ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಡಿಕೆದಾರರ ಸಮಾವೇಶಕ್ಕೆ ವಿರೋಧ

ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ
Last Updated 3 ನವೆಂಬರ್ 2022, 6:06 IST
ಅಕ್ಷರ ಗಾತ್ರ

ತುಮಕೂರು: ಬೆಂಗಳೂರಿನಲ್ಲಿ ನಡೆಯುತ್ತಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ವಿರೋಧಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ರೈತರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಹೂಡಿಕೆದಾರರ ಸಮಾವೇಶ ರದ್ದುಪಡಿಸಬೇಕು; ರೈತರ ಬಗರ್‌ಹುಕುಂ, ಅರಣ್ಯ ಭೂಮಿ ಸಾಗುವಳಿ ಸಕ್ರಮಗೊಳಿಸಬೇಕು; ಬಗರ್‌ಹುಕುಂ ಭೂಮಿಯನ್ನು ಮಠ, ಟ್ರಸ್ಟ್, ರಿಯಲ್ ಎಸ್ಟೇಟ್ ಕುಳಗಳ ಕಬಳಿಕೆಯಿಂದ ರಕ್ಷಿಸಬೇಕು; ಕಬಳಿಸಿರುವ ಭೂಮಿಯನ್ನು ವಾಪಸು ಪಡೆದು ರೈತರಿಗೆ ನೀಡಬೇಕು; ಬಲವಂತದ ಭೂಸ್ವಾಧೀನ ನಿಲ್ಲಿಸಬೇಕು; ಅತಿವೃಷ್ಟಿಯಿಂದ ಕುಸಿದಿರುವ ಹೇಮಾವತಿ ನಾಲೆಯನ್ನು ತಕ್ಷಣ ದುರಸ್ತಿ ಮಾಡಿಸುವಂತೆ ಪ್ರತಿಭಟನಕಾರರು ಆಗ್ರಹಿಸಿದರು.

ಸಂಯುಕ್ತ ಹೋರಾಟ– ಕರ್ನಾಟಕ ಜಿಲ್ಲಾ ಸಂಚಾಲಕ ಸಿ.ಯತಿರಾಜು, ‘ರೈತರೇ ಹೂಡಿಕೆದಾರರಾಗಿದ್ದು, ಸ್ಥಳೀಯವಾಗಿ ಉದ್ಯೋಗ ಕೊಡುತ್ತಿದ್ದಾರೆ. ಆದರೆ ದೊಡ್ಡ ಮಟ್ಟದ ಹಣವಂತರು ಮಾತ್ರ ಜಾಗತಿಕ ಹೂಡಿಕೆದಾರರಾಗಿ ಕಾಣುತ್ತಿದ್ದಾರೆ. ಸಣ್ಣ ಹೂಡಿಕೆದಾರರ ಹಿತಾಸಕ್ತಿ ಕಾಪಾಡದೆ, ದೊಡ್ಡವರ ಪರ ನಿಂತಿದ್ದಾರೆ’ ಎಂದು ಆರೋಪಿಸಿದರು.

ಸಂಘದ ಜಿಲ್ಲಾ ಕಾರ್ಯದರ್ಶಿ ಅಜ್ಜಪ್ಪ, ‘ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡದೆ ಕೇವಲ ಪ್ರಚಾರದ ಸಮಾವೇಶ ನಡೆಸಲಾಗುತ್ತಿದೆ. ಬೆಲೆ ಏರಿಕೆ, ತೆರಿಗೆ ಹೆಚ್ಚಳ, ಬಲವಂತದಭೂ ಸ್ವಾಧೀನದಲ್ಲೇ ತಮ್ಮ ಅಧಿಕಾರವನ್ನು ನಡೆಸಿ ರೈತ ಕಾರ್ಮಿಕರನ್ನು ನಿರ್ಲಕ್ಷಿಸಲಾಗಿದೆ’ ಎಂದು ಟೀಕಿಸಿದರು.

ಜಿಲ್ಲಾ ಉಪಾಧ್ಯಕ್ಷ ಬಿ.ಉಮೇಶ್, ಈವರೆಗೆ ನಡೆದಿರುವ ಜಾಗತಿ ಬಂಡವಾಳ ಹೂಡಿಕೆದಾರರ ಸಮಾವೇಶದ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು. ಡಾಲರ್ ಎದುರು ರೂಪಾಯಿ ಬೆಲೆ ಕುಸಿತ, ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಹಸಿವಿನ ಸ್ಥಾನ ಹೆಚ್ಚಳವಾಗುತ್ತಿದೆ. ಆದರೆ ಇದಕ್ಕೆ ಕ್ರಮ ಕೈಗೊಂಡಿಲ್ಲ ಎಂದು ಆಕ್ಷೇಪಿಸಿದರು.

ಮುಖಂಡ ದೊಡ್ಡನಂಜಯ್ಯ, ಬಸವರಾಜು, ನರಸಿಂಹಮೂರ್ತಿ, ಶಿರಾ ತಾಲ್ಲೂಕು ರಾಚಪ್ಪ, ಆಶ್ವತ್ಥಪ್ಪ, ತುಮಕೂರು ಕರಿಬಸಯ್ಯ, ತುರುವೇಕೆರೆ ಯಾದವಮೂರ್ತಿ, ಸಿ.ಎನ್.ಹಳ್ಳಿ ಚಂದ್ರಪ್ಪ, ಕುಣಿಗಲ್ ಬೋರಣ್ಣ, ಜನಾಂದೋಲನ ಸಂಘಟನೆಯ ಪಂಡಿತ್ ಜವಾಹರ್, ಸಿಐಟಿಯು ಮುಖಂಡ ನಂದೀಶ್ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT