ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್ ಟೀಕೆಯೇ ಮೋದಿ ಉದ್ಯೋಗ

ಗೊಲ್ಲರಿಗೆ ಎಸ್‌ಟಿ ಮೀಡಲಾತಿ: ಪರಮೇಶ್ವರ ಭರವಸೆ
Published 17 ಏಪ್ರಿಲ್ 2024, 6:23 IST
Last Updated 17 ಏಪ್ರಿಲ್ 2024, 6:23 IST
ಅಕ್ಷರ ಗಾತ್ರ

ತುಮಕೂರು: ರಾಹುಲ್ ಗಾಂಧಿ, ಕಾಂಗ್ರೆಸ್ ಪಕ್ಷ ಟೀಕಿಸುವುದನ್ನೇ ಪ್ರಧಾನಿ ನರೇಂದ್ರ ಮೋದಿ ಉದ್ಯೋಗ ಮಾಡಿಕೊಂಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಕಿಡಿ ಕಾರಿದರು.

ನಗರದಲ್ಲಿ ಮಂಗಳವಾರ ಗೊಲ್ಲ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡಿ, ‘ಮೋದಿ ಅವರು ಖಾಸಗಿ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ 80 ನಿಮಿಷ ಮಾತನಾಡಿದ್ದಾರೆ. ಈ ವೇಳೆ 38 ಬಾರಿ ರಾಹುಲ್ ಗಾಂಧಿ, 68 ಬಾರಿ ಕಾಂಗ್ರೆಸ್ ಪಕ್ಷದ ಹೆಸರು ಹೇಳಿದ್ದಾರೆ. ಬಡತನ, ರೈತರ ಬಗ್ಗೆ ಕಾಳಜಿಯ ಮಾತುಗಳೇ ಅವರ ಬಾಯಿಂದ ಬಂದಿಲ್ಲ. ಆಂತರ್ಯದಲ್ಲಿ ಏನಿದೆ ಎಂಬುದು ಇದರಿಂದ ಗೊತ್ತಾಗುತ್ತದೆ’ ಎಂದು ಟೀಕಿಸಿದರು.

ಭ್ರಷ್ಟಾಚಾರದ ಬಗ್ಗೆ ನಮಗೆ ಮೋದಿ ಹೇಳುತ್ತಾರೆ. ಕೋವಿಡ್ ಸಮಯದಲ್ಲಿ ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರ ₹8 ಬೆಲೆ ಬಾಳುವ ಮಾಸ್ಕ್‌ಗೆ ₹480 ನೀಡಿ ಖರೀದಿಸಿದೆ. ಕಳೆದ ಹತ್ತು ವರ್ಷಗಳ ಹಿಂದೆ ಉದ್ಯಮಿ ಅದಾನಿ ಕಂಪನಿ ವಹಿವಾಟು ₹25 ಸಾವಿರ ಕೋಟಿ ಇತ್ತು. ಈಗ ₹7.5 ಲಕ್ಷ ಕೋಟಿಗೆ ಏರಿದೆ. ಮೋದಿ ನೆರವಿನಿಂದಲೇ ದೇಶದ ಆಸ್ತಿ ಉದ್ಯಮಿಗಳ ಪಾಲಾಗಿದೆ. ಇದೆಲ್ಲ ಮಾಡಿದ್ದು ಯಾರು? ಇದೆಲ್ಲವನ್ನು ಕಾಂಗ್ರೆಸ್ ಮಾಡಿದೆಯೇ ಎಂದು ಪ್ರಶ್ನಿಸಿದರು.

ಟಾಟಾ, ಬಿರ್ಲಾ ಅವರು ಲಕ್ಷಾಂತರ ಜನರಿಗೆ ಉದ್ಯೋಗ ಕೊಟ್ಟರು. ಅವರ ಹೆಸರು ಹೇಳಿಕೊಂಡು ಹಲವರು ದೀಪ ಹಚ್ಚುತ್ತಾರೆ. ಆದರೆ ನಿಮ್ಮ ಹೆಸರು ಹೇಳುವಂತಹ ಒಂದೇಒಂದು ಉದ್ಯೋಗ ಸೃಷ್ಟಿಸುವ ಕೆಲಸ ಮಾಡಿದ್ದರೆ ಹೇಳಿ? ಕಳೆದ ಹತ್ತು ವರ್ಷಗಳ ಆಡಳಿತದಲ್ಲಿ ದೇಶದ ಆರ್ಥಿಕತೆ ಬುಡಮೇಲು ಮಾಡಿದ್ದೀರಿ ಎಂದು ಹರಿಹಾಯ್ದರು.

