ತಿಪಟೂರು: ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಗಣನೀಯವಾಗಿ ಏರಿಕೆಯಾಗಿದ್ದರೂ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದ ಕಾರಣ ಸಾಮಾನ್ಯರ ಜೀವನ ನಿರ್ವಹಣೆ ಕಷ್ಟವಾಗಿದೆ ಎಂದು ಮಾಜಿ ಶಾಸಕ ಕೆ.ಷಡಕ್ಷರಿ
ಆರೋಪಿಸಿದರು.
ನಗರದ ಶಿವಕುಮಾರ ಸ್ವಾಮೀಜಿ ವೃತ್ತದಿಂದ (ಹಾಸನ್ ಸರ್ಕಲ್) ಎಪಿಎಂಸಿ ಮಾರುಕಟ್ಟೆವರಗೆ ಕಾಂಗ್ರೆಸ್‌ನಿಂದ ಇಂಧನ, ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಆಯೋಜಿಸಿದ್ದ ಸೈಕಲ್ ಜಾಥಾದಲ್ಲಿ ಅವರು ಮಾತನಾಡಿದರು.
ಅಗತ್ಯ ವಸ್ತುಗಳ ಬಲೆ ಏರಿಕೆ ನಿಯಂತ್ರಿಸದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡೆ ಆಡಳಿತ ವೈಫಲ್ಯಕ್ಕೆ ಹಿಡಿದ ಕನ್ನಡಿಯಂತಿದೆ. ಇಂಧನ ಬೆಲೆ ಏರಿಕೆಗೆ ಕಚ್ಛಾ ತೈಲದ ಬೆಲೆ ಏರಿಕೆ ಕಾರಣ ಎಂದು ಸರ್ಕಾರಗಳು ಹೇಳುತ್ತಿವೆ. ಆದರೆ ತೆರಿಗೆ ಮೊತ್ತವನ್ನು ಶೇ 65ರಷ್ಟು ಹೆಚ್ಚಿಸಿದ್ದು, ರಾಜ್ಯ ಸರ್ಕಾರ ವ್ಯಾಟ್ ಬೆಲೆಯನ್ನು ಶೇ 50ರಷ್ಟು ಹೆಚ್ಚಳ ಮಾಡಿರುವುದು ಬೆಲೆ ಏರಿಕೆಗೆ ಮುಖ್ಯ ಕಾರಣ. ಜನ ಜಾಗೃತರಾಗಿ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕು ಎಂದರು.
ಕಾಂಗ್ರೆಸ್ ವಕ್ತಾರ ಮುರುಳೀಧರ್ ಹಾಲಪ್ಪ ಮಾತನಾಡಿ, ಇಂಧನ ಬೆಲೆ ಏರಿಕೆಯಿಂದ ಸಾರ್ವಜನಿಕರ ಜೀವನ ಅವ್ಯವಸ್ಥೆಯ ಕಡೆಗೆ ಸಾಗುತ್ತಿದೆ. ಸುಪ್ರೀಂಕೋರ್ಟ್, ಹೈಕೋರ್ಟ್‍ಗಳು ಕೇಂದ್ರಕ್ಕೆ ಬೆಲೆ ಏರಿಕೆಯ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೂಚಿಸುತ್ತಿರುವುದು ಕೇಂದ್ರದ ವೈಫಲ್ಯದ ಚಿತ್ರಣವಾಗಿದೆ. ರಾಜ್ಯ ಸರ್ಕಾರದಲ್ಲಿ ಬಿಜೆಪಿಯ ಸ್ವಪಕ್ಷಿಯರ ಕಿತ್ತಾಟ, ಸಮಸ್ಯೆಗಳನ್ನು ಬಗೆಹರಿಸಲು ಕೇಂದ್ರದಿಂದ ದಿನಕ್ಕೊಬ್ಬ ನಾಯಕ ಬರುವ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ರಾಮಕೃಷ್ಣ ಮಾತನಾಡಿ, ದೇಶದಲ್ಲಿ ಆರ್ಥಿಕ ಸ್ಥಿತಿ ಸಂಕಷ್ಟದಲ್ಲಿರುವಾಗ ಅಗತ್ಯ ವಸ್ತುಗಳ ಬೆಲೆ, ಇಂಧನದ ಬೆಲೆ ಏರಿಕೆ ಮಾಡಿ ಜನಸಾಮಾನ್ಯರು ಜೀವನ ನಿರ್ವಹಣೆ ಕಷ್ಟವಾಗಿದೆ. ಕೂಡಲೇ ಕೇಂದ್ರ ಸರ್ಕಾರ ಆಡಳಿತ ವೈಫಲ್ಯದ ಬಗ್ಗೆ ಆತ್ಮಾವಲೋಕನ ಮಾಡಿಕೊಂಡು ರಾಜೀನಾಮೆ ನೀಡುವ ಅಗತ್ಯವಿದೆ ಎಂದರು.
ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಂತರಾಜು, ನಗರ ಘಟಕದ ಅಧ್ಯಕ್ಷ ಟಿ.ಎನ್.ಪ್ರಕಾಶ್, ಮುಖಂಡರಾದ ಶಿವಸ್ವಾಮಿ, ಎಂ.ಎನ್.ಸುರೇಶ್, ಮಣಕೀಕೆರೆ ರವಿಕುಮಾರ್, ಕಾಂತರಾಜು, ಬೋರ್‍ವೆಲ್ ಮಧುಸೂಧನ್, ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಶಶಿ ಹುಲಿಕುಂಟೆಮಠ್, ನಿಖಿಲ್ ರಾಜಣ್ಣ ಸೇರಿದಂತೆ
ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.