ಮಂಗಳವಾರ, ಏಪ್ರಿಲ್ 20, 2021
29 °C
ಬಡವರು, ಕೂಲಿ ಕಾರ್ಮಿಕರೇ ಹೆಚ್ಚಿರುವ ಹೊಸಹಳ್ಳಿಯಲ್ಲಿ ನಿತ್ಯ ಕೇಳುತ್ತದೆ ಸ್ಫೋಟಕದ ಸದ್ದು

ಎಗ್ಗಿಲ್ಲದೆ ನಡೆಯುತ್ತಿದೆ ಗಣಿಗಾರಿಕೆ

ಎಂ.ಇ.ಕುಮಾರಸ್ವಾಮಿ Updated:

ಅಕ್ಷರ ಗಾತ್ರ : | |

Prajavani

ಕೋರ: ಹೋಬಳಿ ಹೊಸಹಳ್ಳಿ ಅಕ್ಕಪಕ್ಕದಲ್ಲಿ‌ ನಡೆಯುತ್ತಿರುವ ಬೃಹತ್ ಕಲ್ಲು ಗಣಿಗಾರಿಕೆ ಹಾಗೂ ಸ್ಫೋಟದಿಂದಾಗಿ ಮನೆಗಳು ಬಿರುಕು ಬಿಟ್ಟಿದ್ದು, ಇಲ್ಲಿ ವಾಸಿಸುತ್ತಿರುವ ಬಡ ಜನರ ಬದುಕು ಸಂಕಷ್ಟಕ್ಕೆ
ಗುರಿಯಾಗಿದೆ.

ಹೊಸಹಳ್ಳಿಯು ಕೋರ ಹೋಬಳಿಯ ಅಂಚಿನಲ್ಲಿದೆ. ಗ್ರಾಮದಲ್ಲಿ 500ಕ್ಕೂ ಹೆಚ್ಚು ಮನೆಗಳಿವೆ. ಅವುಗಳಲ್ಲಿ ತಾರಸಿ ಮನೆಗಳು ಬೆರಳೆಣಿಕೆಯಷ್ಟು ಮಾತ್ರ. ಉಳಿದಂತೆ ಸೀಟಿನ ಮನೆಗಳೇ ಇಲ್ಲಿನ ಬಡವರಿಗೆ ಸೂರಿನ ಆಧಾರವಾಗಿದೆ. ಪರಿಶಿಷ್ಟರು, ಬಡವರು, ಕೂಲಿ ಕಾರ್ಮಿಕರೇ ಹೆಚ್ಚಿರುವ ಈ ಗ್ರಾಮದ ಅಕ್ಕಪಕ್ಕ ನಡೆಯುತ್ತಿರುವ ಕ್ರಷರ್ ಹಾಗೂ ಸ್ಫೋಟಕದ ಸದ್ದು
ಗ್ರಾಮಸ್ಥರ ನೆಮ್ಮದಿಯ ಬದುಕನ್ನು ಕಸಿದಿದೆ.

ಗ್ರಾಮದ ಸುತ್ತ ಗೌರಿ ಅಕ್ಷಯ, ಕರ್ನಾಟಕ ಸ್ಟೋನ್ ಕ್ರಷರ್, ಶ್ರೀರಾಮ, ಎನ್‌ಎಸ್ ಸ್ಟೋನ್ ಕ್ರಷರ್‌ಗಳಿದ್ದು, ಸುತ್ತಮುತ್ತಲಿರುವ ರೈತರ ಜಮೀನುಗಳಿಗೆ ಸ್ಫೋಟದಿಂದ ಕಲ್ಲು ಹಾರಿ ಬಿದ್ದಿದ್ದು, ಬೇಸಾಯ ಮಾಡುವುದೇ ಕಷ್ಟವಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

ಹೊಸಹಳ್ಳಿ ಅಕ್ಕಪಕ್ಕದಲ್ಲಿರುವ ಕ್ರಷರ್‌ಗಳ ಪೈಕಿ ಗೌರಿ ಅಕ್ಷಯ ಸ್ಟೋನ್ ಕ್ರಷರ್ ಕೂಗಳತೆ ದೂರದಲ್ಲಿದೆ. ಕಲ್ಲು ಗಣಿಗಾರಿಕೆ ಹಾಗೂ ಕ್ರಷರ್‌ಗೆ ಸರ್ಕಾರ ಅನುಮತಿ ನೀಡಬೇಕಾದರೆ ಗ್ರಾಮದಿಂದ ಇಷ್ಟೇ ದೂರ ಇರಬೇಕು ಎಂಬ ನಿಯಮಾವಳಿಗಳಿವೆ. ಆದರೆ ಇಲ್ಲಿ ಯಾವುದೇ ಕಾನೂನುಗಳು ಪಾಲನೆಯಾಗುತ್ತಿಲ್ಲ.

ಬಡತನವೇ ಬಂಡವಾಳ: ಹೊಸಹಳ್ಳಿಯಲ್ಲಿ ಕೂಲಿ ಕಾರ್ಮಿಕರೆ ಹೆಚ್ಚು. ದಿನನಿತ್ಯದ ದುಡಿಮೆಯಿಂದ ಒಪ್ಪತ್ತಿನ ಗಂಜಿಗೆ ಆಧಾರವಾಗಿದೆ. ಸ್ಫೋಟದಿಂದಾಗಿ ಗ್ರಾಮದ ಬಹುತೇಕ ಮನೆಗಳ ಗೋಡೆಗಳು ಬಿರುಕು ಬಿಟ್ಟಿದ್ದು, ಚಾವಣಿಗೆ ಹಾಕಿರುವ ಸಿಮೆಂಟ್ ಶೀಟ್‌ಗಳು ಹೋಳಾಗಿವೆ. ಸಮಸ್ಯೆ ಬಗ್ಗೆ ಧ್ವನಿ ಎತ್ತುವವರ ಕಿಸೆಗಿಷ್ಟು ದುಡ್ಡು ತುಂಬುತ್ತಾರೆ, ಧ್ವನಿ ಇಲ್ಲದವರು ಶಾಪ ಹಾಕಿ ದಿನದೂಡುವ ಸ್ಥಿತಿ ಇದೆ ಎಂದು ಗ್ರಾಮದ ಮಹಿಳೆಯರು ಅಸಹಾಯಕತೆ ಹೊರಹಾಕಿದರು.

ನೆಮ್ಮದಿಯ ಜೀವನವೇ ಇಲ್ಲ

ರಾತ್ರಿಯಾದರೆ ಸಾಕು ಜೀವ ಬಿಗಿಹಿಡಿದು ಬದುಕಬೇಕು. ಸ್ಫೋಟದ ಸದ್ದಿಗೆ ಮನೆಯಲ್ಲಿರುವ ಟಿವಿ, ಸಜ್ಜೆ ಮೇಲಿಟ್ಟಿರುವ ಪಾತ್ರೆಗಳಲ್ಲ ಉದುರುತ್ತವೆ. ಮಹಿಳೆಯರು ಈ ಬಗ್ಗೆ ಕ್ರಷರ್‌ ಬಳಿ ಪ್ರತಿಭಟನೆ ಮಾಡಿದರೆ ಪ್ರಯೋಜನವಾಗಿಲ್ಲ ಎಂದು
ಗ್ರಾಮಸ್ಥರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ. 

ಗ್ರಾಮದಲ್ಲಿ ಗೆದ್ದಿರುವ ಜನಪ್ರತಿನಿಧಿಯೊಬ್ಬರು ಬಂಡೆ ಸ್ಫೋಟಿಸುತ್ತಾರೆ. ಹೀಗಿರುವಾಗ ಯಾರ ಬಳಿ ಸಮಸ್ಯೆಯನ್ನು ಹೇಳಬೇಕು ಎಂದು ಪ್ರಶ್ನಿಸುತ್ತಾರೆ ಸ್ಥಳೀಯರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.