ಪಾವಗಡ: ದೇಶದ ಸಂಪನ್ಮೂಲ ಉಳ್ಳವರ ಪಾಲಾಗುತ್ತಿದೆ ಎಂದು ಕಟ್ಟಡ ಕಾರ್ಮಿಕ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ. ಉಮೇಶ್ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ನಡೆದ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ದೇಶದ ಸಂಪನ್ಮೂಲ ಸಮಾನವಾಗಿ ಹಂಚಿಕೆಯಾಗುತ್ತಿಲ್ಲ. ಉಳ್ಳವರು, ಬಲಿಷ್ಟರ ಪಾಲಾಗುತ್ತಿದೆ. ಜನತೆ ಸಾಮೂಹಿಕವಾಗಿ ತೆರಿಗೆದಾರರಾಗುತ್ತಿದ್ದಾರೆ. ದುಡಿದ ಹಣವೆಲ್ಲ ತೆರಿಗೆ ಕಟ್ಟುವ ಅನಿವಾರ್ಯ ಸ್ಥಿತಿಯಲ್ಲಿ ಬಡ ಜನತೆ ಇದ್ದಾರೆ. ಇದನ್ನು ತಪ್ಪಿಸಲು ಹೋರಾಟದ ಅಗತ್ಯವಿದೆ. ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡುವಂತೆ ಸರ್ಕಾರಗಳನ್ನು ಒತ್ತಾಯಿಸಬೇಕು ಎಂದು ತಿಳಿಸಿದರು.
ತಾಲ್ಲೂಕು ಸಮಿತಿ ಕಾರ್ಯದರ್ಶಿ ಒ. ನಾಗರಾಜು ಮಾತನಾಡಿ, ಹಿಂದುಳಿದ ಪ್ರದೇಶವಾದ ತಾಲ್ಲೂಕಿನಲ್ಲಿ ಕೃಷಿಗೆ ಪೂರಕ ಕೈಗಾರಿಕೆಗಳನ್ನು ಸ್ಥಾಪಿಸಬೇಕು. ಗಡಿಯಲ್ಲಿರುವ ತಾಲ್ಲೂಕಿನ ಅಭಿವೃದ್ಧಿಗೆ ಸರ್ಕಾರಗಳು ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ಸಿಪಿಐಎಂ ಸದಸ್ಯ ಸುಬ್ಬರಾಯಪ್ಪ ಮಾತನಾಡಿ, ಕೆಲ ಶಕ್ತಿಗಳು ದೇಶದ ಜನರನ್ನು ಭಾವನಾತ್ಮಕವಾಗಿ ಒಡೆಯಲು ಪ್ರಯತ್ನಿಸುತ್ತಿವೆ. ಇಂತಹ ವಿಚಾರಗಳ ಬಗ್ಗೆ ಎಚ್ಚರದಿಂದಿರಬೇಕು ಎಂದರು.
ತಾಲ್ಲೂಕಿನ ನಿವೇಶನ ರಹಿತರಿಗೆ ಸರ್ಕಾರ ಭೂಮಿ ಖರೀದಿಸಿ ನಿವೇಶನ ನೀಡಬೇಕು. ನಿವೇಶನ ಹಂಚಿಕೆ ಮಾಡಿರುವವರಿಗೆ ಹಕ್ಕುಪತ್ರ ವಿತರಿಸಿ, ಮನೆ ನಿರ್ಮಿಸಿಕೊಳ್ಳಲು ಅನುದಾನ, ಸಾಲ ಸೌಲಭ್ಯ ನೀಡಬೇಕು. ವನ್ಯ ಜೀವಿ ಮತ್ತು ಮನುಷ್ಯ ಸಂಘರ್ಷ ತಪ್ಪಿಸಲು ತಾಲ್ಲೂಕು ಆಡಳಿತ ಮುಂಜಾಗ್ರತೆ ವಹಿಸಬೇಕು ಎಂದರು.
ತಾಲ್ಲೂಕಿನ ಜಾಲೋಡಿನಲ್ಲಿ ನಾಯಿ ದಾಳಿಯಿಂದ 20 ಕುರಿಗಳು ಸತ್ತಿವೆ. ಕುರಿಗಾಹಿಗೆ ಒಂದು ಕುರಿಗೆ ₹15 ಸಾವಿರದಂತೆ ಪರಿಹಾರ ನೀಡಬೇಕು. ವರ್ತುಲ ರಸ್ತೆ ನಿರ್ಮಿಸಿ ಪಟ್ಟಣದ ವಾಹನ ದಟ್ಟಣೆ ನಿಯಂತ್ರಿಸಬೇಕು ಎಂದು ಸಮ್ಮೇಳನದಲ್ಲಿ ನಿರ್ಣಯಿಸಲಾಯಿತು.
ಕಟ್ಟಡ ಕಾರ್ಮಿಕ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರಾಮಾಂಜಿನಪ್ಪ, ಗಂಗಾಧರ, ದುಗ್ಗಪ್ಪ, ಮದ್ಲೇಟಪ್ಪ, ನರಸಿಂಹಪ್ಪ, ಶಿವಪ್ಪ, ಕಾಂತಪ್ಪ, ವಿ.ಎಚ್. ರಾಮಾಂಜಿನಪ್ಪ, ಮಮತ ಉಪಸ್ಥಿತರಿದ್ದರು.