ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು ಗ್ರಾಮಾಂತರದಲ್ಲಿ ರಾಜಕೀಯ ಸ್ವರೂಪ ಪಡೆದ ಸೋಂಕಿತ ವ್ಯಕ್ತಿಯ ಅಂತ್ಯಕ್ರಿಯೆ

ಶಾಸಕ ಡಿ.ಸಿ.ಗೌರಿಶಂಕರ್, ಮಾಜಿ ಶಾಸಕ ಬಿ.ಸುರೇಶ್ ಗೌಡ ನಡುವೆ ತೀವ್ರವಾದ ಜಟಾಪಟಿ
Last Updated 1 ಮೇ 2020, 12:46 IST
ಅಕ್ಷರ ಗಾತ್ರ

ತುಮಕೂರು: ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯನ್ನು ನಾಗವಲ್ಲಿ ಬಳಿಯ ಕುಂಬಿ ಪಾಳ್ಯದಲ್ಲಿ ಅಂತ್ಯಸಂಸ್ಕಾರ ಮಾಡಿದ್ದು ಗ್ರಾಮಾಂತರ ಕ್ಷೇತ್ರದಲ್ಲಿ ರಾಜಕೀಯ ಜಟಾಪಟಿಗೆ ವೇದಿಕೆಯಾಗಿದೆ.

ಶಾಸಕ ಡಿ.ಸಿ.ಗೌರಿಶಂಕರ್ ಹಾಗೂ ಮಾಜಿ ಶಾಸಕ ಬಿ.ಸುರೇಶ್ ಗೌಡ ನಡುವೆ ಏಕವಚನದ ವಾಕ್ಸಮರಕ್ಕೆ ಕಾರಣವಾಗಿದೆ. ಈ ಇಬ್ಬರು ಪರಸ್ಪರ ನಿಂದಿಸಿ ಮಾತನಾಡಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ಹರಿದಾಡುತ್ತಿವೆ. ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಫೇಸ್‌ಬುಕ್‌ನಲ್ಲಿ ‘ಕಾಮೆಂಟ್ಸ್’ ಜಗಳಕ್ಕೂ ಕಾರಣವಾಗಿದೆ.

‘ಕೊರೊನಾ ಪಾಸಿಟಿವ್‌ನಿಂದ ಸತ್ತ ವ್ಯಕ್ತಿಯ ಶವ ಸಂಸ್ಕಾರವನ್ನು ಇಲ್ಲಿ ಮಾಡಿದ್ದು ಇಡೀ ನಾಗವಲ್ಲಿ ಪಂಚಾಯಿತಿ ವ್ಯಾಪ್ತಿಯ ಜನರನ್ನು ಭಯಬೀಳಿಸಿದೆ. ಆ ಗ್ರಾಮದ ಸುತ್ತ ಹಿಂದೂಗಳು ಇದ್ದಾರೆ. ಮಲ್ಲಪ್ಪ ಮತ್ತು ಚಂದ್ರಯ್ಯ ಎಂಬುವವರು ಸತ್ತಾಗ ನಾನು ಅವರ ಶವವನ್ನು ಕೊಡಿ ಎಂದು ವೈದ್ಯರಿಗೆ ಹೇಳಿದೆ. ಆದರೆ ಅವರು ಕೊಡಲಿಲ್ಲ. ಇಲ್ಲಿನ ಶಾಸಕರು ಅಧಿಕಾರಿಗಳಿಗೆ ಫೋನ್ ಮಾಡಿ ಒತ್ತಡ ಹಾಕಿದ ಕಾರಣ ಹೆಣ ಕೊಟ್ಟಿದ್ದಾರೆ’ ಎಂದು ಸುರೇಶ್ ಗೌಡ ದೂರಿದ್ದಾರೆ.

‘900 ಮತಗಳನ್ನು ಅವರಿಗೆ ಹಾಕಿದ್ದರಿಂದ ಹೆಣ ಕೊಡಿಸಿದ್ದಾರೆ. ಈಗ ಇಡೀ ಕ್ಷೇತ್ರಕ್ಕೆ ಕೊರೊನಾ ಭೀತಿ ಎದುರಾಗಿದೆ. ಈ ಬಗ್ಗೆ ಮುಖ್ಯಮಂತ್ರಿ, ಪ್ರಧಾನಮಂತ್ರಿ ಅವರಿಗೆ ವರದಿ ಮಾಡುವೆ’ ಎಂದಿದ್ದಾರೆ.

ಮಾಜಿ ಶಾಸಕರ ಈ ಮಾತುಗಳಿಂದ ಕೆಂಡಾಮಂಡಲರಾಗಿರುವ ಡಿ.ಸಿ.ಗೌರಿಶಂಕರ್, ‘ಇಂತಹ ಕಷ್ಟಕಾಲದಲ್ಲಿ ರಾಜಕೀಯ ಮಾಡಬಾರದು. ಆದರೂ ನನ್ನ ವಿರುದ್ಧ ಸೋತವನು ರಾಜಕೀಯ ಮಾಡುತ್ತಿದ್ದಾನೆ. ಅವನು ರಾಜಕೀಯಕ್ಕೆ ಅಸಮರ್ಥ’ ಎಂದು ಕಿಡಿಕಾರಿದ್ದಾರೆ.

ಸತ್ತ ನಂತರವೇ ಆ ಮುಸ್ಲಿಮ್ ವ್ಯಕ್ತಿಯಲ್ಲಿ ಪಾಸಿಟಿವ್ ಇದೆ ಎನ್ನುವುದು ನನಗೆ ಗೊತ್ತಾಗಿದ್ದು. ಅವನೇನು ವೈದ್ಯಕೀಯ ಶಿಕ್ಷಣ ಓದಿದ್ದಾನೆಯೇ. ಮಾನಮಾರ್ಯಾದೆ ಇದೆಯಾ. ನಾನು ಯಾವ ವೈದ್ಯರು, ಅಧಿಕಾರಿಗಳಿಗೂ ಹೆಣ ಕೊಡಿ ಎಂದು ಫೋನ್ ಮಾಡಿಲ್ಲ. ಯಾವಾಗಲೂ ರಾಜಕೀಯ, ಅಧಿಕಾರ ಎಂದು ಸಾಯುತ್ತೀಯಲ್ಲೋ. ಈ ವಿಚಾರದಲ್ಲಿ ನಾನು ನಿನಗೆ ಕೊನೆಯ ಎಚ್ಚರಿಕೆ ಕೊಡುತ್ತಿದ್ದೇನೆ’ ಎಂದು ಹೇಳಿದ್ದಾರೆ.

ರಾಜಕೀಯ ತೊರೆಯುವ ಸವಾಲು

‘ನಾನು ಹೆಣ ಕೊಡಿ ಎಂದು ಯಾರಿಗಾದರೂ ಕರೆ ಮಾಡಿದ್ದೇನೆ ಎನ್ನುವುದನ್ನು ಅವನು (ಸುರೇಶ್ ಗೌಡ) ಸಾಬೀತು ಪಡಿಸಿದರೆ ನಾನು ರಾಜಕೀಯ ಬಿಡುತ್ತೇನೆ. ಸಾಬೀತು ಮಾಡಲು ಸಾಧ್ಯವಾಗದಿದ್ದರೆ ನೀನು ರಾಜಕೀಯ ಬಿಡುತ್ತೀಯಾ’ ಎಂದು ಗೌರಿಶಂಕರ್, ಸುರೇಶ್ ಗೌಡ ಅವರಿಗೆ ಸವಾಲು ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT