ಶುಕ್ರವಾರ, ಆಗಸ್ಟ್ 12, 2022
24 °C

ಖಾಸಗಿ ಶಾಲೆ ಶಿಕ್ಷಕರ ಸ್ಥಿತಿ ಅತಂತ್ರ

ಕೆ.ಜೆ. ಮರಿಯಪ್ಪ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಕೊರೊನಾ ಸೋಂಕು ಕಾಲಿಟ್ಟ ದಿನದಿಂದಲೂ ಜಿಲ್ಲೆಯ ಖಾಸಗಿ ಅನುದಾನ ರಹಿತ ಪ್ರಾಥಮಿಕ, ಪ್ರೌಢಶಾಲೆಗಳ ಶಿಕ್ಷಕರ ಸ್ಥಿತಿ ತೀರ ಶೋಚನೀಯವಾಗಿದೆ. ಶಿಕ್ಷಕ ವೃತ್ತಿ ಬಿಟ್ಟರೆ ಬೇರೆ ಕೆಲಸ ಗೊತ್ತಿಲ್ಲದವರು ಜೀವನದ ಬಂಡಿ ನೂಕುವಲ್ಲಿ ಹೈರಾಣಾಗಿದ್ದಾರೆ.

ಮಕ್ಕಳಿಗೆ ಅಕ್ಷರ ಕಲಿಸಿ, ಮಾರ್ಗದರ್ಶನ ಮಾಡಿ ಗುರಿಯತ್ತ ಸಾಗುವಂತೆ ಮಾಡಬೇಕಿದ್ದ ಗುರುಗಳಿಗೇ ಈಗ ಗುರಿ ಇಲ್ಲವಾಗಿದೆ. ಮುಂದಿನ ದಾರಿ ಕಾಣದಾಗಿದ್ದು, ಕತ್ತಲೆ ಆವರಿಸಿದೆ. ಯುವ ಸಮುದಾಯಕ್ಕೆ ದಾರಿ ದೀಪವಾಗಿ ಮುನ್ನಡೆಸ ಬೇಕಿದ್ದವರೇ ಅಂಧಕಾರದಲ್ಲಿ ಮುಳುಗಿದ್ದಾರೆ. ನಮಗೆ ಮುಂದಿನ ಮಾರ್ಗ ಗೋಚರಿಸುತ್ತಿಲ್ಲ, ಇನ್ನೂ ಮಕ್ಕಳನ್ನು ಹೇಗೆ ಮುನ್ನಡೆಸುವುದು ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ.

ಕೋವಿಡ್ ಮೊದಲ ಅಲೆ ಆರಂಭವಾಗುತ್ತಿದ್ದಂತೆ ಶಾಲೆಗಳನ್ನು ಮುಚ್ಚಲಾಯಿತು. ಈ ಸಮಯದಲ್ಲಿ ಕೆಲ ಶಾಲೆಗಳ ಆಡಳಿತ ಮಂಡಳಿಯವರು ಅಲ್ಪಸ್ವಲ್ಪ ವೇತನ ನೀಡಿದರು. ನಂತರ ಸಂಬಳ ಕೊಡುವುದನ್ನು ನಿಲ್ಲಿಸಿದರು. ಕೆಲವೇ ಕೆಲವು ಶಿಕ್ಷಕರನ್ನು ಬಳಸಿಕೊಂಡು ಆನ್‌ಲೈನ್ ತರಗತಿ ನಡೆಸಲಾಯಿತು. ಒಂದು ಶಾಲೆಯಲ್ಲಿ ಐದಾರು ವಿಭಾಗಗಳು ಇದ್ದರೂ ಎಲ್ಲಾ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ ಆನ್‌ಲೈನ್ ಮೂಲಕ ಪ್ರತಿ ವಿಷಯಕ್ಕೆ ಒಬ್ಬರೇ ಶಿಕ್ಷಕರನ್ನು ಬಳಸಿಕೊಂಡು ಪಾಠ ಮಾಡಿಸಲಾಯಿತು. ಕಳೆದ ವರ್ಷದ ಕೊನೆಯ ವೇಳೆಗೆ ಪ್ರೌಢಶಾಲೆಗಳು ಆರಂಭವಾದರೂ ಅಷ್ಟೇ ವೇಗದಲ್ಲಿ ಮತ್ತೆ ಮುಚ್ಚಬೇಕಾಯಿತು. ಇದರಿಂದ ಹಲವು ಶಿಕ್ಷಕರು ಉದ್ಯೋಗ ಕಳೆದುಕೊಳ್ಳಬೇಕಾಯಿತು.

ಖಾಸಗಿ ಶಾಲೆಗಳ ಆಡಳಿತ ಮಂಡಳಿಯವರಿಗೂ ಮುಂದಿನ ದಿನಗಳಲ್ಲಿ ಶೈಕ್ಷಣಿಕ ಗುಣಮಟ್ಟ ಕಾಪಾಡಿಕೊಳ್ಳಲು ಉತ್ತಮ ಶಿಕ್ಷಕರನ್ನು ಉಳಿಸಿಕೊಳ್ಳುವ ಅನಿವಾರ್ಯತೆಯೂ ಎದುರಾಯಿತು. ಅಂತಹ ಶಿಕ್ಷಕರಿಗೆ ಒಂದಷ್ಟು ವೇತನನೀಡಿ ತಮ್ಮ ಶಾಲೆಯಲ್ಲೇ ಉಳಿಸಿಕೊಳ್ಳುವ ಪ್ರಯತ್ನ ಮಾಡಿದರು. ಪ್ರೌಢಶಾಲೆಗಳ ಸಾಕಷ್ಟು ಶಿಕ್ಷಕರಿಗೆ ಪ್ರತಿ ತಿಂಗಳು ನೀಡುತ್ತಿದ್ದ ಸಂಬಳದಲ್ಲಿ ಅರ್ಧದಷ್ಟು ವೇತನವನ್ನು ನೀಡಲಾಗಿದೆ ಎಂದು ಆಡಳಿತ ಮಂಡಳಿಯವರು ಹೇಳುತ್ತಿದ್ದಾರೆ. ಎಲ್ಲಾ ಶಿಕ್ಷಕರಿಗೂ ಅರ್ಧ ಸಂಬಳ ಸಿಕ್ಕಿದೆ ಎನ್ನುವುದಕ್ಕಿಂತ ಸಾಕಷ್ಟು ಸಂಖ್ಯೆಯ ಶಿಕ್ಷಕರಿಗೆ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.

ಇನ್ನೂ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳ ಬಹುತೇಕ ಶಿಕ್ಷಕರಿಗೆ ವೇತನವನ್ನೇ ನೀಡಿಲ್ಲ. ಹಲವು ಶಿಕ್ಷಕರನ್ನು ಆಡಳಿತ ಮಂಡಳಿಯವರು ಕೆಲಸದಿಂದ ತೆಗೆದುಹಾಕಿದ್ದಾರೆ. ಇನ್ನೂ ಕೆಲವು ಕಡೆಗಳಲ್ಲಿ ಮುಂದೆ ಶಾಲೆಗಳು ಆರಂಭವಾದ ನಂತರ ಕೆಲಸಕ್ಕೆ ಸೇರಿಸಿಕೊಳ್ಳುವುದಾಗಿ ಹೇಳಿ ಬಿಡುಗಡೆ ಮಾಡಿ ಮನೆಗೆ ಕಳುಹಿಸಿದ್ದಾರೆ. ಕಳೆದ 15 ತಿಂಗಳಿಂದ ವೇತನವಿಲ್ಲದೆ ಜೀವನ ನಡೆಸುವುದು ಕಷ್ಟಕರವಾಗಿದೆ. ಮತ್ತೆ ಶಾಲೆಗಳು ಯಾವಾಗ ಆರಂಭವಾಗುತ್ತವೆ ಎಂದು ಕಾಯುವಂತಾಗಿದೆ.

ಮನೆ ಬಾಡಿಗೆ ಕಟ್ಟಲಾರದೆ, ಮಕ್ಕಳಿಗೆ ಶಿಕ್ಷಣ ಕೊಡಿಸಲಾಗದೆ ಬಸವಳಿದಿದ್ದಾರೆ. ಒಂದು ದಿನದ ಜೀವನ ಸಾಗಿಸುವುದು ದುರ್ಲಬವಾಗಿದೆ. ದಿನದಿಂದ ದಿನಕ್ಕೆ ಶಿಕ್ಷಕರ ಪರಿಸ್ಥಿತಿ ಬಿಗಡಾಯಿಸುತ್ತಿದೆ. ತಮ್ಮ ಸ್ಥಿತಿಯನ್ನು ಮತ್ತೊಬ್ಬರ ಬಳಿ ಹೇಳಿಕೊಳ್ಳಲಾಗದೆ, ಯಾರ ಬಳಿಯೂ ಕೈಚಾಚಲಾಗದೆ ಸ್ವಾಭಿಮಾನವನ್ನು ಅದುಮಿಟ್ಟುಕೊಂಡು ಒಂಟಿತನವನ್ನು ಅನುಭವಿಸುತ್ತಿದ್ದಾರೆ. ಮಾನಸಿಕವಾಗಿಯೂ ಜರ್ಜರಿತರಾಗಿದ್ದಾರೆ.

ಕೆಲಸ ಕಳೆದುಕೊಂಡವರು ಅನಿವಾರ್ಯವಾಗಿ ಇತರ ಕೆಲಗಳಲ್ಲಿ ತೊಡಗಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಕೆಲವರು ಭದ್ರತಾ ಸಿಬ್ಬಂದಿಯಾಗಿ ದುಡಿಯುತ್ತಿದ್ದರೆ, ಮತ್ತಷ್ಟು ಮಂದಿ ಹಣ್ಣು, ತರಕಾರಿ ಮಾರಾಟ ಮಾಡುವುದನ್ನು ಕಾಣುತ್ತಿದ್ದೇವೆ. ಇನ್ನೂ ಕೆಲವರು ಸ್ವಾಭಿಮಾನ ಬದಿಗಿಟ್ಟು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೂಲಿಯಾಳುಗಳಾಗಿ ಕೆಲಸ ಮಾಡುತ್ತಿದ್ದಾರೆ. ಕಾರ್ಖಾನೆಗಳು, ಇಟ್ಟಿಗೆ ತಯಾರಿಕಾ ಘಟಕಗಳು, ಕಟ್ಟಡ ನಿರ್ಮಾಣ ಸೇರಿದಂತೆ ಕೂಲಿ ಸಿಗುವಕಡೆಗಳಲ್ಲಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಶಿಕ್ಷಕ ವೃತ್ತಿ ಆಯ್ಕೆ ಮಾಡಿಕೊಂಡು ತಪ್ಪು ಮಾಡಿದೆವು. ಮುಂದೆ ಪರಿಸ್ಥಿತಿ ಸುಧಾರಿಸಬಹುದು ಎಂಬ ಆಶಾಭಾವನೆಯಿಂದ ಒಳ್ಳೆಯ ದಿನಗಳಿಗಾಗಿ ಎದುರುನೋಡುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.