಳ ಕಷ್ಟಪಡಬೇಕಾಗಿತ್ತು. ಮನೆಯವರೆಲ್ಲಾ ಕುರಿಗಳ ಜತೆ ಸಾಗಿ ದಿನಗಟ್ಟಲೇ ರಸ್ತೆಯಲ್ಲಿ ಕಳೆಯುವಂತಾಗಿತ್ತು. ಮಾರ್ಗದುದ್ದಕ್ಕೂ ಅನೇಕ ತೊಂದರೆ ಅನುಭವಿಸಿದ್ದೆವು. ಈಗ ಲಾರಿ ಮೂಲಕ ಸಾಗಿಸುವುದು ತುಂಬಾ ಅನುಕೂಲಕರ. ರಾಜಣ್ಣ ಕುರಿಗಾಹಿ ಚಿತ್ರದೇವರಹಟ್ಟಿ ಡಿಸೆಂಬರ್‌ನಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಮಲೆನಾಡು ಕಡೆಗೆ ಪ್ರವಾಸ ಹೋಗುವುದು ವಾಡಿಕೆ. ಇದರ ಜತೆ ರಸ್ತೆಗಳಲ್ಲಿ ವಾಹನಗಳ ಹೇರಳ ಸಂಚಾರದ ನಡುವೆ ಕುರಿಗಳ ಸಂಚಾರ ಇಕ್ಕಟ್ಟಿಗೆ ಸಿಲುಕಿಸುತ್ತಿತ್ತು. ಹಲವು ಬಾರಿ ಕುರಿಗಾಹಿಗಳಿಗೂ ಚಾಲಕರಿಗೂ ಜಗಳವೇ ಆಗುತ್ತಿತ್ತು. ವಾಹನಗಳಲ್ಲಿ ಸಾಗಿಸುವುದು ಸಾಕಷ್ಟು ಅನುಕೂಲಕರ.ಮಹಮ್ಮದ್‌ ಹುಸೇನ್‌ ಕ್ಯಾಬ್‌ ಚಾಲಕ ಚಿಕ್ಕನಾಯಕನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT