ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಗಾ ಸಾಧನೆ ಕುಂಠಿತ: ಮೊದಲ ನಾಲ್ಕನೇ ಶನಿವಾರ ರಜೆ ಬಲಿ

ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕೆಲ ಅಧಿಕಾರಿ,ಸಿಬ್ಬಂದಿಗೆ ರಜೆ ರದ್ದುಪಡಿಸಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಆದೇಶ
Last Updated 21 ಜೂನ್ 2019, 14:53 IST
ಅಕ್ಷರ ಗಾತ್ರ

ತುಮಕೂರು: ರಾಜ್ಯ ಸರ್ಕಾರವು ಸರ್ಕಾರಿ ರಜೆಗಳ ಪರಿಷ್ಕರಣೆ ಮಾಡಿ ತಿಂಗಳ ನಾಲ್ಕನೇ ಶನಿವಾರ ಸಾರ್ವತ್ರಿಕ ರಜೆ ಘೋಷಣೆ ಮಾಡಿ ಜೂನ್ 12ರಂದು ಆದೇಶ ಹೊರಡಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಆದೇಶಿಸಿದೆ.

ಆದರೆ, ತುಮಕೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕೆಲ ಅಧಿಕಾರಿಗಳು, ಸಿಬ್ಬಂದಿ ಈ ನಾಲ್ಕನೇ ಶನಿವಾರದ ಮೊದಲ ರಜೆಯಿಂದಲೇ ವಂಚಿತರಾಗಿ ಕೈ ಹಿಚುಕಿಕೊಳ್ಳುತ್ತಿದ್ದಾರೆ. ಸರ್ಕಾರವೇ ಆದೇಶ ಮಾಡಿದರೂ ಈ ಯೋಜನೆಗಳ ಅನುಷ್ಠಾನದ ಹೆಸರಿನಲ್ಲಿ ಹಿರಿಯ ಅಧಿಕಾರಿಗಳು ನಾಲ್ಕನೇ ಶನಿವಾರದ ರಜೆಗೆ ಕೊಕ್ಕೆ ಹಾಕಿದ್ದಾರೆ ಎಂದು ಹಲುಬುತ್ತಿದ್ದಾರೆ.

ಶುಕ್ರವಾರ ಸಂಜೆಯಾಗುತ್ತಿದ್ದಂತೆಯೇ ಬಹುತೇಕ ಸರ್ಕಾರಿ ನೌಕರರೆಲ್ಲ ನಾಲ್ಕನೇ ಶನಿವಾರದ ರಜೆ, ಭಾನುವಾರದ ರಜೆ ಮೂಡ್‌ಗೆ ಶಿಫ್ಟ್‌ ಆದರೆ, ಜಿಲ್ಲಾ ಪಂಚಾಯಿತಿ ಅಧಿಕಾರಿ, ಸಿಬ್ಬಂದಿ ಶನಿವಾರ, ಭಾನುವಾರವೂ ಕೆಲಸ ಮಾಡಬೇಕಲ್ಲ ಎಂದು ಗೊಣಗಿದರು. ರಜೆ ಕಳೆದು ಹೋಯಿತಲ್ಲ ಎಂಬ ಬೇಸರದಿಂದಲೊ, ನೋವಿನಿಂದಲೊ ಪರಸ್ಪರ ಬೇಸರ ಮಾತುಗಳನ್ನು ಹಂಚಿಕೊಂಡರು.

ಅಧಿಕಾರಿಗಳು ಮತ್ತು ಸಿಬ್ಬಂದಿಯ ಈ ಬೇಸರಕ್ಕೆ ಕಾರಣ ಮಹಾತ್ಮ ಗಾಂಧಿ ನರೇಗಾ ಯೋಜನೆ ಪ್ರಗತಿ ಕುಂಠಿತವಾಗಿರುವುದು!

ಹೌದು ಯೋಜನೆ ಅನುಷ್ಠಾನದಲ್ಲಿ ಕುಂಠಿತವಾಗಿದ್ದಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ಅವರು, ಜೂನ್ 22 ( ನಾಲ್ಕನೇ ಶನಿವಾರ) ಹಾಗೂ ಜೂನ್ 23 ಭಾನುವಾರ ಕಚೇರಿ ಕೆಲಸ ಮಾಡಲು ಜೂನ್ 20ರಂದು ಆದೇಶಿಸಿದ್ದಾರೆ.

ಶೇ 70ಕ್ಕಿಂತ ಕಡಿಮೆ ಮಾನವ ದಿನಗಳ ಸೃಜನೆಯಾಗಿರುವ ಗ್ರಾಮ ಪಂಚಾಯಿತಿಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ, ತಾಂತ್ರಿಕ ಸಹಾಯಕರು, ಡಾಟಾ ಎಂಟ್ರಿ ಆಪರೇಟರ್ ಮತ್ತು ಸಿಬ್ಬಂದಿ, ಅನುಷ್ಠಾನ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಕಡ್ಡಾಯವಾಗಿ ಶನಿವಾರ ಮತ್ತು ಭಾನುವಾರ ಕೆಲಸ ಮಾಡಲು ಆದೇಶಿಸಿದ್ದಾರೆ.

ಉದ್ಯೋಗ ಖಾತರಿ ಯೋಇಜೆಯಡಿ ಕೂಲಿ ಮತ್ತು ಸಾಮಗ್ರಿ ಮೊತ್ತವನ್ನು ಪಾವತಿಸಿರುವ ಪ್ರಗತಿಯಲ್ಲಿರುವ ಕಾಮಗಾರಿ ಮುಕ್ತಾಯಗೊಳಿಸುವುದು, ವಸತಿ ಯೋಜನೆಯಡಿ ನಿರ್ಮಿಸುತ್ತಿರುವ ಮನೆಗಳಿಗೆ ನರೇಗಾ ಯೋಜನೆಯಡಿ ಎನ್‌.ಎಂ.ಎಸ್. ಸೃಷ್ಟಿಸುವುದು, ‍ಪ್ರತಿ ತಾಲ್ಲೂಕಿನಿಂದ ಈ ಎರಡು ದಿನಗಳಿಂದ 3000 ಮಾನವ ದಿನಗಳನ್ನು ಸೃಷ್ಟಿಸುವುದು, 2019–20ನೇ ಸಾಲಿನಲ್ಲಿ ಅನುಮೋದನೆಯಾಗಿರುವ ಕ್ರಿಯಾ ಯೋಜನೆಯ ಎಲ್ಲ ಕಾಮಗಾರಿಗೆ ಕಾಮಗಾರಿಗಳ ಸಂಕೇತ ಮತ್ತು ಅಂದಾಜು ಪಟ್ಟಿಗಳನ್ನು ತಯಾರಿಸಬೇಕು ಎಂದು ಆದೇಶದಲ್ಲಿ ಸಿಇಓ ತಿಳಿಸಿದ್ದಾರೆ.

ಆದೇಶದ ಪ್ರಕಾರ ಕಡ್ಡಾಯವಾಗಿ ಕರ್ತವ್ಯ ನಿರ್ವಹಿಸಬೇಕು. ಅಧಿಕಾರಿ ಮತ್ತು ನೌಕರರ ಪಂಚತಂತ್ರ ಹಾಜರಾತಿಯನ್ನು ಪರಿಶೀಲಿಸಲಾಗುವುದು. ಒಂದು ವೇಳೆ ಸೂಚಿಸಿದ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ, ಗೈರುಹಾಜರಿ, ಕರ್ತವ್ಯ ಲೋಪ ಹಾಗೂ ಬೇಜವಾಬ್ದಾರಿತನ ತೋರಿದ್ದು ಕಂಡು ಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಏಕಪಕ್ಷೀಯವಾಗಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಆದೇಶದಲ್ಲಿ ಎಚ್ಚರಿಕೆ ನೀಡಿದ್ದಾರೆ.

ಅಲ್ಲದೇ, ನೋಡಲ್ ಅಧಿಕಾರಿಗಳಾದ ಉಪಕಾರ್ಯದರ್ಶಿ ಡಾ.ಎಸ್. ಪ್ರೇಮ್‌ಕುಮಾರ್ (ಗುಬ್ಬಿ ತಾಲ್ಲೂಕು) ಬಿ.ಕೃಷ್ಣಪ್ಪ ( ಪಾವಗಡ ಮತ್ತು ಮಧುಗಿರಿ), ಯೋಜನಾ ನಿರ್ದೇಶಕ ವೈ.ಮಹಾಂಕಾಳಪ್ಪ( ಗುಬ್ಬಿ ಮತ್ತು ಶಿರಾ),ಮುಖ್ಯ ಯೋಜನಾಧಿಕಾರಿ ಗಾಯತ್ರಿ (ತುಮಕೂರು, ಕೊರಟಗೆರೆ), ಮುಖ್ಯಲೆಕ್ಕಾಧಿಕಾರಿ ಕನಕರಾಜು (ಕುಣಿಗಲ್, ತುರುವೇಕೆರೆ) ಅವರಿಗೆ ನಿರ್ದಿಷ್ಟ ತಾಲ್ಲೂಕುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲು ಆದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT