ಸೋಮವಾರ, ಆಗಸ್ಟ್ 2, 2021
28 °C
ಕೇಂದ್ರ ಸರ್ಕಾರದ ವಿರುದ್ಧ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಪ್ರತಿಭಟನೆ

‘ಕಾರ್ಪೊರೇಟ್ ಕಂಪನಿಗಳಿಗೆ ಲಾಭ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಕಾರ್ಪೊರೇಟ್ ಕಂಪನಿಗಳಿಗೆ ಲಾಭಮಾಡಿಕೊಡುವ ಭೂಸ್ವಾಧೀನ, ವಿದ್ಯುತ್, ಅಗತ್ಯಸೇವೆ, ಕಾರ್ಮಿಕ ಕಾನೂನುಗಳ ತಿದ್ದುಪಡಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ನೇತೃತ್ವದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಆಶಾ, ಅಂಗನವಾಡಿ ಕಾರ್ಯಕರ್ತೆಯರ ಸೇವೆ ಕಾಯಂಗೊಳಿಸಬೇಕು. ಉದ್ಯೋಗ ಖಾತ್ರಿ ದಿನಗಳನ್ನು 200 ದಿನಗಳಿಗೆ ಹೆಚ್ಚಿಸಬೇಕು. ಕೊರೊನಾ ಸಂದರ್ಭವನ್ನು ವೈದ್ಯಕೀಯ ತುರ್ತುಪರಿಸ್ಥಿತಿ ಎಂದು ಘೋಷಿಸಬೇಕು. ಪ್ರತಿ ವ್ಯಕ್ತಿಗೆ 10 ಕೆ.ಜಿ ಅಕ್ಕಿ ಹಾಗೂ ಇತರೆ ಪಡಿತರಗಳನ್ನು ಕೇರಳ ಮಾದರಿಯಲ್ಲಿ ಕೊಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿ, ‘ಕೊರೊನಾ ತಡೆಗೆ ಲಾಕ್‍ಡೌನ್ ಮಾಡಲಾಗಿತ್ತು. ಆದರೆ ಈ ಪ್ರಮಾಣದಲ್ಲಿ ರೋಗ ಹರಡುತ್ತಿರುವುದನ್ನು ನೋಡಿದರೆ ಲಾಕ್‍ಡೌನ್‍ವೊಂದೇ ಪರಿಹಾರವೇ ಎಂದು ಕೇಳಿಕೊಳ್ಳಬೇಕಾಗಿದೆ. ಹಸಿವನ್ನು ಲಾಕ್‍ಡೌನ್ ಮಾಡಲು ಸಾಧ್ಯವಿಲ್ಲದ ಕಾರಣ ದುಡಿಯುವ ಜನರ, ಜನಸಾಮಾನ್ಯರ ಮೂಲ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಕ್ರಮವಹಿಸಬೇಕು’ ಎಂದು ಆಗ್ರಹಿಸಿದರು.

ಎಐಯುಟಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್, ಐಎನ್‌ಟಿಯುಸಿ ಜಿಲ್ಲಾ ಮುಖಂಡ ಬಿ.ಎಚ್.ರಾಜು, ಎಐಯುಟಿಯುಸಿಯ ಮಂಜುಳಾ ಗೋನಾಳ್, ಕರ್ನಾಟಕ ಪ್ರಾಂತ ರೈತ ಸಂಘದ ಬಿ.ಉಮೇಶ್, ಎಐಟಿಯುಟಿಸಿ ಉಪಾಧ್ಯಕ್ಷ ಕಂಬೇಗೌಡ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಹ್ಮಣ್ಯ ಮಾತನಾಡಿದರು. ಸಿಐಟಿಯು ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರಂಗಧಾಮಯ್ಯ, ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷೆ ಗೌರಮ್ಮ, ಜಬೀನ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.