ಕಾಂಗ್ರೆಸ್ ಪಕ್ಷ ಎಂದೂ ಸುಳ್ಳು ಹೇಳಿ, ಮೋಸ ಮಾಡಿಲ್ಲ. ನಮ್ಮ ಸಿದ್ಧಾಂತ ಬದಲಾಗಿಲ್ಲ. ಬಡವರು, ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರ ಪರವಾಗಿ ಇದ್ದೇವೆ ಎಂದು ಎದೆತಟ್ಟಿಕೊಂಡು ಹೇಳುತ್ತೇವೆ ಎಂದರು.

ಎಸ್‌ಟಿ ಮೀಸಲಾತಿ: ಗೊಲ್ಲ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಮೀಸಲಾತಿ ಕೊಡಿಸಲು ಕಾಂಗ್ರೆಸ್ ಸರ್ಕಾರ ಪ್ರಯತ್ನಿಸಲಿದೆ. ಸಮುದಾಯದ ಐವರನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷರನ್ನಾಗಿ ಪಕ್ಷ ಮಾಡಿದೆ. ಆ ಮೂಲಕ ರಾಜಕೀಯ ಅಧಿಕಾರ ನೀಡಿದೆ. ಮುಂದೆಯೂ ಸಹ ರಾಜಕೀಯ ಅವಕಾಶಗಳಿಗಾಗಿ ಗೊಲ್ಲ ಸಮುದಾಯ ಕಾಂಗ್ರೆಸ್ ಜತೆ ಕೈಜೋಡಿಸುವಂತೆ ಮನವಿ ಮಾಡಿದರು.

ಸಹಕಾರ ಸಚಿವ ಕೆ.ಎನ್.ರಾಜಣ್ಣ, ‘ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯ ಎಡಗೈ, ಯಾದವ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಒತ್ತು ನೀಡಲಾಗುವುದು. ಬಡವರ ಕೈ ಹಿಡಿಯುವ ಪಕ್ಷ ಕಾಂಗ್ರೆಸ್. ಅಂತಹ ಪಕ್ಷವನ್ನು ಹಿಂದುಳಿದ ವರ್ಗಕ್ಕೆ ಸೇರಿದ ಗೊಲ್ಲ ಸಮುದಾಯ ಬೆಂಬಲಿಸುವ ಮೂಲಕ ತಾವು ಸಹ ರಾಜಕೀಯ ಅಧಿಕಾರ ಪಡೆಯಲು ಮುಂದಾಗಬೇಕು’ ಎಂದು ಹೇಳಿದರು.

ಸಮುದಾಯದ ಮುಖಂಡ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ್‌ಗೌಡ, ರಾಜ್ಯ ಕೃಷಿಕ ಸಮಾಜದ ಕಾರ್ಯಾಧ್ಯಕ್ಷ ಪಾಪಣ್ಣ, ಕೆಪಿಸಿಸಿ ಉಪಾಧ್ಯಕ್ಷ ಎಂ.ಸಿ.ವೇಣುಗೋಪಾಲ್, ಮಾಜಿ ಶಾಸಕ ಡಿ.ಸಿ.ಗೌರಿಶಂಕರ್, ಗೊಲ್ಲ ಸಮುದಾಯದ ಮುಖಂಡರಾದ ಜಿ.ಜೆ.ರಾಜಣ್ಣ, ಪ್ರೇಮ, ಮಹಾಲಿಂಗಪ್ಪ, ಗಂಗಾಧರ್, ಚಿನ್ನಪ್ಪ, ಷಣ್ಮುಖಪ್ಪ, ಟಿ.ಸಿ.ರಾಮಯ್ಯ, ಕಾಂಗ್ರೆಸ್ ಮುಖಂಡರಾದ ಎನ್.ಗೋವಿಂದರಾಜು, ಪುಟ್ಟರಾಜು, ಸಿದ್ದಲಿಂಗೇಗೌಡ, ಪಾಲನೇತ್ರಯ್ಯ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT