ಕುಣಿಗಲ್: ಹೈನುಗಾರಿಕೆ ಪ್ರಗತಿಗೆ ಶಾಸಕರೇ ಅಡ್ಡಿ- ಡಿ.ಕೃಷ್ಣಕುಮಾರ್ ಆರೋಪ

ಕುಣಿಗಲ್: ‘ತಾಲ್ಲೂಕಿನಲ್ಲಿ ಹೈನುಗಾರಿಕೆಯ ಪ್ರಗತಿಗೆ ಶಾಸಕರೇ ಅಡ್ಡಿಯಾಗಿದ್ದಾರೆ’ ಎಂದು ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ನಿರ್ದೇಶಕ ಡಿ.ಕೃಷ್ಣಕುಮಾರ್ ಆರೋಪಿಸಿದರು.
ತಾಲ್ಲೂಕಿನ ಗವಿಮಠದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಪ್ರಾದೇಶಿಕ ಸಭೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಒಕ್ಕೂಟವು ₹27 ಕೋಟಿ ನಷ್ಟದಲ್ಲಿದಲಿದ್ದರೂ, ಹಾಲು ಉತ್ಪಾದಕರ ಕೈಹಿಡಿದಿದೆ. ಗುಣಮಟ್ಟದ ಮತ್ತು ಜಿಲ್ಲೆಯಲ್ಲಿ ಹೆಚ್ಚು ಹಾಲು ಉತ್ಪಾದಿಸುತ್ತಿರುವ ತಾಲ್ಲೂಕಿನಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಪ್ರಾರಂಭಕ್ಕೆ ವಿಫುಲ ಅವಕಾಶವಿದ್ದರೂ, ಅನಾನುಭವಿ ಶಾಸಕರ ಪ್ರಜ್ಞೆಯಿಂದಾಗಿ ಮತ್ತು ರಾಜಕಾರಣದಿಂದಾಗಿ ಸಂಘಗಳ ರಚನೆ ಸಾಧ್ಯವಾಗಿಲ್ಲ ಎಂದರು.
ಹೈನುಗಾರಿಕೆ ನಂಬಿರುವ ತಾಲ್ಲೂಕಿನ ರೈತರ ಅನುಕೂಲಕ್ಕಾಗಿ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಕಳೆದ ಸಾಲಿನಲ್ಲಿ 218 ರಾಸುಗಳು ಮೃತಪಟ್ಟಿದ್ದು ₹87 ಲಕ್ಷ ಪರಿಹಾರ ಧನ, 52 ಮಂದಿ ಮೃತಪಟ್ಟಿದ್ದು ₹26 ಲಕ್ಷ ಪರಿಹಾರಧನ, 90 ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಲಾಗಿದೆ. ಇಬ್ಬರು ಪಶುವೈದ್ಯರನ್ನು ಮತ್ತು ಸಂಚಾರಿ ಚಿಕಿತ್ಸಾ ಘಟಕವನ್ನು ಪ್ರಾರಂಭಿಸಿದ್ದು, ಪಶುವೈದ್ಯಕೀಯ ಸೇವೆಗಳನ್ನು ನೀಡಲಾಗುತ್ತಿದೆ. ಸಂಘಗಳ ಚುನಾವಣೆಯಲ್ಲಿ ರಾಜಕಾರಣಕ್ಕೆ ಮಹತ್ವ ನೀಡದೆ ಅವಿರೋಧ ಆಯ್ಕೆಗೆ ಶ್ರಮಿಸಿ, ಚುನಾವಣಾ ವೆಚ್ಚವನ್ನು ಸಂಘಗಳ ಕಟ್ಟಡ ನಿರ್ಮಾಣಕ್ಕೆ ಸೇರಿದಂತೆ ಉತ್ಪಾದಕರ ಅನುಕೂಲಕ್ಕೆ ಬಳಸಬೇಕು ಎಂದು ಮನವಿ ಮಾಡಿದರು.
ಒಕ್ಕೂಟದ ಅಧ್ಯಕ್ಷ ಮಹಾಲಿಂಗಪ್ಪ ಮಾತನಾಡಿ, ಸ್ಥಳೀಯ ಹಾಲು ಉತ್ಪಾದಕ ಸಹಕಾರ ಸಂಘಗಳ ಸಮಸ್ಯೆ ಅರಿತು, ಸ್ಪಂದಿಸುವ ಉದ್ದೇಶದಿಂದ ತಾಲ್ಲೂಕು ಮಟ್ಟದಲ್ಲಿ ಸಭೆ ಆಯೋಜಿಸಲಾಗುತ್ತಿದೆ. ಜಿಲ್ಲೆಯಲ್ಲಿ ಪ್ರಾರಂಭಿಸಲು ಉದ್ದೇಶಿಸಿರುವ ಮೆಗಾ ಡೇರಿಗೆ ಮುಂದಿನ ತಿಂಗಳು ಭೂಮಿಪೂಜೆ ನೆರವೇರಿಸಲಾಗುವುದು ಎಂದರು.
ವ್ಯವಸ್ಥಾಪಕ ನಿರ್ದೇಶಕ ಸುಬ್ರಾಯಭಟ್, ವಕೀಲರಾದ ನಾರಾಯಣ್ ಗೌಡ, ಬಿ.ಆರ್.ತಾಲ್ಲೂಕು ಸಹಕಾರಿ ವಿಸ್ತರಣಾಧಿಕಾರಿ ನವ್ಯಶ್ರೀ, ವ್ಯವಸ್ಥಾಪಕ ಕುಮಾರ್, ದೀಪಕ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.