ತೋವಿನಕೆರೆ: ನೇಗಿಲ ಸಿದ್ಧ ರೈತ ಉತ್ಪಾದಕ ಕಂಪನಿ ಮೂಲಕ ಮುಂದಿನ ಋತುವಿನಲ್ಲಿ 300 ಟನ್ ಹುಣಸೆ ಹಣ್ಣನ್ನು ಬೆಳೆಗಾರರಿಂದ ನೇರವಾಗಿ ಖರೀದಿ ಮಾಡಲಾಗುವುದು ಎಂದು ಇಶಾ ಫೌಂಡೇಷನ್‌ನ ರೈತ ಉತ್ಪದಕ ಕಂಪನಿ ಸಂಯೋಜಕಿ ರಮಾ ಪ್ರಿಯಾ ಹೇಳಿದರು.
ಗ್ರಾಮದ ಚಂದ್ರನಾಥಸ್ವಾಮಿ ದೇವಾಲಯದ ಅವರಣದಲ್ಲಿ ಗುರುವಾರ ನಡೆದ ಇಶಾ ಫೌಂಡೇಷನ್ ಮಾರ್ಗದರ್ಶನದ ನೇಗಿಲ ಸಿದ್ಧ ರೈತ ಉತ್ಪಾದಕ ಕಂಪನಿ ಸಭೆಯಲ್ಲಿ ಅವರು ಮಾತನಾಡಿದರು.
ಕಳೆದ ವರ್ಷದಿಂದ ಈ ಭಾಗದಲ್ಲಿನ ಹುಣಸೆ ಬೆಳೆಗೆ ಮಾರುಕಟ್ಟೆ ಅವಕಾಶ ಸೇರಿದಂತೆ ವಿವಿಧ ಆಯಾಮಗಳಲ್ಲಿ ಸಮೀಕ್ಷೆ ಮಾಡಿ ವರದಿ ಸಿದ್ಧಪಡಿಸಿದ್ದೇವೆ. ಈ ಋತುವಿನಲ್ಲಿ ಸ್ವಲ್ಪ ಪ್ರಮಾಣದಲ್ಲಿ ಖರೀದಿಸಿ ಬೇರೆಡೆ ಕಳುಹಿಸಿದ್ದೇವೆ. ಅವರಿಂದ ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಸರಬರಾಜು ಮಾಡುವಂತೆ ಬೇಡಿಕೆ ಬಂದಿದೆ ಎಂದರು.
ಶೇಂಗಾದಿಂದ ಎಣ್ಣೆ ತೆಗೆದು ಬೆಂಗಳೂರಿನಲ್ಲಿ ಮಳಿಗೆ ಹಾಕಿ ಮಾರಾಟ ಮಾಡಿದ್ದೆವು. ಎಣ್ಣೆ ಬಗ್ಗೆ ಉತ್ತಮ ಪ್ರಶಂಸೆ ಬಂದಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆಯೂ ಚಿಂತಿಸುತ್ತೇವೆ. ಕೊಬ್ಬರಿ, ತೆಂಗು, ರಾಗಿ, ಕೊರಲೆ ಖರೀದಿಗೆ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಮಾಹಿತಿ ನೀಡಿದರು.
ಮಾ.ಇಂದುಬಾ, ಜಿಲ್ಲಾ ಸಂಯೋಜಕ ವಿಶ್ವನಾಥ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಿರಿಜಮ್ಮ, ನಿರ್ದೇಶಕರಾದ ದೊಡ್ಡಯ್ಯ, ಮರೇನಾಯ್ಕನಹಳ್ಳಿ ರಮೇಶ್, ಕುರಂಕೋಟೆ ಭಾನುಕುಮಾರ್, ನೇಗಲಾಳದ ಶೈಲಜಾ, ಕಲಾ, ತೋವಿನಕೆರೆ ಟಿ.ಡಿ. ಪ್ರಸನ್ನಕುಮಾರ್ ರಾಜೇಶ್, ಅಭಿಷೇಕ ಉಪಸ್ಥಿತರಿದ್ದರು.