ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಲ್ಮೀಕಿ ಜಯಂತಿ ಆಚರಣೆಗೆ ನಿರ್ಲಕ್ಷ್ಯ: ಜಿಲ್ಲಾ ಆಡಳಿತದ ವಿರುದ್ಧ ಆಕ್ರೋಶ

ಸಮುದಾಯದ ಮುಖಂಡರ ಆರೋಪ
Last Updated 1 ನವೆಂಬರ್ 2020, 1:50 IST
ಅಕ್ಷರ ಗಾತ್ರ

ತುಮಕೂರು: ಕೋವಿಡ್ ನೆಪವನ್ನು ಮುಂದಿಟ್ಟುಕೊಂಡು ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲು ಅವಕಾಶ ನೀಡಲಿಲ್ಲ ಎಂದು ಸಮುದಾಯದ ಮುಖಂಡರು ಜಿಲ್ಲಾ ಆಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ವಾಲ್ಮೀಕಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮುಖಂಡರು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು. ಇದಕ್ಕೆ ಕಾರಣರಾದವರು ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಸದಸ್ಯೆ ಶಾಂತಲಾ ರಾಜಣ್ಣ, ‘ಸಾರ್ವಜನಿಕವಾಗಿ ಜಯಂತಿ ಆಚರಣೆಗೆ ಅವಕಾಶ ನೀಡಲಿಲ್ಲ. ಶಿರಾ ಉಪಚುನಾವಣೆಯಲ್ಲಿ ಕೋವಿಡ್ ತಡೆ ನಿಯಮಗಳನ್ನು ಉಲ್ಲಂಘಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ನಿಯಮದ ವ್ಯಾಪ್ತಿಯಲ್ಲೇ ಜಯಂತಿ ಆಚರಣೆ ಮಾಡುವುದಾಗಿ ಹೇಳಿದರೂ ಅವಕಾಶ ಕೊಡಲಿಲ್ಲ. ರಾಮಾಯಣದಂತಹ ಮಹಾನ್ ಕೃತಿ ನೀಡುವ ಮೂಲಕ ಸಮಾಜಕ್ಕೆ ದೊಡ್ಡ ಕೊಡುಗಡೆ ಕೊಟ್ಟ ಮಹರ್ಷಿ ವಾಲ್ಮೀಕಿ ಅವರಿಗೆ ಅಪಮಾನ ಮಾಡುವ ರೀತಿಯಲ್ಲಿ ನಡೆದುಕೊಳ್ಳಲಾಗಿದೆ’ ಎಂದು ಟೀಕಿಸಿದರು.

ಹಿಂದಿನಂತೆ ಡಾ.ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಆಚರಿಸಲು ಸಂಘ ಸಂಸ್ಥೆಗಳ ಮುಖಂಡರ ಸಭೆ ಕರೆದು ನಿರ್ಧರಿಸಲಾಗಿತ್ತು. ಅದಕ್ಕೂ ಅವಕಾಶ ನೀಡದೆ, ಜಿಲ್ಲಾ ಆಡಳಿವೂ ಅರ್ಥಪೂರ್ಣವಾಗಿ ಆಚರಣೆ ಮಾಡದೆ ನಿರ್ಲಕ್ಷ್ಯ ತೋರಿದೆ ಎಂದರು.

ಮೀಸಲಾತಿಗೆ ಹೋರಾಟ: ನಾಯಕ ಸಮುದಾಯಕ್ಕೆ ಶೇ 7.5ರಷ್ಟು ಮೀಸಲಾತಿ ಸಿಗಬೇಕು. ಅದಕ್ಕಾಗಿ ನಡೆಯುವ ಹೋರಾಟದಲ್ಲಿ ಸಂಘಟಿತರಾಗಿ ಭಾಗಿಯಾಗಬೇಕು. ನಮ್ಮ ಹಕ್ಕಿಗಾಗಿ ಹೋರಾಟ ನಡೆದಿದೆ. ಮೀಸಲಾತಿ ಹೆಚ್ಚಳ ಸಂಬಂಧ ನೇಮಕಗೊಂಡಿದ್ದ ಆಯೋಗ ವರದಿ ನೀಡಿ ಮೂರು ತಿಂಗಳು ಕಳೆದಿದ್ದರೂ ಅದನ್ನು ತೆಗೆದುನೋಡಲು ಬಿಜೆಪಿ ಸರ್ಕಾರ ಮುಂದಾಗಿಲ್ಲ ಎಂದು ಅವರು ಆರೋಪಿಸಿದರು.

ವಾಲ್ಮೀಕಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಜಿ.ಕೃಷ್ಣಪ್ಪ, ವಾಲ್ಮೀಕಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪುರುಷೋತ್ತಮ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಲಕ್ಷ್ಮಿನಾರಾಯಣ, ಮುಖಂಡರಾದ ರಾಜೇಂದ್ರ ನಾಯಕ್, ವಿಜಯಕುಮಾರ್, ಧನಲಕ್ಷ್ಮಿ ರವೀಶ್, ಡಾ.ನಾಗರಾಜ್, ಪ್ರತಾಪ್ ಮದಕರಿ, ಕೆಂಪಹನುಮಯ್ಯ,ಚೆನ್ನವೀರಯ್ಯ, ದಯಾನಂದ್, ಉಪಸ್ಥಿತರಿದ್ದರು.

ಜಿಲ್ಲಾ ಆಡಳಿತ: ಜಿಲ್ಲಾ ಆಡಳಿತ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಸರಳವಾಗಿ ಜಯಂತಿ ಆಚರಿಸಲಾಯಿತು.

ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಜಗದೀಶ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗೇಂದ್ರಪ್ಪ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಪ್ರೇಮಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT