ಭಾನುವಾರ, ಜನವರಿ 19, 2020
23 °C

ಮೋದಿ ಭೇಟಿ ಹಿನ್ನೆಲೆ ಬಿಗಿ ಭದ್ರತೆ: ತುಮಕೂರಿನಲ್ಲಿ ಅಘೋಷಿತ ಬಂದ್ ವಾತಾವರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಮೋದಿ ಭೇಟಿ ಹಿನ್ನೆಲೆಯಲ್ಲಿ ನಗರದಲ್ಲಿ ಅಘೋಷಿತ ಬಂದ್ ವಾತಾವರಣ ಇದೆ. ಬಿ.ಎಚ್.ರಸ್ತೆ ಸಂಪರ್ಕಿಸುವ ಕೂಡು ರಸ್ತೆಗಳನ್ನು ಬಂದ್ ಮಾಡಲಾಗಿದೆ. ಬಿ.ಎಚ್.ರಸ್ತೆಯ ಅಡಿಗಡಿಗೂ ಪೊಲೀಸರು ಭದ್ರತೆಗೆ ಇದ್ದಾರೆ.

ಅಲ್ಲದೆ ಎಸ್‌.ಎಸ್.ಪುರಂ, ಕುವೆಂಪು ನಗರ, ಹನುಮಂತಪುರ ಸೇರಿದಂತೆ ನಾನಾ ಭಾಗಗಳಲ್ಲಿಯೂ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. 3 ಸಾವಿರ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಐದು ಮಂದಿ ಎಸ್‌ಪಿಗಳು ಭದ್ರತೆಯ ಉಸ್ತುವಾರಿ ಹೊತ್ತಿದ್ದಾರೆ.

ಜನರನ್ನು ಕರೆತರಲು ಒಟ್ಟು ಒಂದು ಸಾವಿರ ಬಸ್‌ಗಳನ್ನು ಬಿಡಲಾಗಿದೆ. ತುಮಕೂರು ಕೆಎಸ್‌ಆರ್‌ಟಿಸಿ ಘಟಕದ 400 ಬಸ್‌ಗಳನ್ನು ಬಳಸಿಕೊಂಡ ಹಿನ್ನೆಲೆಯಲ್ಲಿ ತುಮಕೂರು ಬಸ್ ನಿಲ್ದಾಣದಲ್ಲಿ ಬಿಕೋ ಎನ್ನುತ್ತಿತ್ತು.

ತುಮಕೂರು ವಿಶ್ವವಿದ್ಯಾಲಯದ ಹೆಲಿಪ್ಯಾಡ್‌ಗೆ 2.10ಕ್ಕೆ ಬರುವ ಪ್ರಧಾನಿ, ಅಲ್ಲಿಂದ ಸಿದ್ಧಗಂಗಾ ಮಠಕ್ಕೆ ತೆರಳುವರು. ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆ ದರ್ಶನ ಪಡೆಯುವರು. ಅಲ್ಲಿ ಕ್ಷಣ ಕಾಲ ಧ್ಯಾನ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ನಂತರ ಗದ್ದುಗೆ ಸಮೀಪ ಬಿಲ್ಪಪತ್ರೆ ಸಸಿ ನೆಡುವರು. ಮಠದ ಮಕ್ಕಳನ್ನು ಉದ್ದೇಶಿಸಿ ಮಾತನಾಡುವರು.

ಶಿವಕುಮಾರ ಸ್ವಾಮೀಜಿ ವಸ್ತು ಸಂಗ್ರಹಾಲಯ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುವರು. ನಂತರ ಸಿದ್ಧಲಿಂಗ ಸ್ವಾಮೀಜಿ ಅವರ ಆಶೀರ್ವಾದ ಪಡೆಯುವರು. 40 ನಿಮಿಷಗಳ ಕಾಲ ಪ್ರಧಾನಿ ಮಠದಲ್ಲಿ ಇರಲಿದ್ದಾರೆ. ಅಲ್ಲಿಂದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುವ ರೈತ ಸಮಾವೇಶದಲ್ಲಿ ಪಾಲ್ಗೊಳ್ಳುವರು. ಇಲ್ಲಿ 60 ಸಾವಿರ ಜನರಿಗೆ ಆಸನಗಳ ವ್ಯವಸ್ಥೆ ಮಾಡಲಾಗಿದೆ.


ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹುಳಿಯಾರು ಹೋಬಳಿ ಯಳನಾಡುವಿನಿಂದ ತುಮಕೂರಿಗೆ ಹೊರಟ ಸಾರ್ವಜನಿಕರು.

ನಿರ್ಬಂಧ: ಸಿದ್ಧಗಂಗಾ ಮಠದ ಒಳಗೆ ಯಾವುದೇ ವಾಹನಗಳನ್ನು ಬಿಡುತ್ತಿಲ್ಲ. ಅಲ್ಲದೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ಮೋದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಇಷ್ಟಪಡುವ ರೈತರು ಆಧಾರ್ ಕಾರ್ಡ್ ತರಬೇಕು ಎಂದು ತಾಲ್ಲೂಕಿನ ಚಿಕ್ಕತೊಟ್ಲುಕೆರೆ ಗ್ರಾಮ ಪಂಚಾಯಿತಿ ಸೂಚಿಸಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು