ಸೋಮವಾರ, ಮೇ 17, 2021
23 °C

ಸಿದ್ಧಗಂಗಾ ಮಠ ಸೇರಿ 454 ಸಂಸ್ಥೆಗಳಿಗೆ ಖೋತಾ: ಅನ್ನದಾಸೋಹ ಅಕ್ಕಿ ಪೂರೈಕೆ ಸ್ಥಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅನ್ನ ದಾಸೋಹ ಯೋಜನೆಯಲ್ಲಿ (ಕಲ್ಯಾಣ ಸಂಸ್ಥೆ ಯೋಜನೆ) ಸಂಘ, ಸಂಸ್ಥೆಗಳಿಗೆ ಉಚಿತವಾಗಿ ನೀಡುತ್ತಿದ್ದ ಅಕ್ಕಿ, ಗೋಧಿಯನ್ನು ರಾಜ್ಯ ಸರ್ಕಾರ ಸ್ಥಗಿತಗೊಳಿಸಿದ್ದು, ತುಮಕೂರು ಸಿದ್ಧಗಂಗಾ ಮಠಕ್ಕೂ ಅಕ್ಕಿ ವಿತರಣೆ ನಿಲ್ಲಿಸಲಾಗಿದೆ.

ನಾರಿನಿಕೇತನ, ಅಂಗವಿಕಲ, ಬುದ್ಧಿಮಾಂದ್ಯ, ವೃದ್ಧಾಶ್ರಮಗಳು ಸೇರಿದಂತೆ ವಸತಿ, ಶಿಕ್ಷಣ ನೀಡುತ್ತಿರುವ ಸಂಸ್ಥೆಗಳಿಗೆ ಆಹಾರ ಧಾನ್ಯ ನೀಡಲಾಗುತ್ತಿತ್ತು. ಸಂಸ್ಥೆಯ ಪ್ರತಿಯೊಬ್ಬರಿಗೆ ತಲಾ 10 ಕೆ.ಜಿ ಅಕ್ಕಿ, 5 ಕೆ.ಜಿ ಗೋಧಿಯನ್ನು ಪ್ರತಿ ತಿಂಗಳು ಕೊಡಲಾಗುತ್ತಿತ್ತು. ಆದರೆ ಈಗ ಬಿಜೆಪಿ ಸರ್ಕಾರ ಕಳೆದ ಮೂರು ತಿಂಗಳಿಂದ ವಿತರಣೆ ಸ್ಥಗಿತಗೊಳಿಸಿದೆ ಎಂದು ಶಾಸಕ ಯು.ಟಿ.ಖಾದರ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯದ 454 ಸಂಸ್ಥೆಗಳ 6ರಿಂದ 7 ಸಾವಿರ ಮಂದಿಗೆ ಅನುಕೂಲವಾಗಿತ್ತು. ಸಿದ್ಧಗಂಗಾ ಮಠದ 7,359 ವಿದ್ಯಾರ್ಥಿಗಳಿಗೆ ಈ ಯೋಜನೆ ಸಹಕಾರಿಯಾಗಿತ್ತು. ಜನಸಾಮಾನ್ಯರ ಕಾರ್ಯಕ್ರಮಗಳನ್ನು ಬಿಜೆಪಿ ಸರ್ಕಾರ ಸ್ಥಗಿತಗೊಳಿಸುವ ಮೂಲಕ ಬಡವರ ಹೊಟ್ಟೆ ಮೇಲೆ ಬರೆ ಎಳೆದಿದೆ ಎಂದು ಖಾದರ್, ಮುಖಂಡ ವಿ.ಎಸ್.ಉಗ್ರಪ್ಪ ಆರೋಪಿಸಿದರು.

ಒಂದು ವೇಳೆ ಕೇಂದ್ರ ಸರ್ಕಾರ ಈ ಯೋಜನೆಗೆ ನೆರವು ನೀಡದಿದ್ದರೆ ರಾಜ್ಯ ಸರ್ಕಾರವೇ ಹಣ ಒದಗಿಸುವ ಮೂಲಕ ಬಡವರಿಗೆ ಅನ್ನ ನೀಡುವ ಕೆಲಸವನ್ನು ಮುಂದುವರಿಸಬೇಕು. ಬಿಪಿಎಲ್ ಕಾರ್ಡ್‌ ಹೊಂದಿರುವ ಕುಟುಂಬದ ಪ್ರತಿ ವ್ಯಕ್ತಿಗೆ ನೀಡುತ್ತಿರುವ ಅಕ್ಕಿಯನ್ನು 7 ಕೆ.ಜಿ.ಯಿಂದ 5 ಕೆ.ಜಿ.ಗೆ ಇಳಿಸುವ ಪ್ರಯತ್ನವನ್ನು ಕೈಬಿಡಬೇಕು ಎಂದು ಅವರು ಆಗ್ರಹಿಸಿದರು.

ದೊಡ್ಡವರು, ಶ್ರೀಮಂತರ ಯೋಜನೆಗಳಿಗೆ ಕಡಿವಾಣ ಹಾಕದೆ ಅನುದಾನ ಮುಂದುವರಿಸಲಾಗಿದೆ. ಆದರೆ ಬಡವರ ಕಾರ್ಯಕ್ರಮಗಳಿಗೆ ಹಣ ನೀಡಲು ಬಿಜೆಪಿ ಸರ್ಕಾರ ಹಿಂಜರಿಯುತ್ತಿದೆ. ಈ ಸರ್ಕಾರದಲ್ಲಿ ಮಾನವೀಯತೆ ಮರೆಯಾಗಿದ್ದು, ರಾಜಕಾರಣ ಬಿಟ್ಟು ಸಾಮಾನ್ಯರ ಬಗ್ಗೆ ಕಾಳಜಿ ವಹಿಸಬೇಕು ಎಂದು ಒತ್ತಾಯಿಸಿದರು.

ಬೀದರ್‌ನಲ್ಲಿ ಮಕ್ಕಳ ವಿರುದ್ಧ ಕ್ರಮ: ಖಂಡನೆ

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಾಟಕ ಪ್ರದರ್ಶಿಸಿದ ಬೀದರ್‌ನ ಶಾಹೀನ್ ಶಿಕ್ಷಣ ಸಂಸ್ಥೆ ಮಕ್ಕಳ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡು, ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಮಕ್ಕಳ ವಿರುದ್ಧ ಕ್ರಮ ಕೈಗೊಂಡಿರುವುದು ಅಮಾನವೀಯ ಎಂದು ಖಾದರ್ ಆರೋಪಿಸಿದರು.

ಮಕ್ಕಳ ಮೇಲೆ ದೂರು ದಾಖಲಿಸಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಪ್ರಕರಣ ಸಂಬಂಧ ಐಎಎಸ್ ಅಧಿಕಾರಿಯಿಂದ ಸ್ವತಂತ್ರ ತನಿಖೆ ನಡೆಸಿ, ವರದಿ ಪಡೆದುಕೊಂಡ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.