ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಬ್ಬರಿಗೆ ಬೆಂಬಲ ಬೆಲೆ: ಬೆಂಗಳೂರಿಗೆ ಪಾದಯಾತ್ರೆ

ಕ್ವಿಂಟಲ್‌ಗೆ ₹25 ಸಾವಿರ ಬೇಡಿಕೆ * ಗಾಂಧಿ ಜಯಂತಿಯಂದು ತಿಪಟೂರಿನಲ್ಲಿ ಯಾತ್ರೆಗೆ ಚಾಲನೆ
Published 1 ಆಗಸ್ಟ್ 2023, 14:36 IST
Last Updated 1 ಆಗಸ್ಟ್ 2023, 14:36 IST
ಅಕ್ಷರ ಗಾತ್ರ

ತುಮಕೂರು: ಕೊಬ್ಬರಿ ಕನಿಷ್ಠ ಬೆಂಬಲ ಬೆಲೆಯನ್ನು ಕ್ವಿಂಟಲ್‌ಗೆ ₹25 ಸಾವಿರಕ್ಕೆ ಹೆಚ್ಚಿಸುವುದು ಸೇರಿದಂತೆ ತೆಂಗು ಬೆಳೆಗಾರರ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ತಿಪಟೂರಿನಿಂದ ಬೆಂಗಳೂರು ವರೆಗೆ ಪಾದಯಾತ್ರೆ ನಡೆಸಲು ‘ಸಂಯುಕ್ತ ಹೋರಾಟ– ಕರ್ನಾಟಕ’ ಸಂಘಟನೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.

ತೆಂಗು ಬೆಳೆಯುವ ಹದಿನೈದು ಜಿಲ್ಲೆಗಳಿಂದ ಬಂದಿದ್ದ ರೈತ ಸಂಘಟನೆ ಮುಖಂಡರು, ತೆಂಗು ಬೆಳೆಗಾರರು, ಕಾರ್ಮಿಕ ಸಂಘಟನೆಗಳ ಪ್ರಮುಖರು ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹೋರಾಟ ತೀವ್ರಗೊಳಿಸುವ ಬಗ್ಗೆ ನಗರದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಚರ್ಚಿಸಿದರು.

ಅಕ್ಟೋಬರ್ 2ರಂದು ಗಾಂಧಿ ಜಯಂತಿಯಂದು ತಿಪಟೂರಿನಲ್ಲಿ ಸಮಾವೇಶ ನಡೆಸಿ ಪಾದಯಾತ್ರೆಗೆ ಚಾಲನೆ ನೀಡಲಾಗುತ್ತದೆ. ಅ. 7ರಂದು ಬೆಂಗಳೂರು ತಲುಪಲಿದ್ದು, ಸ್ವಾತಂತ್ರ್ಯ ಉದ್ಯಾನದಲ್ಲಿ ತೆಂಗು ಬೆಳೆಗಾರರ ಬೃಹತ್ ಸಮಾವೇಶ ಸಂಘಟಿಸಿ ಹಕ್ಕೊತ್ತಾಯ ಮಂಡಿಸಲಾಗುತ್ತದೆ. ತೆಂಗು ಬೆಳೆಯುವ ದಕ್ಷಿಣ ಭಾರತದ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಪುದುಚೇರಿ ರೈತ ಮುಖಂಡರನ್ನೂ ಸಮಾವೇಶಕ್ಕೆ ಆಹ್ವಾನಿಸಲಾಗುತ್ತದೆ.

ಸಭೆ ನಂತರ ಮಾಹಿತಿ ನೀಡಿದ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ‘ಪಾದಯಾತ್ರೆಗೂ ಮುನ್ನ ಜಿಲ್ಲಾ ಮಟ್ಟದಲ್ಲೂ ಹೋರಾಟ ರೂಪಿಸಲಾಗಿದೆ. ಆಗಸ್ಟ್ 5ರಂದು ಕೊಬ್ಬರಿ ಬೆಳೆಯುವ ಜಿಲ್ಲೆಗಳ ವ್ಯಾಪ್ತಿಯ ಸಂಸದರ ಮನೆ ಮುಂದೆ ಸತ್ಯಾಗ್ರಹ ನಡೆಸಿ ಮನವಿ ಸಲ್ಲಿಸಲಾಗುವುದು. ಸಂಸತ್‌ನಲ್ಲಿ ತೆಂಗು ಬೆಳೆಗಾರರ ಸಮಸ್ಯೆ ಚರ್ಚಿಸಿ ಪರಿಹಾರ ಒದಗಿಸುವಂತೆ ಒತ್ತಾಯಿಸಲಾಗುವುದು. ಆ. 15ರಂದು ಎಲ್ಲಾ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಗುವುದು’ ಎಂದು ವಿವರಿಸಿದರು.

ತೆಂಗು ಬೆಳೆಗಾರರನ್ನು ರಕ್ಷಿಸಲು ತಾತ್ಕಾಲಿಕ ಹಾಗೂ ದೂರದೃಷ್ಟಿಯ ಪರಿಹಾರ ಕ್ರಮಗಳನ್ನು ರೂಪಿಸಬೇಕು. ಕೊಬ್ಬರಿ ಬೆಲೆ ತೀವ್ರವಾಗಿ ಕುಸಿದಿದ್ದು, ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದು ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ತೆಂಗು ಬೆಳೆಗಾರರನ್ನು ರಕ್ಷಿಸಿ, ತೆಂಗು ಬೆಳೆ ಉಳಿಸಲು ಸಮಗ್ರ ಯೋಜನಾ ವರದಿ ಸಿದ್ಧಪಡಿಸಿ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ವಿವಿಧ ಸಂಘಟನೆಗಳ ಮುಖಂಡರಾದ ಎ.ಗೋವಿಂದರಾಜು, ಸಿ.ಯತಿರಾಜು, ಗಿರೀಶ್, ಎಸ್.ಎನ್.ಸ್ವಾಮಿ, ಶಶಿಧರ್, ಸಿದ್ಧವೀರಪ್ಪ, ಉಮೇಶ್, ಶಂಕರಪ್ಪ, ಮೂಡ್ಲಪ್ಪ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು.

ತೆಂಗು ಬೆಳೆಗಾರರ ಪ್ರಮುಖ ಬೇಡಿಕೆಗಳು

* ಶೂನ್ಯ ತೆರಿಗೆಯಲ್ಲಿ ತಾಳೆ ಎಣ್ಣೆ ಸೇರಿದಂತೆ ಖಾದ್ಯ ತೈಲ ಆಮದು ಮಾಡಿಕೊಳ್ಳುತ್ತಿರುವುದನ್ನು ತಕ್ಷಣ ನಿಲ್ಲಿಸಬೇಕು* ಕೊಬ್ಬರಿಗೆ ಕನಿಷ್ಟ ಬೆಂಬಲ ಬೆಲೆಯನ್ನು ಕ್ವಿಂಟಲ್‌ಗೆ ₹25 ಸಾವಿರಕ್ಕೆ ಹೆಚ್ಚಳ ಮಾಡಬೇಕು * ಕೇಂದ್ರ ₹20 ಸಾವಿರ ರಾಜ್ಯ ಸರ್ಕಾರ ₹5 ಸಾವಿರ ನೀಡಬೇಕು  * ನಾಫೆಡ್ ನಿಯಮಾವಳಿ ಸಡಿಲಿಸಿ ಯಾವುದೇ ನಿರ್ಬಂಧ ವಿಧಿಸದೆ ವರ್ಷ ಪೂರ್ತಿ ಕೊಬ್ಬರಿ ಖರೀದಿಸಬೇಕು  * ಹೋಬಳಿ ಕೇಂದ್ರಗಳಲ್ಲಿ ನಾಫೆಡ್ ಕೇಂದ್ರ ತೆರೆದು ರೈತರು ಬೆಳೆದ ಎಲ್ಲಾ ಕೊಬ್ಬರಿ ಖರೀದಿಸಬೇಕು * ತೆಂಗಿನ ಕಾಯಿ ಎಳನೀರಿಗೂ ಪ್ರೋತ್ಸಾಹ ಧನ ನೀಡಬೇಕು; ತೆಂಗು ಉಪ ಉತ್ಪನ್ನಗಳ ತಯಾರಿಕೆಗೆ ಪ್ರೋತ್ಸಾಹಿಸಬೇಕು  * ಅಬಕಾರಿ ಕಾಯ್ದೆ ವ್ಯಾಪ್ತಿಯಿಂದ ನೀರಾ ಹೊರಗಿಡಬೇಕು * ನಿಯಮ ಸರಳಗೊಳಿಸಿ ಎಲ್ಲಾ ರೈತರು ನೀರಾ ಇಳಿಸಿ ಮಾರಾಟ ಮಾಡಲು ಅವಕಾಶ ಕಲ್ಪಿಸಬೇಕು * ನೀರಾಗೆ ಪ್ರತ್ಯೇಕ ನಿಯಮಾವಳಿ ರೂಪಿಸಬೇಕು * ತೆಂಗು ಉತ್ಪನ್ನಗಳನ್ನು ಸರ್ಕಾರದ ಎಲ್ಲಾ ಹಂತದಲ್ಲಿ ಮಾರಾಟ ಮಾಡಲು ವ್ಯವಸ್ಥೆ ಮಾಡಬೇಕು  * ತೆಂಗಿಗೆ ಕಾಡುತ್ತಿರುವ ರೋಗ ನಿಯಂತ್ರಣ ತೆಂಗು ಇಳುವರಿ ಹೆಚ್ಚಳಕ್ಕೆ ಕ್ರಮ ತೆಂಗು ಬೆಳೆಗೆ ಪ್ರೋತ್ಸಾಹ  * ತೆಂಗಿನ ಉಪ ಉತ್ಪನ್ನಗಳ ತಯಾರಿಕೆಗೆ ಸಮಗ್ರ ಯೋಜನೆ ರೂಪಿಸಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT