ಗುಬ್ಬಿ: ತಾಲ್ಲೂಕಿನಲ್ಲಿ ಕಳೆದ ವರ್ಷ ಬರದಿಂದ ತತ್ತರಿಸಿದ್ದ ರೈತರಿಗೆ ಈ ಬಾರಿ ಉತ್ತಮ ಮಳೆಯಾಗುತ್ತಿರುವುದು ಸಂತಸ ತಂದಿದೆ.
ಮಳೆ ಇಲ್ಲದೆ ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದ ರೈತರು ಈ ಬಾರಿ ಮುಂಗಾರಿನಿಂದಲೂ ಉತ್ತಮವಾಗಿ ಮಳೆಯಾಗುತ್ತಿರುವುದರಿಂದ ತೊಗರಿ, ಅವರೆ, ರಾಗಿ, ಅಲಸಂದೆ, ಜೋಳ ಬಿತ್ತನೆ ಮಾಡಿದ್ದಾರೆ.
ಈಗಾಗಲೇ ಬಿತ್ತನೆಯಾಗಿದ್ದ ರಾಗಿ ಪೈರುಗಳು ಇತ್ತೀಚೆಗೆ ಹಳದಿ ಬಣ್ಣಕ್ಕೆ ತಿರುಗುತ್ತಿರುವುದು ರೈತರಲ್ಲಿ ಆತಂಕ ಉಂಟು ಮಾಡಿದೆ. ರಾಗಿ ಗರಿಗಳು ಹಳದಿ ಬಣ್ಣಕ್ಕೆ ತಿರುಗಿ ಒಣಗಿದಂತಾಗುತ್ತಿರುವುದರಿಂದ ಬೆಳೆ ಕೈಗೆ ಸಿಗುವುದೊ, ಇಲ್ಲವೋ ಎಂಬ ಭಯ ಕಾಡುತ್ತಿದೆ ಎನ್ನುತ್ತಾರೆ ರೈತ ಮಹಾದೇವ.
ರಾಗಿ ಬೆಳೆ ಕೈಗೆ ಸಿಗದಿದ್ದರೂ, ರಾಸುಗಳಿಗೆ ಮೇವಿಗೆ ಆಗುವಷ್ಟಾದರೂ ಸಿಕ್ಕರೆ ದನ ಕರುಗಳನ್ನಾದರೂ ಸಾಕಿಕೊಳ್ಳಬಹುದು. ಇಲ್ಲವಾದಲ್ಲಿ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದು ರೈತ ರಂಗಸ್ವಾಮಿ ಬೇಸರ ವ್ಯಕ್ತಪಡಿಸಿದರು.
ಕೃಷಿ ಇಲಾಖೆ ಕ್ರಿಯಾ ಯೋಜನೆಯಂತೆ ತಾಲ್ಲೂಕಿನಲ್ಲಿ 12,800 ಹೆಕ್ಟೇರ್ ವಿಸ್ತೀರ್ಣದಲ್ಲಿ ರಾಗಿ ಬೆಳೆಯುವ ಗುರಿ ಇದೆ. ಈಗಾಗಲೇ 12,784 ಹೆಕ್ಟೇರ್ ವಿಸ್ತೀರ್ಣದಲ್ಲಿ ಬಿತ್ತನೆಯಾಗಿದೆ. ಶೇ 99.88 ಗುರಿ ತಲುಪಲಾಗಿದೆ. ಇನ್ನೂ ಹಲವರು ಬಿತ್ತನೆ ಮಾಡುತ್ತಲೇ ಇರುವುದರಿಂದ, ರಾಗಿ ಬೆಳೆ ನಿರೀಕ್ಷೆಗಿಂತ ಹೆಚ್ಚು ಬಿತ್ತನೆಯಾಗುವ ಸಾಧ್ಯತೆ ಇದೆ.
ಈಗಾಗಲೇ ಕುಂಟೆ ಒಡೆದು, ಮೇಲು ಗೊಬ್ಬರವನ್ನು ಹಾಕಿದ್ದರೂ ಹಳದಿ ಬಣ್ಣಕ್ಕೆ ತಿರುಗುತ್ತಿರುವುದರಿಂದ ಏನಾಗುವುದೊ ಎಂಬ ಚಿಂತೆಯಲ್ಲಿ ರೈತರಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಪರಿಶೀಲಿಸಿ ತುರ್ತುಕ್ರಮ ಕೈಗೊಂಡು ರೈತರ ಸಹಾಯಕ್ಕೆ ಧಾವಿಸಬೇಕಿದೆ. ಇಲ್ಲವಾದಲ್ಲಿ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವರು.
ಉತ್ತಮ ಮಳೆಯಾಗುತ್ತಿದ್ದರಿಂದ ರಾಗಿ ಬೆಳೆಯಬೇಕು ಎಂಬ ಹುಮ್ಮಸ್ಸಿನಲ್ಲಿ ಉಳಿಮೆ ಮಾಡಲು, ಬೀಜ ಹಾಗೂ ಗೊಬ್ಬರ ಖರೀದಿಗೆ ಸಾವಿರಾರು ರೂಪಾಯಿ ಖರ್ಚು ಮಾಡಿದ್ದೇವೆ. ಬೆಳೆ ಕೈಕೊಟ್ಟರೆ ಸಾಲಗಾರನಾಗಬೇಕಾಗುತ್ತದೆ ಎನ್ನುತ್ತಾರೆ ರೈತ ರಮೇಶ್.
ನಿರಂತರವಾಗಿ ಮಳೆಯಾಗುತ್ತಿರುವುದರಿಂದ ತೇವಾಂಶ ಹೆಚ್ಚಾಗಿ ರಾಗಿಪೈರು ಹಳದಿ ಬಣ್ಣಕ್ಕೆ ತಿರುಗಿರಬಹುದು. ಪರಿಶೀಲನೆ ನಡೆಸಿ ತುರ್ತು ಕ್ರಮ ಕೈಗೊಂಡು ಅಗತ್ಯ ಸಲಹೆ ಸೂಚನೆ ನೀಡಲಾಗುವುದು. ರೈತರು ಆತಂಕ ಪಡುವ ಅಗತ್ಯವಿಲ್ಲ.ಜಗನ್ನಾಥ್ ಗೌಡ ಕೃಷಿ ಇಲಾಖೆ ಸಹಾಯಕ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.