ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಳಿಮೊಟ್ಟೆ, ತರಕಾರಿ ಹಣ ಬಿಡುಗಡೆಗೊಳಿಸಿ

ಬೇಡಿಕೆ ಈಡೇರಿಕೆಗೆ ಒತ್ತಾಯ, ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ನೇತೃತ್ವದಲ್ಲಿ ರ‍್ಯಾಲಿ
Last Updated 10 ಜುಲೈ 2019, 13:56 IST
ಅಕ್ಷರ ಗಾತ್ರ

ತುಮಕೂರು: ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ-ಯುಕೆಜಿ ಪ್ರಾರಂಭ, ಬಾಕಿ ಗೌರವಧನ ಬಿಡುಗಡೆ, ಕೋಳಿ ಮೊಟ್ಟೆ, ತರಕಾರಿ ಹಣ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ (ಸಿಐಟಿಯು ಸಂಯೋಜಿತ) ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಬುಧವಾರ ನಗರದಲ್ಲಿ ಪ್ರತಿಭಟಿಸಿದರು.

ಬಿಜಿಎಸ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ರ್‍ಯಾಲಿ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಜಿ.ಕಮಲಾ ಮಾತನಾಡಿ, ‘ರಾಜ್ಯದ ಹಲವು ಕಡೆ ಮೂರ‍್ನಾಲ್ಕು ತಿಂಗಳಾದರೂಗೌರವಧನ ನೀಡಿಲ್ಲ. ಪ್ರತಿ ತಿಂಗಳೂ ಗೌರವಧನ ಪಾವತಿಯಾಗುವಂತೆ ನೋಡಿಕೊಳ್ಳಬೇಕು’ ಎಂದು ಆಗ್ರಹಿಸಿದರು.

ಅಂಗನವಾಡಿ ನೌಕರರಿಗೆ ಆರೋಗ್ಯ ಕ್ಷೀಣಿಸಿದಾಗ ಅಥವಾ ಮರಣ ಹೊಂದಿದಾಗ ಬರುವ ಹಣ ಬಿಡುಗಡೆ ಆಗುತ್ತಿಲ್ಲ. ನಿವೃತ್ತಿಯಾದ ನೌಕರರಿಗೆ ಯಾವ ಸೌಲಭ್ಯವೂ ಇಲ್ಲ. ಇಂತಹ ಸಂದರ್ಭದಲ್ಲಿಯೂ ಅಂಗನವಾಡಿ ನೌಕರರು ದುಡಿಯುತ್ತಿದ್ದಾರೆ. ಅಂಗನವಾಡಿಗಳಲ್ಲಿ ಆಹಾರ ತಯಾರಿಕೆಗೆ ಸಕಾಲಕ್ಕೆ ಅಡುಗೆ ಅನಿಲ (ಗ್ಯಾಸ್) ವಿತರಣೆಯಾಗುತ್ತಿಲ್ಲ, ಈ ಮಧ್ಯೆ ಅಂಗನವಾಡಿ ನೌಕರರ ಮೇಲೆ ಶಿಸ್ತು ಕ್ರಮ ನಡೆಯುತ್ತಲೇ ಇದೆ. ಗೌರವಧನ ಆಧಾರದಲ್ಲಿ ದುಡಿಯುವ ನೌಕರರನ್ನು ಶೋಷಿಸಬಾರದು ಎಂದು ಮನವಿ ಮಾಡಿದರು.

ಅಂಗನವಾಡಿ ನೌಕರರಿಗೆ ಶೇ 50ರಷ್ಟು ಮುಂಬಡ್ತಿ ಕೊಡಬೇಕು ಎಂಬ ಕೇಂದ್ರ ಸರ್ಕಾರದ ಆದೇಶವಿದೆ. ಆದರೆ, ಈ ನಿಯಮವನ್ನು ರಾಜ್ಯ ಸರ್ಕಾರ ಸರಿಯಾಗಿ ಪಾಲಿಸುತ್ತಿಲ್ಲ ಅನಾರೋಗ್ಯಕ್ಕೀಡಾದಾಗ ಪರ್ಯಾಯ ವ್ಯವಸ್ಥೆ ಮಾಡಬೇಕು. ವರ್ಗಾವಣೆ, ಮುಂಬಡ್ತಿ ಸಿಗಬೇಕು ಎಂದು ಆಗ್ರಹಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಗುಲ್ಜಾರ್ ಭಾನು, ‘2016ರ ಏಪ್ರಿಲ್‌ನಿಂದ ಆಯ್ಕೆಯಾದ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಕಾಯಂ ನಿವೃತ್ತಿ ಸೌಲಭ್ಯದ ವ್ಯಾಪ್ತಿಗೊಳಪಡಿಸಬೇಕು. ಈಗಾಗಲೇ ನಿವೃತ್ತಿ ಆದವರಿಗೆ ಕನಿಷ್ಠ ₹ 3 ‌ಸಾವಿರ ಪಿಂಚಣಿ ಮತ್ತು ಇಡಗಂಟು ತಕ್ಷಣ ಬಿಡುಗಡೆ ಮಾಡಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಮಾತೃಪೂರ್ಣ ಯಶಸ್ಸಿಗೆ ಹೆಚ್ಚುವರಿ ಸಹಾಯಕಿಯರನ್ನು ನೇಮಿಸಬೇಕು’ ಎಂದು ಆಗ್ರಹಿಸಿದರು.

ಸಂಘದ ಖಜಾಂಚಿ ಬಿ.ಎಸ್.ಅನಸೂಯ, ಅಂಗನವಾಡಿ ನೌಕರರು ಇಲಾಖೆ ಕೆಲಸಗಳಿಗೆ ಓಡಾಡುವಾಗ ಆಗುವ ಅಪಘಾತಗಳಿಗೆ ಪರಿಹಾರ ನೀಡಬೇಕು, ಮಾತೃಪೂರ್ಣ ಯೋಜನೆಗೆ ಬೇಕಾಗುವ ಅಗತ್ಯ ಪಾತ್ರೆಗಳು, ಡಬಲ್ ಸಿಲಿಂಡರ್‌ಗಳು ಮತ್ತು ದಾಖಲಾತಿ ಪುಸ್ತಕಗಳನ್ನು ತುರ್ತಾಗಿ ಒದಗಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಾವಿರಾರು ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT