ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಫೆಡ್‌ಗೆ ಮಧ್ಯವರ್ತಿಗಳ ಕಾಟ

ತಿಪಟೂರು ತಾಲ್ಲೂಕು ಕೊಬ್ಬರಿ ಬೆಳೆಗಾರರ ಆಕ್ರೋಶ
Last Updated 30 ಮಾರ್ಚ್ 2023, 4:43 IST
ಅಕ್ಷರ ಗಾತ್ರ

ತಿಪಟೂರು: ಕೇಂದ್ರ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ಉಂಡೆ ಕೊಬ್ಬರಿ ಖರೀದಿಗೆ ಪ್ರಾರಂಭಿಸಿರುವ ನಫೆಡ್‌ ಕೇಂದ್ರದಲ್ಲಿ ಮಧ್ಯವರ್ತಿಗಳ ಉಪಟಳ ಹೆಚ್ಚಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ.

ಖರೀದಿ ಕೇಂದ್ರದ ಬಳಿಯಲ್ಲಿ ಕೆಲವು ಮಧ್ಯವರ್ತಿಗಳು ಅಧಿಕಾರಿಗಳಿಗೆ ಆಮಿಷ ನೀಡಿ ನೇರವಾಗಿ ನೋಂದಣಿ ಸ್ಥಳದಲ್ಲಿಯೇ ಕೊಬ್ಬರಿ ಖರೀದಿಗೆ ಮುಂದಾಗಿದ್ದಾರೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಕಳೆದ ಒಂದು ತಿಂಗಳಿನಿಂದ ನೋಂದಣಿ ಪ್ರಾರಂಭಿಸಿ ಖರೀದಿಗೆ ಚಾಲನೆ ನೀಡಲಾಗಿದೆ. ಆದರೆ, ಕೆಲವರು ನೊಂದಣಿ ಮಾಡಿಸದೆ ಕೇಂದ್ರಕ್ಕೆ ಕೊಬ್ಬರಿ ತಂದು ನೀಡುತ್ತಿದ್ದರು. ಕೆಲವು ದಿನಗಳಿಂದ ರೈತರು ಇದನ್ನು ವಿರೋಧಿಸುತ್ತಾ ಬಂದಿದ್ದಾರೆ.

ಬುಧವಾರ ಮಧ್ಯಾಹ್ನ ಮಾಜಿ ಶಾಸಕ ಕೆ. ಷಡಕ್ಷರಿ ಖರೀದಿ ಕೇಂದ್ರಕ್ಕೆ ಖುದ್ದು ಭೇಟಿ ನೀಡಿ ಅವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಬಳಿಕ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ಅಧಿಕಾರಿಗಳಿಗೆ ಕರೆ ಮಾಡಿ ನೋಂದಣಿ ಪ್ರಕಾರ ರೈತರಿಂದ ಕೊಬ್ಬರಿ ಖರೀದಿಸುವಂತೆ ತಾಕೀತು ಮಾಡಿದರು.

ಕೇಂದ್ರ ಸರ್ಕಾರ ಫೆ. 2ರಿಂದ ನಫೆಡ್‍ ಕೇಂದ್ರ ಪ್ರಾರಂಭಿಸಿದೆ. ಆರು ತಿಂಗಳೊಳಗೆ ಸುಮಾರು 54,750 ಮೆಟ್ರಿಕ್ ಟನ್ ಉಂಡೆ ಕೊಬ್ಬರಿ ಖರೀದಿಸಲು ಅನುಮತಿ ನೀಡಲಾಗಿದೆ. ರೈತರಿಂದ ಪ್ರತಿ ಎಕರೆಗೆ 6 ಕ್ವಿಂಟಲ್‌ನಂತೆ ಒಬ್ಬ ರೈತನಿಂದ ಗರಿಷ್ಠ 20 ಕ್ವಿಂಟಲ್ ಕೊಬ್ಬರಿ ಖರೀದಿಸಲಾಗುತ್ತದೆ.

ನೋಂದಣಿ ಮಾಡಿಸಿದಂತಹ ರೈತರಿಗೆ ಇಲ್ಲಿಯವರೆವಿಗೂ ಅಧಿಕಾರಿಗಳು ಮಾಹಿತಿ ನೀಡದೆ ಸಾವಿರಾರು ಕ್ವಿಂಟಲ್ ಕೊಬ್ಬರಿ ಖರೀದಿಸಿದ್ದಾರೆ. ಎಪಿಎಂಸಿ ಆವರಣದಲ್ಲಿಯೇ ಇರುವುದರಿಂದ ಕೆಲವು ರವಾನೆದಾರರ ಬಳಿ ಉಳಿಯುವಂತಹ ಸಣ್ಣ ಸಣ್ಣ ಕೊಬ್ಬರಿ ಉಂಡೆಗಳನ್ನು ರೈತರ ಹೆಸರಿನಲ್ಲಿ ನಫೆಡ್‌ಗೆ ನೀಡುತ್ತಿರುವ ಬಗ್ಗೆ ಸ್ಥಳೀಯ ರೈತರು ಅಸಮಾಧಾನಗೊಂಡಿದ್ದಾರೆ.

ಮಧ್ಯವರ್ತಿಗಳು ಹಣ ನೀಡುತ್ತಿದ್ದು ಅವರ ಕೊಬ್ಬರಿಯನ್ನು ಆರಿಸದೆ ನೇರವಾಗಿ ಖರೀದಿಸುತ್ತಿದ್ದಾರೆ. ರೈತರು ತರುವ ಕೊಬ್ಬರಿಯನ್ನು ಸುರಿಸಿ ಉಂಡೆಗಳನ್ನು ಪರೀಕ್ಷಿಸಿ ಪಡೆದುಕೊಳ್ಳುತ್ತಿದ್ದಾರೆ. ಹಣ ನೀಡಿದರೆ ಮಾತ್ರವೇ ನೇರವಾಗಿ ತೆಗೆದುಕೊಳ್ಳುವ ವಿಧಾನ ಇದೆ ಎಂದು ದೂರಿದ್ದಾರೆ.

ನಫೆಡ್‍ನಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಹಮಾಲಿಗಳಿಗೆ ಪ್ರತಿ ಚೀಲ ಕೊಬ್ಬರಿಯನ್ನು ಗಾಡಿಯಿಂದ ಕೇಂದ್ರದೊಳಗೆ ತೆಗೆದುಕೊಂಡು ಹೋಗಲು ಇಂತಿಷ್ಟು ಹಣ ನೀಡಬೇಕು. ಜೊತೆಗೆ ಕೊಬ್ಬರಿ ಆರಿಸದೆ ನೇರವಾಗಿ ಖರೀದಿಸಲು ₹ 500 ನೀಡಬೇಕೆಂದು ರೈತರೇ ಆರೋಪ ಮಾಡುತ್ತಿದ್ದಾರೆ.

ಹಮಾಲಿಗಳು, ಅಧಿಕಾರಿಗಳು ರೈತರೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದಾರೆ. ರೈತರಿಗೆ ಪ್ರತಿದಿನ ಅನ್ಯಾಯವಾಗುತ್ತಿದೆ. ಇದನ್ನು ಸರಿಪಡಿಸಲು ಕ್ರಮವಹಿಸಬೇಕು ಎಂದು ಆಗ್ರಹಿಸಿದ್ದಾರೆ.

ಹೆಚ್ಚುವರಿ ಕೌಂಟರ್: ಖರೀದಿ ಕೇಂದ್ರಗಳಲ್ಲಿ ಖರೀದಿ ವೇಳೆಯಲ್ಲಿ ವಿಳಂಬವಾಗುತ್ತಿದ್ದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರು ತಿಪಟೂರು 3, ಚಿ.ನಾ. ಹಳ್ಳಿ 2, ತುರುವೇಕೆರೆಯಲ್ಲಿ 2 ಹೆಚ್ಚುವರಿ ಕೌಂಟರ್‌ ತೆರೆಯಲು
ಆದೇಶಿಸಿದ್ದಾರೆ.

‘ಫೆ. 2ಕ್ಕೂ ಮೊದಲೇ ಹೆಸರು ನೋಂದಣಿ ಮಾಡಿಸಿದರೂ ಕೊಬ್ಬರಿ ಖರೀದಿಗೆ ದೂರವಾಣಿ ಕರೆ ಮಾಡುವುದಾಗಿ ತಿಳಿಸಿದ್ದರು. ಖರೀದಿ ಪ್ರಾರಂಭವಾಗಿ ಹಲವು ದಿನಗಳಾದರೂ ಕರೆ ಮಾಡಿಲ್ಲ. ಕೇವಲ ಮಧ್ಯವರ್ತಿಗಳ ಕೊಬ್ಬರಿ ಖರೀದಿಸುತ್ತಿದ್ದಾರೆ’ ಎಂದು ದೊಡ್ಡಮಾರ್ಪನಹಳ್ಳಿಯ ರೈತ ಚಂದ್ರಯ್ಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT