ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಳಿಯಾರು: ಹುಲುಸಾಗಿ ಬೆಳೆದ ಪೂರ್ವ ಮುಂಗಾರು ಬೆಳೆ

Published 9 ಜೂನ್ 2024, 7:49 IST
Last Updated 9 ಜೂನ್ 2024, 7:49 IST
ಅಕ್ಷರ ಗಾತ್ರ

ಹುಳಿಯಾರು: ಹೋಬಳಿ ವ್ಯಾಪ್ತಿಯಲ್ಲಿ ಪ್ರಸಕ್ತ ಪೂರ್ವ ಮುಂಗಾರಿನಲ್ಲಿ ಹೆಸರು ಕಾಳಿನ ಬಿತ್ತನೆ ಕುಂಠಿತವಾಗಿದ್ದರೂ, ಉತ್ತಮ ಮಳೆಗೆ ಬಿತ್ತನೆ ಮಾಡಿರುವ ಕಡೆ ಬೆಳೆ ಹುಲುಸಾಗಿ ಬೆಳೆದಿದೆ.

ಅಶ್ವಿನಿ ಮಳೆ ಬಾರದೆ ರೈತರ ನಿದ್ದೆಗೆಡಿಸಿತ್ತು. ಆದರೆ ಭರಣಿ ಕೊನೆ ಹಂತದಲ್ಲಿ ಆರಂಭವಾಗಿ ಕೃತಿಕ ಹಾಗೂ ರೋಹಿಣಿ ಮಳೆಗಳು ಹೋಬಳಿ ವ್ಯಾಪ್ತಿಯಲ್ಲಿ ಉತ್ತಮವಾಗಿ ಸುರಿದಿವೆ. ಭರಣಿ ಮಳೆಗೆ ಹೆಸರು ಬಿತ್ತನೆಗೆ ಸಕಾಲವಾಗಿದ್ದು, ತಡವಾಗಿ ಮಳೆ ಬಂದ ಕಾರಣ ಹೊಲಗಳು ಹಸನಾಗಿರಲಿಲ್ಲ. ಆದರೂ ರೈತರು ಹೆಸರು ಬಿತ್ತನೆಯನ್ನು ಶೇ 25ರಷ್ಟು ಮಾಡಿದ್ದಾರೆ.

ಅಲಸಂದೆ ಈ ಬಾರಿ ಹೆಚ್ಚು ಪ್ರದೇಶ ದಲ್ಲಿ ಬಿತ್ತನೆಯಾಗಿದ್ದು ಉತ್ತಮವಾಗಿ ಬೆಳೆದಿವೆ. ಕಳೆದ ವಾರದಿಂದ ಹೋಬಳಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗು ತ್ತಿರುವುದು ಹೆಸರು ಹಾಗೂ ಅಲಸಂದೆ ಬೆಳೆ ಹೂವು ಮೂಡಲು ಅನುಕೂಲ ವಾಗಿದೆ. ಹೆಸರು ಕೇವಲ ಮೂರು ತಿಂಗಳ ಬೆಳೆಯಾಗಿದ್ದು ರೋಹಿಣಿ ಮಳೆ ಉತ್ತಮವಾಗಿ ಬಿದ್ದ ಕಾರಣ ಬೆಳೆ ಹುಲು ಸಾಗಿ ಬೆಳೆದಿದೆ. ಮೃಗಶಿರಾ ಮಳೆಯೂ ಉತ್ತಮವಾಗಿ ಬೀಳುತ್ತಿರುವುದು ಬೆಳೆಗೆ ಪೂರಕವಾಗಿದೆ. ಮೃಗಶಿರಾ ಮಳೆಗೆ ಇನ್ನೂ ಸಮಯವಿದ್ದು ಒಂದೆರಡು ಹದ ಮಳೆ ಬಂದರೂ ಉತ್ತಮ ಬೆಳೆ ಬರುತ್ತದೆ ಎನ್ನುವುದು ರೈತರ ನಂಬಿಕೆ.

ಬಿತ್ತನೆಯಾಗಿರುವ ಹೆಸರು, ಉದ್ದು, ತೊಗರಿ, ಹರಳು, ಎಳ್ಳು ಹಾಗೂ ಜೋಳ ಕಾಲಕಾಲಕ್ಕೆ ಬೀಳುತ್ತಿರುವ ಮಳೆಯಿಂದ ಮುಂದೆ ಯಾವುದೇ ರೋಗ ಹಾಗೂ ಕೀಟಗಳ ತಾಗದೆ ಹೋದರೆ ಉತ್ತಮ ಫಸಲು ಪಡೆಯಬಹುದು ಎನ್ನುವುದು ಕೆಲ ರೈತರ ಅಭಿಪ್ರಾಯ.

400 ಮಿ.ಮೀ ದಾಖಲೆ ಮಳೆ

ಹೋಬಳಿ ವ್ಯಾಪ್ತಿಯಲ್ಲಿ ಮೇ 8ರಿಂದ ಜೂನ್‌ 8ರವರೆಗೆ 400 ಮಿ.ಮೀ ದಾಖಲೆಯ ಮಳೆಯಾಗಿದೆ. ಬೋರನಕಣಿವೆ ಭಾಗದಲ್ಲಿ 300 ಮಿ.ಮೀ ಮಳೆಯಾಗಿದೆ.

ಹೋಬಳಿ ವ್ಯಾಪ್ತಿಯಲ್ಲಿ ತೆಂಗು, ಅಡಿಕೆ ಬೆಳೆಗೆ ನೀರಿಲ್ಲದೆ ತೊಂದರೆಯಾಗಿತ್ತು. ಅನೇಕ ಕಡೆ ಒಣಗಿ ಹೋಗಿದ್ದವು. ಆದರೆ ಒಂದು ತಿಂಗಳಿನಿಂದ ಬಿದ್ದಿರುವ ಸತತ ಮಳೆಗೆ ತೆಂಗು ಹಾಗೂ ಅಡಿಕೆ ಬೆಳೆ ಮರುಜೀವ ಪಡೆದಿವೆ. ಸಾಕಷ್ಟು ಸಂಖ್ಯೆಯಲ್ಲಿ ಕೊಳವೆ ಬಾವಿಗಳು ಬತ್ತಿ ಹೋಗಿದ್ದವು. ಸತತವಾಗಿ ಬಂದಿರುವ ಮಳೆಯಿಂದ ಕೆಲವು ಕೊಳವೆಬಾವಿಗಳು ಮರುಹುಟ್ಟು ಪಡೆದಿವೆಯಾದರೂ ಹೆಚ್ಚಿನ ಸಂಖ್ಯೆಯ ಕೊಳವೆ ಬಾವಿಗಳು ಇಷ್ಟು ಮಳೆಯಾದರೂ ಮರುಪೂರಣ ಆಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT