ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು: ಮಾದರಿ ಶಾಲೆಯ ಶಿಕ್ಷಕರಿಗಿಲ್ಲ ಸಂಬಳ

ನಾಲ್ಕು ತಿಂಗಳಿನಿಂದ ವಾವತಿಯಾಗದ ವೇತನ
Published : 2 ಜನವರಿ 2024, 7:07 IST
Last Updated : 2 ಜನವರಿ 2024, 7:07 IST
ಫಾಲೋ ಮಾಡಿ
Comments

ತುಮಕೂರು: ಜಿಲ್ಲೆಯ ಮೌಲಾನ ಆಜಾದ್‌ ಮಾದರಿ ಶಾಲೆಗಳಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಕಳೆದ 4 ತಿಂಗಳಿನಿಂದ ವೇತನ ಪಾವತಿಯಾಗಿಲ್ಲ. ಸಂಬಳ ಸಿಗದೆ ಶಿಕ್ಷಕರಿಗೆ ಕುಟುಂಬ ನಿರ್ವಹಿಸುವುದು ಸವಾಲಾಗಿದೆ.

ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯಡಿ 9 ಮಾದರಿ ಶಾಲೆಗಳು ನಡೆಯುತ್ತಿವೆ. ಬಹುತೇಕ ಶಾಲೆಗಳಲ್ಲಿ ಹೊರ ಗುತ್ತಿಗೆಯ ಶಿಕ್ಷಕರೇ ಆಧಾರವಾಗಿದ್ದು, ಕಾಯಂ ಶಿಕ್ಷಕರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹಲವು ಶಾಲೆಗಳಲ್ಲಿ ಮುಖ್ಯ ಶಿಕ್ಷಕರೇ ಇಲ್ಲ. ತುರುವೇಕೆರೆ, ಮಧುಗಿರಿ ಮತ್ತು ನಗರದ ಗುಂಚಿಚೌಕ ಬಳಿಯ ಶಾಲೆಯಲ್ಲಿ ಮಾತ್ರ ಕಾಯಂ ಮುಖ್ಯ ಶಿಕ್ಷಕರಿದ್ದು, ಅವರಿಗೆ ಇತರೆ ಶಾಲೆಗಳ ‘ಹೊರೆ’ ಹೊರಿಸಲಾಗಿದೆ.

9 ಶಾಲೆಗಳಲ್ಲಿ 63 ಜನ ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ 7 ಜನ ಕಾಯಂ, 56 ಜನ ಹೊರ ಗುತ್ತಿಗೆಯಡಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಮಾದರಿ ಶಾಲೆಗಳಲ್ಲಿ ಕಾಯಂ ಶಿಕ್ಷಕರ ಕೊರತೆ ಒಂದು ಕಡೆಯಾದರೆ, ಇತ್ತ ಪ್ರವೇಶಾತಿ ಪಡೆಯುವ ಮಕ್ಕಳ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದೆ. ಎಲ್ಲಾ 9 ಮಾದರಿ ಶಾಲೆಗಳಲ್ಲಿ 2,700 ಮಕ್ಕಳ ದಾಖಲಾತಿಗೆ ಅವಕಾಶವಿದ್ದು, 2,022 ಅಲ್ಪಸಂಖ್ಯಾತರ ಮತ್ತು 197 ಇತರೆ ಸಮುದಾಯಗಳ ಮಕ್ಕಳು ಸೇರಿದಂತೆ ಒಟ್ಟು 2,219 ಮಕ್ಕಳು ಮಾತ್ರ ದಾಖಲಾತಿ ಪಡೆದಿದ್ದಾರೆ. ಪ್ರತಿ ಶಾಲೆಗೆ 300 ಮಕ್ಕಳನ್ನು ದಾಖಲಿಸಿ ಕೊಳ್ಳಬಹುದು. ಆದರೆ ಜಿಲ್ಲೆಯ ಯಾವುದೇ ಶಾಲೆಯಲ್ಲಿ ದಾಖಲಾತಿ ಸಂಖ್ಯೆ 300 ತಲುಪಿಲ್ಲ. ತುರುವೇಕೆರೆಯ ಶಾಲೆಯಲ್ಲಿ ಕೇವಲ 170 ಮಕ್ಕಳಿದ್ದಾರೆ!

ಇಡೀ ಶಾಲೆಯನ್ನು ನಡೆಸಿಕೊಂಡು ಹೋಗುತ್ತಿರುವ ಹೊರ ಗುತ್ತಿಗೆ ಶಿಕ್ಷಕರಿಗೆ ಸಂಬಳ ನೀಡಲು ಅಲ್ಪ ಸಂಖ್ಯಾತರ ಇಲಾಖೆ ಗಮನ ಹರಿಸಿಲ್ಲ. ಆಗಸ್ಟ್‌ ತಿಂಗಳಲ್ಲಿ ಕೊನೆಯ ಬಾರಿಗೆ ವೇತನ ಪಾವತಿಯಾಗಿತ್ತು. ಅದಾದ ನಂತರ ಈವರೆಗೂ ಸಂಬಳದ ಹಣ ಬಿಡುಗಡೆಯಾಗಿಲ್ಲ. ಶಿಕ್ಷಕರು ಪ್ರತಿ ತಿಂಗಳು ಸಂಬಳಕ್ಕಾಗಿ ಬೇಡುವುದು ತಪ್ಪಿಲ್ಲ.

ಹಲವು ಕಡೆಗಳಲ್ಲಿ ಶಿಕ್ಷಕಿಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಸಂಬಳ ಬಾರದಿದ್ದರಿಂದ ತುಂಬಾ ಸಮಸ್ಯೆ ಅನುಭವಿಸುತ್ತಿದ್ದಾರೆ. ಬಾಡಿಗೆ ಮನೆಯಲ್ಲಿ ಇರುವರು ಬಾಡಿಗೆಯ ಹಣ ಪಾವತಿಸಲಾದೆ ಪರದಾಡುತ್ತಿದ್ದಾರೆ. ಮಕ್ಕಳ ಶಾಲೆ ಶುಲ್ಕ, ಹಬ್ಬಹರಿದಿನಗಳಲ್ಲಿ ಕೈ ಸಾಲ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಂಕಷ್ಟದಲ್ಲಿ ದಿನದೂಡುತ್ತಿದ್ದಾರೆ.

‘ಸರ್ಕಾರ ‘ಗ್ಯಾರಂಟಿ’ಗಳ ಜಪ ಮಾಡುತ್ತಾ, ಶಿಕ್ಷಕರನ್ನು ಮರೆತಿದೆ. ಶಿಕ್ಷಕರ ವೇತನಕ್ಕಾಗಿ ಸರ್ಕಾರದಿಂದ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಕಳೆದ ನಾಲ್ಕು ತಿಂಗಳಿನಿಂದ ಬಿಡಿಗಾಸು ಬಂದಿಲ್ಲ. ಇದರಿಂದ ವೇತನ ಪಾವತಿ ವಿಳಂಬವಾಗುತ್ತಿದೆ. ಜೀವನ ನಡೆಸಲು ಕಷ್ಟವಾಗುತ್ತಿದೆ’ ಎಂದು ಮೌಲಾನ ಆಜಾದ್‌ ಶಾಲೆಯಲ್ಲಿ ಹೊರಗುತ್ತಿಗೆಯಡಿ ಕೆಲಸ ಮಾಡುತ್ತಿರುವ ಶಿಕ್ಷಕರೊಬ್ಬರು ತಮ್ಮ ಅಳಲು ತೋಡಿಕೊಂಡರು.

ಜಿಲ್ಲೆಯ ಕೆಲವು ಶಾಲೆಗಳ ಹೊರ ಗುತ್ತಿಗೆ ಶಿಕ್ಷಕರಿಗೆ ಸಂಬಳ ಪಾವತಿ ಆಗದಿರುವುದು ಗಮನಕ್ಕೆ ಬಂದಿದೆ. ಆದಷ್ಟು ಬೇಗ ವೇತನ ಪಾವತಿಸಲಾಗುವುದು.
–ಶಬ್ಬೀರ್‌ ಅಹ್ಮದ್‌, ಜಿಲ್ಲಾ ಅಧಿಕಾರಿ ಅ‌ಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT