ಮಂಗಳವಾರ, ಅಕ್ಟೋಬರ್ 19, 2021
22 °C

ಹಾಗಲವಾಡಿ: ರಸ್ತೆಗಾಗಿ ಜನರ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಗಲವಾಡಿ: ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಹೋಬಳಿಯ ಶಿವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಣೇಶಪುರ ಗ್ರಾಮದಲ್ಲಿ ಸುಮಾರು ಎರಡೂವರೆ ದಶಕಗಳ ಹಿಂದೆ ನಿವೇಶನ ಹಂಚಿಕೆ ಮಾಡಲಾಗಿದ್ದು, ಇನ್ನೂ ಅಗತ್ಯ ಮೂಲಸೌಕರ್ಯ ಕಲ್ಪಿಸಿಲ್ಲ. ಇದರಿಂದ ಜನರು ತೊಂದರೆ ಅನುಭವಿಸುವಂತಾಗಿದೆ.

ಈ ಪ್ರದೇಶದಲ್ಲಿ ಸುಮಾರು 30ಕ್ಕೂ ಹೆಚ್ಚು ಮನೆಗಳನ್ನು ಜನರು ನಿರ್ಮಿಸಿಕೊಂಡಿದ್ದಾರೆ. ಇನ್ನೂ ವಸತಿ ನಿರ್ಮಿಸಲು ಖಾಲಿ ನಿವೇಶನಗಳು ಇವೆ. ನಿವೇಶನಗಳಲ್ಲಿ ಮನೆ ನಿರ್ಮಾಣ ಮಾಡುವ ಆಸೆ ಇದ್ದರೂ ಸರಿಯಾದ ರಸ್ತೆ ಇಲ್ಲದ ಕಾರಣ ನಿವೇಶನದಾರರು ಹಿಂದೇಟು ಹಾಕುತ್ತಿದ್ದಾರೆ. ಇಲ್ಲಿ ವಾಸಿಸುವವರಲ್ಲಿ ಹಿಂದುಳಿದ ಜನಾಂಗದವರೇ ಹೆಚ್ಚಿದ್ದಾರೆ.

ಮನೆಯ ಮುಂದಿನ ರಸ್ತೆ ದುರಸ್ತಿಯಾಗಬೇಕಿದೆ. ನಿವೇಶನ ಹಂಚಿಕೆ ವೇಳೆ ಮಣ್ಣಿನ ರಸ್ತೆ ಹಾಗೂ ಚರಂಡಿ ನಿರ್ಮಿಸಿದ್ದು ಬಿಟ್ಟರೆ ಇಂದಿಗೂ ರಸ್ತೆ ದುರಸ್ತಿ ಕಂಡಿಲ್ಲ. ಮುಳ್ಳಿನ ಗಿಡಗಳು ಬೆಳೆದು ನಿಂತಿದ್ದು ಭಯಪಡುವಂತಾಗಿದೆ.

ಚುನಾವಣೆ ಸಂದರ್ಭದಲ್ಲಿ ಜನಪ್ರತಿನಿಧಿಗಳಲ್ಲಿ ಮನವಿ ಮಾಡಿದರೂ ಯಾರೊಬ್ಬರು ಗಮನಹರಿಸುತ್ತಿಲ್ಲ. ರಾತ್ರಿವೇಳೆ ಮನೆಯಿಂದ ಹೊರಬರಲು ಭಯಪಡುವಂತಾಗಿದೆ. ಈಗಲಾದರೂ ಸಂಬಂಧಪಟ್ಟವರು ಗಮನಹರಿಸಿ ಸಂಚಾರಕ್ಕೆ ಯೋಗ್ಯ ರಸ್ತೆ ನಿರ್ಮಾಣ ಮಾಡಿಕೊಡಬೇಕು ಎಂಬುದು ಜನರ ಆಗ್ರಹ.

‘ಇಲ್ಲಿ ಸುಮಾರು 15 ವರ್ಷಗಳಿಂದ ವಾಸವಾಗಿದ್ದೇವೆ. ಇದೇ ರಸ್ತೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಚುನಾವಣಾ ಸಂದರ್ಭದಲ್ಲಿ ರಸ್ತೆ, ಚರಂಡಿ ನಿರ್ಮಿಸುವುದಾಗಿ ಹೋಗುವ ರಾಜಕಾರಣಿಗಳು ಮತ್ತೆ ಚುನಾವಣೆ ಬಂದಾಗ ಮಾತ್ರ ನಮ್ಮನ್ನು ನೆನಪು ಮಾಡಿಕೊಳ್ಳುತ್ತಾರೆ’ ಎಂದು ಗ್ರಾಮಸ್ಥೆ ನಾಗರತ್ನಮ್ಮ ದೂರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.