ಭಾನುವಾರ, ಆಗಸ್ಟ್ 25, 2019
28 °C
ಮಹಾನಗರ ಪಾಲಿಕೆ ಆಯುಕ್ತ ಭೂಬಾಲನ್ ಮನೆಯೊಳಗೆ ನುಗ್ಗಿದ್ದ ಮಂಗಗಳು!

ಮಂಗಗಳ ಸೆರೆಗೆ ಕಾರ್ಯಾಚರಣೆ

Published:
Updated:
Prajavani

ತುಮಕೂರು: ನಗರದ ಕೆಲವು ವಾರ್ಡ್‌ಗಳಲ್ಲಿ ಮಂಗಗಳ ಹಾವಳಿ ಹೆಚ್ಚಿದ್ದು ಅವುಗಳ ಸೆರೆಗೆ ಪಾಲಿಕೆ ಮುಂದಾಗಿದೆ. ಮಂಗಗಳ ಹಾವಳಿ ಬಗ್ಗೆ ನಾಗರಿಕರು ಆಯಾ ವಾರ್ಡ್‌ ಸದಸ್ಯರಿಗೆ ದೂರು ನೀಡಿದ್ದರು. ಅಲ್ಲದೆ ಆಯುಕ್ತರಿಗೂ ಮಾಹಿತಿ ನೀಡಿದ್ದರು.

ಪಾಲಿಕೆ ಆಯುಕ್ತರ ನಿವಾಸವಿರುವ ಗಂಗೋತ್ರಿ ನಗರದ ಸುತ್ತಮುತ್ತ ಮಂಗಗಳ ಹಾವಳಿ ಹೆಚ್ಚಿತ್ತು. ಈ ಬಗ್ಗೆ ಆ ಪ್ರದೇಶದ ನಾಗರಿಕರು ಆಯುಕ್ತರಿಗೆ ದೂರು ನೀಡಿದ್ದರು. ಈ ನಡುವೆ ಒಮ್ಮೆ ಪಾಲಿಕೆ ಆಯುಕ್ತರ ಮನೆಯೊಳಗೆ ಮಂಗಗಳು ನುಗ್ಗಿದ್ದವು. ಮನೆಯೊಳಗಿನ ಸೋಫಾ ಮೇಲೆ ಕುಳಿತು ಟಿವಿ ರಿಮೇಕ್ ಹಿಡಿದಿತ್ತು ಎನ್ನುತ್ತಾರೆ ಆ ಪ್ರದೇಶದ ಜನರು. ಈ ಎಲ್ಲ ದೂರು, ದುಮ್ಮಾನಗಳ ಹಿನ್ನೆಲೆಯಲ್ಲಿ ಪಾಲಿಕೆ ಜು.25ರಿಂದ ಮಂಗಳನ್ನು ಸೆರೆ ಹಿಡಿಯುತ್ತಿದೆ.

27ನೇ ವಾರ್ಡ್‌ನ ಗಂಗ್ರೋತ್ರಿ ನಗರ, 26ನೇ ವಾರ್ಡ್‌ನ ಎಸ್‌ಐಟಿ ಮಹಿಳಾ ಹಾಸ್ಟೆಲ್ ಬಳಿ, ಎಸ್‌ಐಟಿ ಗೇಟ್ ಬಳಿ, 22ನೇ ವಾರ್ಡ್‌ನ ಕೆಲವು ಕಡೆಗಳಲ್ಲಿ ಈಗಾಗಲೇ ಕಾರ್ಯಾಚರಣೆ ನಡೆಸಲಾಗಿದೆ.

‘ನಾಗರಿಕರಿಂದ ಮಂಗಗಳ ಹಾವಳಿಯ ಬಗ್ಗೆ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಆಂಧ್ರಪ್ರದೇಶದ ಮದನಪಲ್ಲಿಯ ಆರು ಜನರ ತಂಡವು ಕಾರ್ಯಾಚರಣೆ ನಡೆಸುತ್ತಿದೆ’ ಎಂದು ‘ಪ್ರಜಾವಾಣಿ’ಗೆ ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗೇ‌ಶ್ ಕುಮಾರ್ ತಿಳಿಸಿದರು.

‘ಕೆಲವು ಸಮಯ ಮಂಗಗಳು ಸೆರೆ ಸಿಕ್ಕುವುದಿಲ್ಲ. ಹಿಡಿಯುತ್ತಾರೆ ಎನ್ನುವುದು ಗೊತ್ತಾದ ತಕ್ಷಣ ಪರಾರಿ ಆಗುತ್ತವೆ’ ಎಂದರು.

ಹಿಡಿದ ಮಂಗಗಳನ್ನು ಹಿರಿಯೂರು ತಾಲ್ಲೂಕಿನ ಅರಣ್ಯ ಪ್ರದೇಶ, ಸಾವನದುರ್ಗ ಹೀಗೆ ಬೇರೆ ಬೇರೆ ಕಡೆ ಅವುಗಳಿಗೆ ನೀರು ದೊರೆಯುವ ಪ್ರದೇಶಕ್ಕೆ ಬಿಡಲಾಗುತ್ತಿದೆ.

Post Comments (+)