ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇತಾರನಿಲ್ಲದ ಜೆಡಿಎಸ್: ಕುಗ್ಗಿದ ಸಂಘಟನೆ

ಪ್ರಭಾರಿ, ಉಸ್ತುವಾರಿಯಲ್ಲಿ ಮುನ್ನಡೆ; ವಿಭಜನೆಗೆ ಬೇಡಿಕೆ
Last Updated 26 ಏಪ್ರಿಲ್ 2022, 4:58 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಲ್ಲಿ ಜೆಡಿಎಸ್ ಮುನ್ನಡೆಸುವ ‘ಸಮರ್ಥ’ ನಾಯಕನಿಲ್ಲದೆ, ಪಕ್ಷ ಸಂಘಟಿಸಲು ವರಿಷ್ಠರು ಮುಂದಡಿ ಇಟ್ಟಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಸ್ವತಂತ್ರವಾಗಿ ಅಧಿಕಾರಕ್ಕೆ ಬರುವುದಾಗಿ ಹೇಳುತ್ತಲೇ ಇದ್ದಾರೆ. ಆದರೆ, ಪಕ್ಷ ಬಲಪಡಿಸದೆ ಯಾವ ಲೆಕ್ಕಾಚಾರದ ಮೇಲೆ ಅಧಿಕಾರಕ್ಕೆ ಬರಲಿದ್ದಾರೆ ಎಂಬುದು ಕಾರ್ಯಕರ್ತರಿಗೆ ಯಕ್ಷಪ್ರಶ್ನೆಯಾಗಿದೆ.

ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲೇ ಜೆಡಿಎಸ್ ಘಟಕಗಳಿಗೆ ಪದಾಧಿಕಾರಿಗಳನ್ನು ನೇಮಕ ಮಾಡಿಲ್ಲ. ಹೊಸದಾಗಿ ನೇಮಕ ಮಾಡದಿದ್ದರೂ ಬಲಪಡಿಸುವ ಅಥವಾ ಪುನರ್ ರಚಿಸುವ ಕೆಲಸವೂ ಆಗಿಲ್ಲ. ಜಿಲ್ಲಾ ಮಟ್ಟದಲ್ಲೇ ಈ ಸ್ಥಿತಿಯಾದರೆ, ಇನ್ನೂ ಗ್ರಾಮೀಣ ಪ್ರದೇಶದಲ್ಲಿ ಏನಾಗಿರಬಹುದು ಎಂದು ಕಾರ್ಯಕರ್ತರು ಸಿಕ್ಕಲೆಲ್ಲ ತಮ್ಮ ನಾಯಕರನ್ನು ಪ್ರಶ್ನಿಸುತ್ತಿದ್ದಾರೆ. ‘ಕಾರ್ಯಕರ್ತರ ಕೂಗು ವರಿಷ್ಠರ ಕಿವಿ ಮೇಲೆ ಬೀಳುತ್ತಿಲ್ಲ. ನಾವು ಇನ್ನೇನು ಮಾಡುವುದು’ ಎಂದು ಹಲವು ನಾಯಕರು, ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸಿ. ಅಂಜನಪ್ಪ ಅವರನ್ನೇ ಪ್ರಭಾರ ಸ್ಥಾನದಲ್ಲಿ ಮುಂದುವರಿಸಲಾಗಿದೆ. ನಗರ ಘಟಕದ ಅಧ್ಯಕ್ಷ ಬೆಳ್ಳಿ ಲೋಕೇಶ್ ಸ್ಥಾನ ತೊರೆದು ಸಾಕಷ್ಟು ತಿಂಗಳುಗಳೇ ಕಳೆದಿದ್ದು, ಆ ಸ್ಥಾನಕ್ಕೂ ನೇಮಕವಾಗಿಲ್ಲ. ಒಂದು ರೀತಿಯಲ್ಲಿ ಅವರೂಪ್ರಭಾರವಾಗಿ ಮುಂದುವರಿದಿದ್ದಾರೆ. ನಗರದಲ್ಲಿ ವಾರ್ಡ್ ಘಟಕಗಳು ಅಸ್ತಿತ್ವದಲ್ಲೇ ಇಲ್ಲದಂತೆ ಇವೆ. ಜಿಲ್ಲಾ ಘಟಕದ ಕಾರ್ಯಾಧ್ಯಕ್ಷರನ್ನಾಗಿ ಹಾಲನೂರು ಅನಂತ ಅವರನ್ನು ನೇಮಕ ಮಾಡಲಾಯಿತು. ಈಗ ಜಿಲ್ಲಾ ಉಪಾಧ್ಯಕ್ಷರನ್ನಾಗಿ ರಮೇಶ್‌ಗೌಡ ಅವರನ್ನು ನೇಮಿಸಲಾಗಿದೆ. ಅದು ಬಿಟ್ಟರೆ ಸಂಘಟನೆಗೆ ಒತ್ತು ಸಿಕ್ಕಿಲ್ಲ. ಜಿಲ್ಲಾ ಘಟಕದ ಪದಾಧಿಕಾರಿಗಳು ಯಾರು ಎಂಬುದೇ ಹಲವರಿಗೆ ತಿಳಿದಿಲ್ಲ. ಇನ್ನೂ ಬಹುತೇಕ ಕಡೆಗಳಲ್ಲಿ ತಾಲ್ಲೂಕು ಘಟಕಗಳು ಸಕ್ರಿಯವಾಗಿಲ್ಲ.

ಎರಡು ಅಧ್ಯಕ್ಷರಿಗೆ ಬೇಡಿಕೆ: ಅಂಜನಪ್ಪ ಹಲವು ಕಾರಣಗಳಿಂದ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಅವರನ್ನು ಬದಲಿಸುವ ಅಥವಾ ಅವರಿಗೆ ಮತ್ತಷ್ಟು ‘ಶಕ್ತಿ’ ತುಂಬಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಮಾಡಿಲ್ಲ. ದೊಡ್ಡ ಜಿಲ್ಲೆಯನ್ನು ಒಬ್ಬರೇ ಅಧ್ಯಕ್ಷರು ನಿರ್ವಹಣೆ ಮಾಡುವುದು ಕಷ್ಟಕರವಾದರೆ ಬಿಜೆಪಿಯವರು ವಿಭಜಿಸಿದಂತೆ ಎರಡು ಭಾಗ (ಜಿಲ್ಲೆ) ಮಾಡಿ ಇಬ್ಬರು ಅಧ್ಯಕ್ಷರನ್ನು ನೇಮಕ ಮಾಡಬೇಕು ಎಂಬ ಒತ್ತಡ ಕಾರ್ಯಕರ್ತರಿಂದ ಹೆಚ್ಚಾಗುತ್ತಿದೆ. ತುಮಕೂರು ಹಾಗೂ ಮಧುಗಿರಿ ಎರಡು ಜಿಲ್ಲೆ ಮಾಡಿ, ಇಬ್ಬರು ಅಧ್ಯಕ್ಷರನ್ನು ನೇಮಿಸಿದರೆ ಸಂಘಟನೆಗೆ ನೆರವಾಗಲಿದೆ ಎಂದು ಮುಖಂಡರೊಬ್ಬರು ಹೇಳುತ್ತಾರೆ.

‘ಜನತಾ ಜಲಧಾರೆ’ ಜಿಲ್ಲೆಯಲ್ಲಿ ಆರಂಭವಾಗಿದ್ದರೂ ಅದು ಜಿಲ್ಲೆಯಲ್ಲಿ ಎಲ್ಲಿ ಸಂಚರಿಸುತ್ತದೆ, ಏನು ಮಾಡುತ್ತದೆ ಎಂಬ ಕನಿಷ್ಠ ಮಾಹಿತಿಯೂ ಕಾರ್ಯಕರ್ತರಿಗೆ ಇಲ್ಲವಾಗಿದೆ. ಒಬ್ಬೊಬ್ಬರು ಒಂದು ರೀತಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡುತ್ತಿದ್ದಾರೆ. ಈ ಬಗ್ಗೆ ಅಧ್ಯಕ್ಷರು ಮಾಧ್ಯಮಗಳಿಗೆ ಕನಿಷ್ಠ ಮಾಹಿತಿ ನೀಡುವ ಕೆಲಸವನ್ನೂ ಮಾಡಿಲ್ಲ. ಇಂತಹ ಒಂದು ಅಭಿಯಾನವನ್ನು ಪಕ್ಷದಬಲವರ್ಧನೆಗೆ ಬಳಸಿಕೊಳ್ಳುವ ಅವಕಾಶಗಳು ಜಿಲ್ಲೆಯ ನಾಯಕರಿಗೆ ಇದ್ದವು. ಜನರ ಮನಸ್ಸನ್ನು ಕೇಂದ್ರೀಕರಿಸುವ ಅವಕಾಶವನ್ನುಕೈ ಚೆಲ್ಲಿದ್ದಾರೆ ಎಂಬ ಆಕ್ಷೇಪಗಳು ಪಕ್ಷದ ಆಂತರಿಕ ವಲಯದಿಂದಲೇ ಕೇಳಿಬರುತ್ತಿವೆ.

‘ಪಕ್ಷಕ್ಕೆ ಕಾರ್ಯಕರ್ತರು, ಮತದಾರರು ಇದ್ದಾರೆ. ಅವರನ್ನು ಹಿಡಿದಿಟ್ಟುಕೊಳ್ಳುವ, ಮತದಾರರ ಮನಸ್ಸು ಗೆಲ್ಲುವ ಪ್ರಯತ್ನವನ್ನು ಯಾರೂ ಮಾಡುತ್ತಿಲ್ಲ. ಈ ರೀತಿಯಾದರೆ ಪಕ್ಷ ಸಂಘಟನೆ ಹೇಗೆ ಮಾಡುವುದು’ ಎಂದು ಹಿರಿಯ ಮುಖಂಡರೊಬ್ಬರು ಪ್ರಶ್ನಿಸುತ್ತಾರೆ.

ಸೋಲಿನ ಸರಮಾಲೆ: ಕಳೆದ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಪರಾಭವಗೊಂಡ ನಂತರ ಸಾಲು ಸಾಲು ಸೋಲುಗಳನ್ನೇ ಪಕ್ಷ ಕಂಡಿದೆ. ಶಿರಾ ವಿಧಾನಸಭೆ ಉಪ ಚುನಾವಣೆಯಿಂದ ಹಿಡಿದು, ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆವರೆಗೂ ಸೋಲನ್ನೇ ತಲೆ ಮೇಲೆ ಹೊತ್ತು ಸಾಗುತ್ತಿದೆ. ಜತೆಗೆ ಪಕ್ಷ ತೊರೆಯುವವರ ಸಂಖ್ಯೆಯೂ ಹೆಚ್ಚುತ್ತಲೇ ಇದ್ದು, ವಿಧಾನ ಪರಿಷತ್ ಸದಸ್ಯರಾಗಿದ್ದ ಬೆಮಲ್ ಕಾಂತರಾಜು ಈಗಾಗಲೇ ಕೈ ಹಿಡಿದಿದ್ದಾರೆ. ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಪಕ್ಷದಿಂದ ಹೊರಗೆ ಹೋಗಿದ್ದಾರೆ. ಇನ್ನಷ್ಟು ಮಂದಿ ಹೊರ ಹೋಗಲು ಸಜ್ಜಾಗಿದ್ದಾರೆ. ಜಿಲ್ಲಾ ಮಟ್ಟದ ನಾಯಕ ಎಂದು ಹೇಳಲು ಒಬ್ಬರೂ ಇಲ್ಲವಾಗಿದ್ದಾರೆ.

ಶಿರಾ ಉಪ ಚುನಾವಣೆ ಸೋಲಿನ ನಂತರ ಅಲ್ಲಿ ಪಕ್ಷ ಮುನ್ನಡೆಸುವ ನೇತಾರರೇ ಕಾಣುತ್ತಿಲ್ಲ. ಜಿಲ್ಲಾ ಕೇಂದ್ರದಲ್ಲೂ ಅದೇ ಪರಿಸ್ಥಿತಿ ಇದೆ. ಕೆಲವು ತಾಲ್ಲೂಕುಗಳಲ್ಲಿ ಇಂತಹುದೇ ಸ್ಥಿತಿ ಮೂಡಿದೆ. ಒಂದು ಕಾಲದಲ್ಲಿ ಏಳೆಂಟು ಶಾಸಕರು ಜಿಲ್ಲೆಯಿಂದ ಆಯ್ಕೆಯಾಗುತ್ತಿದ್ದರು. ಈಗಿನ ಪರಿಸ್ಥಿತಿ ನೋಡಿದರೆ ಒಬ್ಬರೂ ಆಯ್ಕೆ ಆಗುವುದು ಕಷ್ಟಕರ ಎಂಬ ವಾತಾವರಣ ಕಂಡುಬರುತ್ತಿದೆ. ಪ್ರಸ್ತುತ ‘ಜನತಾ ಜಲಧಾರೆ’ ಅಭಿಯಾನ ಆರಂಭವಾಗಿದ್ದು, ಆ ಮೂಲಕವಾದರೂ ಪಕ್ಷ ಸಂಘಟಿಸಿ, ಬಲಪಡಿಸಬೇಕು ಎಂದು ಹೆಸರು ಹೇಳಲು ಬಯಸದ ಮುಖಂಡರೊಬ್ಬರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT