ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಪರೀಕ್ಷೆಗೆ ಸಂಚಾರಿ ಕ್ಲಿನಿಕ್

₹ 1.80 ಕೋಟಿ ವೆಚ್ಚದ ವಾಹನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಚಾಲನೆ
Last Updated 1 ಜೂನ್ 2021, 2:27 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಪರೀಕ್ಷೆ ಮಾಡಲು ‘ಸಂಚಾರಿ ಕ್ಲಿನಿಕ್’ ಆರಂಭಿಸಲಾಗಿದ್ದು, ಸೋಮವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಚಾಲನೆ ನೀಡಲಾಯಿತು.

ಬೆಂಗಳೂರಿನ ಹೈಗ್ರೌಂಡ್ಸ್ ರೋಟರಿ, ಸಾಯಿಕಾರ್ಪ್ ಸಂಸ್ಥೆ, ಆಟೊಮೋಟಿವ್ ಆಕ್ಸಿಸ್‌ ನೆರವಿನೊಂದಿಗೆ ಟಾಟಾ ಮೆಡಿಕಲ್ ಅಂಡ್ ಡಯೊಗ್ನೋಸ್ಟಿಕ್ ಸಂಸ್ಥೆಯವರು ₹ 1.80 ಕೋಟಿ ಮೊತ್ತದಲ್ಲಿ ಈ ವಾಹನ ರೂಪಿಸಿದ್ದಾರೆ. ರೋಟರಿ ಹಾಗೂ ಆಟೊಮೋಟಿವ್ ಆಕ್ಸಿಸ್ ಕಂಪನಿಯವರು ₹ 1 ಕೋಟಿ ಮೊತ್ತದ ವಾಹನವನ್ನು ಕೊಡುಗೆಯಾಗಿ ನೀಡಿದ್ದರೆ, ಟಾಟಾ ಮೆಡಿಕಲ್ ಸಂಸ್ಥೆಯವರು ₹ 80 ಲಕ್ಷ ವೆಚ್ಚದಲ್ಲಿ ಉಪಕರಣ, ತಾಂತ್ರಿಕ ನೆರವು ಒದಗಿಸಿದ್ದಾರೆ. ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್) ಬಳಕೆ ಮಾಡಿಕೊಳ್ಳಲಾಗಿದೆ.

ಆರ್‌ಟಿಪಿಸಿಆರ್‌ನಲ್ಲಿ ಕೋವಿಡ್ ಫಲಿತಾಂಶ ಪಡೆಯಲು 8 ಗಂಟೆಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಆದರೆ, ಈ ನೂತನ ಪ್ರಯೋಗಾಲಯದಲ್ಲಿ 2 ಗಂಟೆಯಲ್ಲಿ ಫಲಿತಾಂಶ ಪಡೆದುಕೊಳ್ಳಬಹುದಾಗಿದೆ. ಜತೆಗೆ ವೈರಸ್‌ನಿಂದ ಬರುವ ಎಲ್ಲಾ ಕಾಯಿಲೆಗಳನ್ನು ಪರೀಕ್ಷಿಸಬಹುದಾಗಿದೆ.

ಸಂಚಾರಿ ಪ್ರಯೋಗಾಲಯಕ್ಕೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ, ‘ಉನ್ನತ ತಂತ್ರಜ್ಞಾನ ಬಳಸಿ ಪ್ರಯೋಗಾಲಯ ಸಿದ್ಧಪಡಿಸಲಾಗಿದೆ. ಎಲ್ಲಾ ರೀತಿಯ ವೈರಸ್‌ನಿಂದ ಬರುವ ರೋಗವನ್ನು ಪತ್ತೆ ಮಾಡಬಹುದಾಗಿದೆ. ತುಮಕೂರಿನಂತಹ ಹಿಂದುಳಿದ ಜಿಲ್ಲೆಗೆ ಇಂತಹ ಸೌಲಭ್ಯ ಅಗತ್ಯವಿತ್ತು. ಮೈಸೂರು ಬಿಟ್ಟರೆ ಈ ಸೌಲಭ್ಯ ಹೊಂದಿದ ರಾಜ್ಯದ ಎರಡನೇ ಜಿಲ್ಲೆಯಾಗಿದೆ. ಆರಂಭದಲ್ಲಿ ಗಡಿ ಭಾಗದಲ್ಲಿ ಬಳಕೆ ಮಾಡಲಾಗುವುದು. ಪಾವಗಡ, ಮಧುಗಿರಿ ತಾಲ್ಲೂಕಿನ ಜನರ ಉಪಯೋಗಕ್ಕೆ ಲಭ್ಯವಾಗಲಿದೆ’ ಎಂದು ಹೇಳಿದರು.

ತಿಪಟೂರಿನಲ್ಲಿ ಕೋವಿಡ್ ಪರೀಕ್ಷೆ ಮಾಡುತ್ತಿದ್ದು, ಶಿರಾದಲ್ಲೂ ಶೀಘ್ರವೇ ಆರಂಭವಾಗಲಿದೆ. ಗಡಿಭಾಗದ ಜನರು ಕೋವಿಡ್ ವರದಿ ಪಡೆಯಲು ತಡವಾಗುತ್ತಿರುವುದನ್ನು ಮನಗಂಡು ಸಂಚಾರಿ ಪ್ರಯೋಗಾಲಯ ವ್ಯವಸ್ಥೆ ಮಾಡಲಾಗಿದೆ ಎಂದರು.

ಕೊರಟಗೆರೆಯಲ್ಲಿ ₹ 30 ಲಕ್ಷ ವೆಚ್ಚದಲ್ಲಿ 150 ಲೀಟರ್ ಸಾಮರ್ಥ್ಯದ ಆಮ್ಲಜನಕ ಉತ್ಪಾದನಾ ಘಟಕವನ್ನು ವಿಪ್ರೊ ಸಂಸ್ಥೆಯವರು ನಿರ್ಮಿಸಿಕೊಡಲು ಮುಂದಾಗಿದ್ದಾರೆ ಎಂದರು.

ಸಾಯಿಕಾರ್ಪ್ ಹೆಲ್ತ್ ಟೆಕ್ನಾಲಜೀಸ್‍ ನಿರ್ದೇಶಕ ಡಾ.ಬೋಪಣ್ಣ, ‘ಸಂಚಾರಿ ಪ್ರಯೋಗಾಲಯದಲ್ಲಿ ಕ್ಲಿನಿಕ್, ಲ್ಯಾಬ್, ಫಾರ್ಮಸಿ ಹೊಂದಿದೆ. ಒಂದೇ ಸೂರಿನಡಿ ಆರೋಗ್ಯ ಸೇವೆ ಲಭ್ಯವಾಗಲಿದೆ. 10ರಿಂದ 12 ಗಂಟೆ ಅವಧಿಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಕೋವಿಡ್ ಪರೀಕ್ಷೆ ಮಾಡುವ ಸಾಮರ್ಥ್ಯ ಹೊಂದಿದೆ’ ಎಂದು ಹೇಳಿದರು.

ಟಾಟಾ ಮೆಡಿಕಲ್ ಅಂಡ್ ಡಯೊಗ್ನೋಸ್ಟಿಕ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಗಿರೀಶ್‍ ಕೃಷ್ಣಮೂರ್ತಿ, ‘ಜನರ ಸೇವೆಗಾಗಿಯೇ ಇದನ್ನು ಅಭಿವೃದ್ಧಿಪಡಿಸಿದ್ದೇವೆ. ಈಗಾಗಲೇ ಇಂತಹ ಪ್ರಯೋಗಾಲಯಗಳನ್ನು ನೀಡಿದ್ದು ಕುಂಭಮೇಳದಲ್ಲಿ 50 ಸಾವಿರ ಪರೀಕ್ಷೆ ಮಾಡಲಾಗಿದೆ. ಜಿಲ್ಲೆಗೆ ಸಿ.ಟಿ ಸ್ಕ್ಯಾನ್ ಯಂತ್ರ ನೀಡುವಂತೆ ಕೇಳಿಕೊಂಡಿದ್ದು, ಸಂಸ್ಥೆಯಿಂದ ಮುಂದಿನ ದಿನಗಳಲ್ಲಿ ನೀಡ ಲಾಗುವುದು’ ಎಂದು ಹೇಳಿದರು.

ರೋಟರಿ ಬೆಂಗಳೂರು ಹೈಗ್ರೌಂಡ್ಸ್ ಅಧ್ಯಕ್ಷ ಅರವಿಂದ್ ನಾಯ್ಡು, ಆರ್‌ಟಿಪಿಸಿಆರ್ ಫಲಿತಾಂಶ ಅತಿಬೇಗ ಸಿಗಲಿದ್ದು, ತಕ್ಷಣ ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ ಎಂದರು.

ಶಾಸಕರಾದ ಜಿ.ಬಿ. ಜ್ಯೋತಿಗಣೇಶ್, ಬಿ.ಸಿ. ನಾಗೇಶ್, ಮಸಾಲೆ ಜಯರಾಮ್, ಡಾ.ರಾಜೇಶ್‍ಗೌಡ, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಎಸ್ಪಿ ಡಾ.ಕೆ. ವಂಸಿಕೃಷ್ಣ, ಜಿ.ಪಂ ಸಿಇಒ ಕೆ. ವಿದ್ಯಾಕುಮಾರಿ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ, ಡಿಎಚ್‌ಒ ಡಾ.ನಾಗೇಂದ್ರಪ್ಪ, ಡಾ.ಸುರೇಶ್‍ಬಾಬು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT