ಶುಕ್ರವಾರ, ಆಗಸ್ಟ್ 12, 2022
27 °C
ಇಂದು ಪತ್ರಿಕಾ ವಿತರಕರ ದಿನ; ಲಾಕ್‌ಡೌನ್‌ನಲ್ಲಿ ಮನೆಯಲ್ಲಿ ಕುಳಿತವರಿಗೆ ಜಗದ ವಿದ್ಯಮಾನ ತಲುಪಿಸಿದ ಸಾಹಸಿಗಳು

ಕೊರೊನಾಕ್ಕೆ ಸೆಡ್ಡುಹೊಡೆದು ಕೆಲಸ ಮಾಡಿದ ಪತ್ರಿಕಾ ವಿತರಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಕೊರೊನಾ ಸಂದರ್ಭದಲ್ಲಿ ಮಾಧ್ಯಮ ಲೋಕದಲ್ಲಿ ವಾರಿಯರ್ಸ್‌ಗಳ ರೀತಿಯಲ್ಲಿ ಕೆಲಸ ಮಾಡಿದವರು ಪತ್ರಿಕಾ ವಿತರಕರು. ಕೊರೊನಾ ಭಯದ ನಡುವೆಯೇ ಎಂದಿನ ರೀತಿಯಲ್ಲಿಯೇ ಮನೆ ಮನೆಗೆ ಪತ್ರಿಕೆಗಳನ್ನು ತಲುಪಿಸಿದರು. ಲಾಕ್‌ಡೌನ್‌ ಕಾರಣದಿಂದ ಮನೆಯಲ್ಲಿ ಕುಳಿತವರಿಗೆ ಜಗದ ವಿದ್ಯಮಾನ ತಲುಪಿಸಿದ ಸಾಹಸಿಗಳು ಪತ್ರಿಕಾ ವಿತರಕರು.

ಕೆಲವು ಕಡೆಗಳಲ್ಲಿ ಸೀಲ್‌ಡೌನ್, ಪೊಲೀಸರು ಕಟ್ಟುನಿಟ್ಟಿನ ಕ್ರಮಗಳ ನಡುವೆಯೂ ಕಾಯಕದಲ್ಲಿ ಮುಂದುವರಿದರು. ಬೆಳ್ಳಂ ಬೆಳಿಗ್ಗೆ ಚಳಿ, ಮಳೆ ಎನ್ನದೆ ಕೊರೊನಾ ಭಯದ ನಡುವೆಯೇ ಕೆಲಸದಲ್ಲಿ ನಿರತರಾಗಿದ್ದರು.

ಅಸಂಘಟಿತ ವಲಯದಲ್ಲಿ ದುಡಿಯುವ ಈ ಪತ್ರಿಕಾ ವಿತರಕರು ಗ್ಲೌಸ್, ಮಾಸ್ಕ್, ಸ್ಯಾನಿಟೈಸರ್‌ಗಳನ್ನು ತಮ್ಮ ಕೆಲಸ ವೇಳೆ ಅಚ್ಚುಕಟ್ಟಾಗಿ ಬಳಸಿದರು. ಶುಕ್ರವಾರ (ಸೆ.4) ಪತ್ರಿಕಾ ವಿತರಕರ ದಿನ. ಈ ನೆಪದಲ್ಲಿ ಕೊರೊನಾ ಸಂದರ್ಭದಲ್ಲಿ ಅವರು ಎದುರಿಸಿದ ಸಮಸ್ಯೆಗಳು ಮತ್ತು ಅವರ ಆತ್ಮವಿಶ್ವಾಸವನ್ನು ಅವರ ಮಾತುಗಳಲ್ಲಿಯೇ ಕೇಳಿ. 

‘ಲಾಕ್‌ಡೌನ್ ಸಮಯದಲ್ಲಿ ವಯಸ್ಸಾದವರು, ಮಕ್ಕಳು ಇದ್ದ ಮನೆಯವರು ಪತ್ರಿಕೆಗಳನ್ನು ಹಾಕಿಸಿಕೊಳ್ಳುತ್ತಿರಲಿಲ್ಲ. ಅವರ ಮನವೊಲಿಸಬೇಕಿತ್ತು. ಸ್ಯಾನಿಟೈಸ್‌, ಮಾಸ್ಕ್, ಗ್ಲೌಸ್ ತೊಟ್ಟು ಪತ್ರಿಕೆ ವಿತರಿಸುತ್ತಿದ್ದೆವು’ ಎನ್ನುವರು ಕ್ಯಾತ್ಸಂದ್ರದ ಪತ್ರಿಕಾ ವಿತರಕರಾದ ಲತಾ.

‘ಎಂದಿನ ರೀತಿಯಲ್ಲಿಯೇ ಬೆಳಿಗ್ಗೆ 2.30ಕ್ಕೆ ಪತ್ರಿಕೆ ಬರುತ್ತಿತ್ತು. ನಾವು ಬೆಳಿಗ್ಗೆ 3.30ಕ್ಕೆ ಎದ್ದು ಪತ್ರಿಕೆಗಳನ್ನು ವಿಂಗಡಿಸಿಕೊಂಡು ಹಂಚಲು ತೆರಳುತ್ತಿದ್ದೆವು. ಲಾಕ್‌ಡೌನ್ ಇದೆ ಎನ್ನುವ ಕಾರಣಕ್ಕೆ ತಡ ಸಹ ಮಾಡುವಂತೆ ಇರಲಿಲ್ಲ. ಕೆಲವರು ಪತ್ರಿಕೆಗಾಗಿ ಕಾಯುತ್ತ ಕೂರುತ್ತಿದ್ದರು. ಸ್ವಲ್ಪ ತಡವಾದರೂ ಕರೆ ಮಾಡುತ್ತಿದ್ದರು’ ಎಂದು ನೆನಪಿಸಿಕೊಳ್ಳುವರು.

‘ಇದೇ ಮೊದಲ ಬಾರಿಗೆ ನಾವು ಕೊರೊನಾ ಕಾರಣಕ್ಕೆ ದೊಡ್ಡ ಸಂಕಷ್ಟವನ್ನು ಎದುರಿಸಿದೆವು. ಆದರೆ ಗ್ರಾಹಕರಿಗೆ ಮಾತ್ರ ಸರಿಯಾದ ಸಮಯಕ್ಕೆ ಪತ್ರಿಕೆಗಳನ್ನು ನೀಡುತ್ತಿದ್ದೆವು. ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿ ಕೆಲಸ ಮಾಡಿದೆವು’ ಎನ್ನುವರು ಶಿರಾಗೇಟ್‌ನ ಪತ್ರಿಕಾ ವಿತರಕರಾದ ಗೋವಿಂದಪ್ಪ.

‘ಪತ್ರಿಕೆ ಮುಟ್ಟಿದರೆ ಕೊರೊನಾ ಹರಡುತ್ತದೆ ಎಂದು ಸುದ್ದಿ ಹರಡಿತು. ಆಗ ‘ಪ್ರಜಾವಾಣಿ’ಯಲ್ಲಿ ಇದು ತಪ್ಪು ಕಲ್ಪನೆ. ಎಚ್ಚರಿಕೆಯ ಕ್ರಮಗಳನ್ನು ಅನುಸರಿಸಿಯೇ ‍ಪತ್ರಿಕೆಗಳು ರೂಪುಪಡೆಯುತ್ತವೆ ಎಂದು ಸುದ್ದಿ ಪ್ರಕಟವಾಯಿತು. ಈ ಸುದ್ದಿಗಳನ್ನು ಜನರಿಗೆ ತೋರಿಸಿ ಜಾಗೃತಿ ಮೂಡಿಸಿದೆವು’ ಎನ್ನುವರು ತುರುವೇಕೆರೆಯ ಪತ್ರಿಕಾ ವಿತರಕ ನರಸಿಂಹಸ್ವಾಮಿ.

ಪತ್ರಿಕೆ ಹಂಚುವವರಿಗೆ ಪೊಲೀಸರು ಯಾವುದೇ ರೀತಿಯ ತೊಂದರೆ ಮಾಡಲಿಲ್ಲ. ಮಾಸ್ಕ್ ಹಾಕಿಕೊಂಡು ಕೆಲಸ ಮಾಡಿ ಎನ್ನುವ ಸಲಹೆ ನೀಡುತ್ತಿದ್ದರು ಎಂದರು.

‘ನೀವು ಹಣವನ್ನು ಪಡೆಯುತ್ತೀರಾ ಅಲ್ಲವಾ. ಆ ನೋಟು ಸಹ ಒಬ್ಬರ ಕೈಯಿಂದ ಮತ್ತೊಬ್ಬರ ಕೈ ಸೇರಿರುತ್ತದೆ. ಆದರೆ ಪತ್ರಿಕೆ ರಾತ್ರಿ ಮುದ್ರಣವಾಗಿ ಬೆಳಿಗ್ಗೆ ನಿಮ್ಮ ಕೈ ಸೇರುತ್ತದೆ. ಯಾವುದೇ ಕಾರಣಕ್ಕೂ ಆತಂಕಗೊಳ್ಳಬಾರದು ಎಂದು ಜನರಿಗೆ ತಿಳಿಹೇಳಿದೆವು’ ಎಂದು ನೆನಪಿಸಿಕೊಳ್ಳುವರು ಪಾವಗಡ ಪ್ರಜಾವಾಣಿ ವಿತರಕ ಮಂಜುನಾಥ್.

‘ಬೆಳಿಗ್ಗೆ 5 ಗಂಟೆಯಿಂದಲೇ ಕೆಲಸ ಆರಂಭವಾಗುತ್ತಿದ್ದವು. ಪತ್ರಿಕೆ ಹಂಚುವವರಲ್ಲಿ ಸ್ವಯಂ ಧೈರ್ಯವೂ ಬಂದಿತು’ ಎನ್ನುವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು