ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಲ್ಯಮಾಪನ ಮಾಡಿ, ಮತ ನೀಡಿ: ಪುಟ್ಟಣ್ಣ

Published 24 ಮೇ 2024, 5:08 IST
Last Updated 24 ಮೇ 2024, 5:08 IST
ಅಕ್ಷರ ಗಾತ್ರ

ತುಮಕೂರು: ಶಿಕ್ಷಕರು ಮೌಲ್ಯಮಾಪನ ಮಾಡಿ ಮಕ್ಕಳಿಗೆ ಅಂಕ ನೀಡುವಂತೆ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲೂ ಅಭ್ಯರ್ಥಿಗಳ ಬಗ್ಗೆ ಮೌಲ್ಯಮಾಪನ ಮಾಡಿ ಮತ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಇಲ್ಲಿ ಗುರುವಾರ ಮನವಿ ಮಾಡಿದರು.

ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಪರ ಪ್ರಚಾರ ಮಾಡಲು ನಗರಕ್ಕೆ ಬಂದಿದ್ದ ಅವರು, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ಜಾರಿ, ಹೊಸ ಪಿಂಚಣಿ ಯೋಜನೆ (ಒಪಿಎಸ್) ಕೈಬಿಟ್ಟು ಹಿಂದಿನ ಪಿಂಚಣಿ ಯೋಜನೆ (ಎನ್‌ಪಿಎಸ್) ಜಾರಿ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಹಂತದಲ್ಲಿ ಹೋರಾಟ ನಡೆಸಲು ಶ್ರೀನಿವಾಸ್ ಅವರನ್ನು ಗೆಲ್ಲಿಸಬೇಕಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಆಡಳಿತದಲ್ಲಿದ್ದು, ಇಲ್ಲೂ ಪಕ್ಷದ ಅಭ್ಯರ್ಥಿ ಆಯ್ಕೆಯಾದರೆ ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ ಎಂದು ಹೇಳಿದರು.

ಅನುದಾನಿತ ಶಾಲಾ, ಕಾಲೇಜುಗಳ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಹಿಂದಿನ ಸರ್ಕಾರ ಅವಕಾಶ ನೀಡಿರಲಿಲ್ಲ. ಈಗಿನ ಕಾಂಗ್ರೆಸ್ ಸರ್ಕಾರ ಒಂದು ಹಂತದವರೆಗೆ ಅವಕಾಶ ನೀಡಿದೆ. ಇನ್ನೂ ಬಾಕಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅನುವು ಮಾಡಿಕೊಡುವಂತೆ ಸರ್ಕಾರದ ಮೇಲೆ ಒತ್ತಡ ತರಬೇಕಾಗಿದೆ. ಹಿಂದಿನ ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿ ಹಲವು ಸಮಸ್ಯೆಗಳನ್ನು ಸೃಷ್ಟಿಸಿದ್ದು, ಅವುಗಳನ್ನು ಸರಿಪಡಿಸುವ ಕೆಲಸ ಮಾಡಬೇಕಿದೆ. ಹಾಗಾಗಿ ಶಿಕ್ಷಕರು, ಶಿಕ್ಷಣ ಸಂಸ್ಥೆಗಳ ಪರವಾಗಿ ಕೆಲಸ ಮಾಡುವವರನ್ನು ಆಯ್ಕೆ ಮಾಡಬೇಕು ಎಂದು ಕೇಳಿಕೊಂಡರು.

ಕಳೆದ ಬಾರಿ ಆಗ್ನೇಯ ಪದವೀಧರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಶ್ರೀನಿವಾಸ್ ಸ್ಪರ್ಧಿಸಿ ಸೋತಿದ್ದಾರೆ. ಶಿಕ್ಷಕರ ಪರವಾದ ಕಾಳಜಿ ಹೊಂದಿದ್ದಾರೆ. ಇಂತಹವರು ಆಯ್ಕೆಯಾದರೆ ಸರ್ಕಾರದ ಮಟ್ಟದಲ್ಲಿ ಶಿಕ್ಷಕರ ಪರವಾಗಿ ಕೆಲಸ ಮಾಡುತ್ತಾರೆ ಎಂದು ತಿಳಿಸಿದರು.

ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT